ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಸಬಲೀಕರಣಕ್ಕೆ ಆದ್ಯತೆ ಅಗತ್ಯ’-ನ್ಯಾಯಮೂರ್ತಿ ಯು.ಯು.ಲಲಿತ್

ಕಾನೂನು ಸೇವಾ ಪ್ರಾಧಿಕಾರದ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾ. ಯು.ಯು. ಲಲಿತ್
Last Updated 24 ಅಕ್ಟೋಬರ್ 2021, 16:41 IST
ಅಕ್ಷರ ಗಾತ್ರ

ಕಲಬುರಗಿ: ‘ಮಹಿಳಾ ಸಬಲೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವರು ಮುಖ್ಯವಾಹಿನಿಗೆ ಬರುವಂತೆ ಪ್ರೋತ್ಸಾಹ ನೀಡಬೇಕು’ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಎರಡು ಸಂಗತಿಗಳಿಗೆ ಆದ್ಯತೆ ನೀಡಬೇಕಾಗಿದೆ. ಮೊದಲನೇಯದು ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಅವರ ಎಲ್ಲ ಸಾಮರ್ಥ್ಯವನ್ನು ಹೊರಹಾಕುವ ಅವಕಾಶವನ್ನ ನೀಡುವ ವಾತಾವರಣವನ್ನು ಸೃಷ್ಟಿಸುವುದು. ಎರಡನೇಯದು ಮಹಿಳಾ ಸಬಲೀಕರಣ. ರಾಜಸ್ಥಾನದಂತಹ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳಿಲ್ಲದ ರಾಜ್ಯದಲ್ಲಿಯೂ ಮಹಿಳೆಯರು ಉತ್ತಮ ಶಿಕ್ಷಣ ಪಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇತ್ತೀಚೆಗೆ ರಾಜ್ಯದಲ್ಲಿ ಹೊಸದಾಗಿ 190 ಯುವ ನ್ಯಾಯಾಧೀಶರು ತರಬೇತಿ ಪಡೆಯುವಾಗ ಅವರೊಂದಿಗೆ ಸಂವಾದ ನಡೆಸಲು ಹೋಗಿದ್ದೆ. ಅಲ್ಲಿ 126 ಜನ ಮಹಿಳೆಯರೇ ಇದ್ದರು. ಉತ್ತಮ ಅವಕಾಶ ಸಿಕ್ಕರೆ ಹೆಣ್ಣುಮಕ್ಕಳು ಮುಖ್ಯವಾಹಿನಿಗೆ ಬರುವುದರಲ್ಲಿ ಸಂಶಯವೇ ಇಲ್ಲ’ ಎಂದರು.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ದಾಖಲೆ ಬರೆದಿದೆ ಎಂದು ನ್ಯಾಯಮೂರ್ತಿ ಅವರು ಶ್ಲಾಘಿಸಿದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಾತನಾಡಿ, ‘ಕೋವಿಡ್‌–19 ಸೋಂಕಿನ ಎರಡನೇ ಅಲೆಯು ಜನತೆಯನ್ನು ಸಾಕಷ್ಟು ಸಂಕಟಕ್ಕೀಡು ಮಾಡಿದ್ದು, ನ್ಯಾಯವನ್ನು ಪಡೆಯಲು ಬೇಕಾದ ಸಂಪನ್ಮೂಲ ಅವರ ಬಳಿ ಇಲ್ಲವಾಗಿದೆ. ಹೀಗಾಗಿ, ಸಮಾಜದಲ್ಲಿ ಅತ್ಯಂತ ಹಿಂದುಳಿದಿರುವ ಜನತೆಗೂ ಕಾನೂನು ಸೇವಾ ಪ್ರಾಧಿಕಾರವು ನೆರವಿಗೆ ಬರಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು’ ಎಂದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ ಮಾತನಾಡಿ, ‘28 ಜಿಲ್ಲೆಗಳಲ್ಲಿ ಲೋಕ ಅದಾಲತ್ ಮೂಲಕ ಪ್ರಕರಣಗಳ ಸಂಧಾನ ನಡೆಸಿ ₹ 9.67 ಕೋಟಿ ಪರಿಹಾರವನ್ನು ಕೊಡಿಸಿ ಮುಕ್ತಾಯಗೊಳಿಸಲಾಗಿದೆ. ಒಟ್ಟಾರೆ 8.61 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಹೇಳಿದರು.

ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌. ದಿನೇಶಕುಮಾರ್, ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್, ಆರ್‌. ದೇವದಾಸ್‌ ಹಾಗೂ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವೇದಿಕೆಯಲ್ಲಿದ್ದರು.

ಯುವ ವಕೀಲ ವಿಘ್ನೇಶ್ ಅವರೇಕಾಳ ಹೊರತಂದಿರುವ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ–ವರ್ಣಚಿತ್ರದ ಕಿರು ಕಾದಂಬರಿಯ 2ನೇ ಆವೃತ್ತಿಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕಲಬುರಗಿ ಪೀಠದ ಸರ್ಕಾರಿ ವಕೀಲರಾದ ಅನುರಾಧಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಂಜಾರ ಸಮುದಾಯದ ಮಹಿಳೆಯರು ಹಾಡುವ ಮೂಲಕ ಗಣ್ಯರನ್ನು ವೇದಿಕೆಗೆ ಕರೆತಂದರು.

ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಂಕರೇಗೌಡ, ಕಲಬುರಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ಗಳಾದ ವಿಜಯ್ ಮತ್ತು ಶ್ರೀನಿವಾಸ್ ಸುವರ್ಣ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಚೌಗುಲೆ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು. ಚಂದ್ರಾ ನಾಯಕ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿ.ಪಂ.ಸಿಇಓ ಡಾ. ದಿಲೀಶ್ ಶಶಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಇದ್ದರು.

ಬಂಜಾರ ಮಹಿಳೆಯರ ಭೇಟಿ ಮಾಡಿದ ನ್ಯಾ.ಲಲಿತ್

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಕೆಳಗಿಳಿದು ಬಂದು ಸಭಿಕರ ಸಾಲಿನಲ್ಲಿ ಬಂಜಾರ ಪೋಷಾಕು ಧರಿಸಿ ಕುಳಿತಿದ್ದ ಮಹಿಳೆಯರನ್ನು ಭೇಟಿ ಮಾಡಿದರು. ಅವರ ಆಚಾರ, ವಿಚಾರಗಳನ್ನು ತಿಳಿದುಕೊಂಡರು.

ಕಾರ್ಯಕ್ರಮದ ವೇದಿಕೆಗೆ ಬರುವ ಸಂದರ್ಭದಲ್ಲಿ ಬಂಜಾರ ಮಹಿಳೆಯರು ಹಾಡು ಹಾಡುತ್ತಾ ನ್ಯಾಯಮೂರ್ತಿಗಳನ್ನು ಸ್ವಾಗತಿಸಿದರು.

ತಮ್ಮ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ನ್ಯಾ. ಲಲಿತ್ ಅವರು, ‘ಚಿತ್ತೋರ್, ಮೇವಾರ ಭಾಗಗಳಲ್ಲಿ ಹೆಚ್ಚಾಗಿದ್ದ ಬಂಜಾರ ಸಮುದಾಯದವರು ರಾಣಾ ಪ್ರತಾಪಸಿಂಹ ಮತ್ತು ಮೊಘಲರ ಮಧ್ಯೆ ಯುದ್ಧ ನಡೆದು ರಾಜಸ್ಥಾನದ ಭಾಗಗಳನ್ನು ಗೆದ್ದ ಬಳಿಕ ಅಲ್ಲಿ ವಾಸಿಸದೇ ಬೇರೆ ಕಡೆ ವಲಸೆ ಬಂದರು. ಅವರೇ ಬಂಜಾರರು ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT