ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾ ಸರ್ಕಾರಿ ಪ್ರೌಢಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ 13 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮೂರನೇ ಹಂತದ ಪರೀಕ್ಷೆಯಿಂದ ವಂಚಿತರಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ತೋರಿದ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಬಗ್ಗೆ ಎರಡು ದಿನಗಳ ಹಿಂದೆಯೂ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ದೂರು ಸಲ್ಲಿಸಲಾಗಿತ್ತು. ಆದರೂ, ಕ್ರಮ ಜರುಗಿಸದ ಕಾರಣ ವಿದ್ಯಾರ್ಥಿಗಳೊಂದಿಗೆ ಇಲ್ಲಿಗೆ ಬಂದು ಎರಡನೇ ಸಲ ದೂರು ನೀಡುತ್ತಿದ್ದೇವೆ. ಒಂದುವೇಳೆ ಶೀಘ್ರ ಕ್ರಮ ಜರುಗಿಸದಿದ್ದರೆ ಕಚೇರಿ ಎದುರು ಧರಣಿ ನಡೆಸಲಾಗುವುದು. ಮುಖ್ಯ ಶಿಕ್ಷಕರ ಬೇಜವಾಬ್ದಾರಿಯಿಂದ ದಲಿತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದ್ದರೂ ತಾವು ಮೌನ ವಹಿಸಿರುವುದು ಏಕೆ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
2023-2024 ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಿಟ್ಟಾ ಸರ್ಕಾರಿ ಪ್ರೌಢಶಾಲೆಯ 35 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅವರಲ್ಲಿ 13 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇದ್ದಾರೆ. ಈ ವಿದ್ಯಾರ್ಥಿಗಳಿಗೆ ಮೂರನೇ ಹಂತದ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೇ ಯಾವುದೇ ರೀತಿಯ ಶುಲ್ಕ ಪಡೆದುಕೊಳ್ಳದೇ ಪರೀಕ್ಷೆಯ ಅರ್ಜಿ ಭರ್ತಿ ಮಾಡಿ ಕಳುಹಿಸಬೇಕು ಎಂಬ ನಿಯಮವಿದ್ದರೂ ಅದನ್ನು ಪಾಲಿಸಲಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಸಿಕ್ಕಿಲ್ಲ ಎಂದು ದೂರಿದರು.
ಪರೀಕ್ಷೆ ಹಾಗೂ ಶಾಲೆಯಲ್ಲಿನ ಕಾರ್ಯ ಚಟುವಟಿಕೆಗಳ ಕುರಿತಾಗಿ ಮುಖ್ಯ ಶಿಕ್ಷಕರು ಕಾಲಕಾಲಕ್ಕೆ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ. ಆದರೂ ಬೇಕೆಂತಲೇ ನಿಷ್ಕಾಳಜಿ ತೋರಲಾಗಿದೆ. ವಿದ್ಯಾರ್ಥಿಗಳು ಕೆಲ ಸಲ ಶಾಲೆಗೆ ಹೋಗಿ ಈ ಬಗ್ಗೆ ವಿಚಾರಿಸಿದ್ದರೂ ನಂತರ ಬನ್ನಿ ಎಂದು ಹೇಳಿ ಕಳುಹಿಸಲಾಗಿದೆ. ಪರೀಕ್ಷೆಯ ಹಾಲ್ ಟಿಕೆಟ್ ಬಾರದಿದ್ದಾಗ ವಿದ್ಯಾರ್ಥಿಗಳ ಅರ್ಜಿ ಭರ್ತಿ ಮಾಡಿ ಕಳುಹಿಸದಿರುವುದು ಬೆಳಕಿಗೆ ಬಂದಿದೆ. ಜಾತಿ ಆಧಾರದಲ್ಲಿ ತಾರತಮ್ಯ ನಡೆಸಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಮುಖ್ಯ ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಮಹಾದೇವ ಗಾಯಕವಾಡ, ಮುಖಂಡ ಸಿಕಂದರ ಶಿಂಧೆ, ವಿದ್ಯಾರ್ಥಿಗಳಾದ ರುಕ್ಮಿಣಿ, ನವನಾಥ, ಪ್ರೇಮ, ಐಶ್ವರ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.