ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳತೆ ತಪ್ಪಿದ ಟೇಲರ್‌ಗಳ ಬದುಕು

ಲಾಕ್‌ಡೌನ್ ಕಾರಣ ಅಂಗಡಿಗೆ ಬಾರದ ಜನ; ಆದಾಯವಿಲ್ಲದೆ ಪರದಾಟ
Last Updated 18 ಮೇ 2021, 2:14 IST
ಅಕ್ಷರ ಗಾತ್ರ

ಯಡ್ರಾಮಿ: ಮದುವೆ, ಶಾಲೆಗಳ ಆರಂಭದ ನಿರೀಕ್ಷೆ, ಹಬ್ಬಗಳ ಕಾರಣದಿಂದ ಪುರಸೊತ್ತಿಲ್ಲದೇ ದುಡಿಯುತ್ತಿದ್ದ ಕೈಗಳು ಈಗ ಉಳಿದಿದ್ದ ತುಂಡು ಬಟ್ಟೆಗಳನ್ನೇ ಜೋಡಿಸುತ್ತ ದಿನ ಕಳೆಯುವಂತಾಗಿದೆ. ಮದುಮಕ್ಕಳ, ವಿದ್ಯಾರ್ಥಿಗಳ ಹೊಸಬಟ್ಟೆಗಳಿಂದಲೇ ತುಂಬಿರುತ್ತಿದ್ದ ಅಂಗಡಿಯಲ್ಲಿ, ಹೊಲಿಗೆ ಯಂತ್ರದ ಚಕ್ರ ತಿರುಗದೇ ನಿಂತಿದೆ.

ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಕಾರಣ ಪಟ್ಟಣದ ಟೇಲರ್‌ಗಳ ಬದುಕು ಅತಂತ್ರಕ್ಕೆ ಸಿಲುಕಿದೆ. ಮೇ ತಿಂಗಳಲ್ಲಿ ಬಟ್ಟೆ ಹೊಲಿಗೆಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಕೊರೊನಾ ಕಾರಣ ಈಗ ಯಾರು ಬರುತ್ತಿಲ್ಲ. ಹೀಗಾಗಿ ದುಡಿಯುವ ಕೈಗೆ ಕೆಲಸವಿಲ್ಲದಂತಾಯಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಭಾವಸಾರಕ್ಷತ್ರಿಯ, ಸಿಂಪಿ, ಮುಸ್ಲಿಂ ಸಮಾಜದ ಹಲವರು ತಮ್ಮ ಜೀವನಾಧಾರಕ್ಕಾಗಿ ಬಟ್ಟೆ ಹೊಲಿಯುವುದನ್ನು ಅವಲಂಬಿಸಿದ್ದಾರೆ. ಈಗ ಈ ವೃತ್ತಿಯನ್ನು ಅವಲಂಬಿಸಿರುವ ಬಹುತೇಕರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆಲವರು ಬಾಡಿಗೆ ಕಟ್ಟಡದಲ್ಲಿ, ಕೆಲವರು ಬಟ್ಟೆ ಅಂಗಡಿಯ ಕಟ್ಟೆಯ ಮೇಲೆ, ಇನ್ನೂ ಕೆಲವರು ಮನೆಯಲ್ಲಿಯೇ ಈ ವೃತ್ತಿಯನ್ನು ನಡೆಸುತ್ತಿದ್ದಾರೆ. ಕೈ ತುಂಬಾ ಕೆಲಸವಿರುವ ಮಳೆಗಾಲಕ್ಕೂ ಮುನ್ನಾ ನಾಲ್ಕು ಕಾಸು ಸಂಪಾದನೆ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಕೊರೊನಾ ವೈರಸ್‌ನಿಂದ ಮದುವೆ ಮತ್ತಿತರ ಶುಭ ಸಮಾರಂಭಗಳು ರದ್ದಾಗಿದ್ದು, ಬಟ್ಟೆ ಹೊಲಿಸಲು ಯಾರು ಬರದಿರುವುದರಿಂದ ಇವರಿಗೆ ದುಡಿಮೆಯೇ ಇಲ್ಲವಾಗಿದೆ. ಮಹಿಳೆಯರು ಮನೆಯಲ್ಲಿಯೇ ಹೊಲಿಗೆ ಮೂಲಕ ಮನೆಯ ಖರ್ಚು ಹಾಗೂ ಕೆಲವರು ಇದರಲ್ಲಿಯೇ ಜೀವನ ನಿಭಾಯಿಸುತ್ತಿದ್ದಾರೆ.

ಒಂದು ವೇಳೆ ಯಾರಾದರೂ ಮನೆಗೆ ಬಟ್ಟೆ ಹೊಲಿಯಲು ತಂದು ಕೊಟ್ಟರೂ ಅದನ್ನು ಹೊಲಿಯಲು ಬೇಕಾಗುವ ಮ್ಯಾಚಿಂಗ್ ದಾರ, ಕ್ಯಾನ್ ವಾಸ್, ಗುಂಡಿ (ಬಟನ್) ಜಿಪ್, ರವಿಕೆ (ಬ್ಲೌಸ್)ಗೆ ಲೈನಿಂಗ್ ಮತ್ತಿತರ ಸಾಮಗ್ರಿಗಳು ಅಂಗಡಿ ಬಾಗಿಲು ಹಾಕಿರುವುದರಿಂದ ಮಾರುಕಟ್ಟೆಯಲ್ಲಿ ಲಭಿಸುತ್ತಿಲ್ಲ ಎಂಬುದು ಟೇಲರಿಂಗ್ ವೃತ್ತಿ ಅವಲಂಬಿಸಿರುವವರ ಅಳಲು.

‘20 ವರ್ಷಗಳಿಂದ ಟೇಲರ್ ವೃತ್ತಿ ನಂಬಿ ಬದುಕು ಸಾಗಿಸುತ್ತಿದ್ದೇನೆ. ಲಾಕ್‌ಡೌನ್‌ನಿಂದ ನಮ್ಮಂಥ ಬಡವರಿಗೆ ಭಾರಿ ಕಷ್ಟವಾಗುತ್ತಿದೆ. ಸರ್ಕಾರ ನಮಗೆ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಟೇಲರ್‌ಗಳ ಸಂಘದ ತಾಲ್ಲೂಕು ಘಟಕದ
ಅಧ್ಯಕ್ಷ ಜಿ.ಎಂ.ನಬಿ.

‘ಲಾಕ್‌ಡೌನ್ ಜಾರಿಯಾದ ದಿನದಿಂದಲೂ ಇಲ್ಲಿಯವರೆಗೂ ಯಾರೂ ಬಟ್ಟೆ ಹೊಲೆಸಿಕೊಳ್ಳು ಬಂದಿಲ್ಲ. ಬಟ್ಟೆ ಹೊಲಿದು ಸಿದ್ಧಪಡಿಸಿದ್ದರೂ ಅವುಗಳನ್ನು ಕೊಂಡೊಯ್ಯಲು ಕೂಡಾ ಬಂದಿಲ್ಲ. ಇದರಿಂದಾಗಿ ಆದಾಯವಿಲ್ಲದೆ ಜೀವನ ನಿರ್ವಹಣೆಯೆ ಕಷ್ಟವಾಗಿದೆ’ ಎಂದು ನೋವು ತೋಡಿಕೊಂಡರು ಟೇಲರ್ ರೇವಣಸಿದ್ಧ ಶಾಹಿ.

ಸಂಘಟಿತ ವಲಯದ ಕಾರ್ಮಿಕರಿಗೆ ನೀಡಿರುವ ಸೌಲಭ್ಯವನ್ನು ಟೇಲರ್‌ಗಳಿಗೆ ಸರ್ಕಾರ ನೀಡಬೇಕೆಂಬುದು ವೃತ್ತಿ ಅವಲಂಬಿತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT