ಮಂಗಳವಾರ, ಜನವರಿ 25, 2022
28 °C

ಸಾವಿತ್ರಿಬಾಯಿ ಫುಲೆ ಜಯಂತಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಶಿಕ್ಷಕಿಯರು ಸಾವಿತ್ರಿಬಾಯಿ ಫುಲೆ ಅವರ ಕೆಲಸಗಳಿಂದ ಪ್ರೇರಣೆ ಪಡೆಯಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್ ಹೇಳಿದರು.

ವಚನ ಸಂಜೀವಿನಿ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆಯಲ್ಲಿ ಸದ್ಯ ಶೇ 50ಕ್ಕಿಂತ ಹೆಚ್ಚು ಶಿಕ್ಷಕಿಯರು ಇದ್ದಾರೆ. ಹೆಣ್ಣುಮಕ್ಕಳು ಶಿಕ್ಷಿತರಾಗಬೇಕು ಎಂಬ ಸಾವಿತ್ರಿಬಾಯಿ ಫುಲೆ ಅವರ ಕನಸು ಈಗ ನನಸಾಗಿದೆ’ ಎಂದರು.

‘ಕಲಬುರಗಿ ವಿಭಾಗದ ಸರ್ಕಾರಿ ಶಾಲೆಗಳಲ್ಲಿ 14 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಅದರಲ್ಲಿ ಶೇ 90ಕ್ಕಿಂತ ಹೆಚ್ಚು ಮಕ್ಕಳು ತುಳಿತಕ್ಕೊಳಗಾದ ಸಮಾಜದಿಂದ ಬಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿಯರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ, ಜವಾಬ್ದಾರಿಯಿಂದ ಮಾಡಿದರೆ ಫುಲೆ ಅವರ ಕನಸು ನನಸು ಮಾಡಬಹುದು’ ಎಂದು ಹೇಳಿದರು.

‘ಸಾವಿತ್ರಿಬಾಯಿ ಫುಲೆ ಅವರಿಗೆ ಸಾಕಷ್ಟು ಅಪಮಾನಗಳಾದವು. ಸಮಾಜದಿಂದ ಅವರ ಕುಟುಂಬವನ್ನು ಬಹಿಷ್ಕರಿಸಲಾಯಿತು. ಅವುಗಳನ್ನು ಫುಲೆ ದಂಪತಿ ದಿಟ್ಟವಾಗಿ ಎದುರಿಸಿದರು. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಅವರು ನಂಬಿದ್ದರು’ ಎಂದರು.

ಮಹಾಗಾಂವ ಸರ್ಕರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಶಾಂತಾ ಅಷ್ಠಗಿ ಉಪನ್ಯಾಸ ನೀಡಿ, ಹೆಣ್ಣುಮಕ್ಕಳ ನಾಲಿಗೆಯ ಮೇಲೆ ಅಕ್ಷರ ಬರೆದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಅವರ ಜಯಂತಿಯನ್ನು ಕಳೆದ ವರ್ಷದಿಂದ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಪತಿ, ಪತ್ನಿಯರಲ್ಲಿ ಸಾಮಾನ್ಯವಾಗಿ ವೈಚಾರಿಕ ಭಿನ್ನತೆ ಇರುತ್ತದೆ. ಆದರೆ, ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿ ವೈಚಾರಿಕ, ವೈಜ್ಞಾನಿಕವಾಗಿ ಒಂದೇ ನೆಲೆಯಲ್ಲಿ ನಡೆದು ಸಮಾಜ ಸುಧಾರಣೆಗೆ ಶ್ರಮಿಸಿದರು’ ಎಂದರು.

‘ಬಾಲ್ಯವಿವಾಹ ಆಗಿದ್ದ ಸಾವಿತ್ರಿಬಾಯಿ ಅವರಿಗೆ ಹೆಣ್ಣುಮಕ್ಕಳ ನೋವಿನ ಅರಿವಿತ್ತು. ಮಹಿಳೆಯರು, ಪರಿಶಿಷ್ಟ ಜಾತಿಯವರಿಗೆ ಶಿಕ್ಷಣ ನೀಡಿದರೆ ಮಾತ್ರ ಸಮಾಜದಲ್ಲಿ ಮೌಢ್ಯವನ್ನು ತೊಲಗಿಸಬಹುದು ಎಂಬುದನ್ನು ನಂಬಿದ್ದರು’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ, ಶಿಕ್ಷರು ಸದಾ ಬೋಧನೆ ಸೇರಿ ಕಚೇರಿಯ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅದಕ್ಕೆ ಜಯಂತಿ ಕಾರ್ಯಕ್ರಮದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ ಇದ್ದರು.  ಗಾಯಕರಾದ ರಮೇಶ ಕುಲಕರ್ಣಿ, ಶಂಕ್ರಪ್ಪ ಬಿ.ಹೂಗಾರ ಅವರು ಗಾಯನ ಪ್ರಸ್ತುತಪಡಿಸಿದರು. ಜಡೇಶ ಹೂಗಾರ, ಡಾ.ರಾಘವೇಂದ್ರ ಕುಲಕರ್ಣಿ ತಬಲಾ, ರೇವಯ್ಯ ವಸ್ತ್ರದಮಠ ಹಾರ್ಮೊನಿಯಂ ಸಾಥ್ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.