ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ಅವಶ್ಯ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಡಾ.ರಾಜಾ ಪಿ ಅಭಿಮತ; 25 ಶಿಕ್ಷಕರಿಗೆ ಸನ್ಮಾನ
Last Updated 5 ಸೆಪ್ಟೆಂಬರ್ 2020, 14:56 IST
ಅಕ್ಷರ ಗಾತ್ರ

ಕಲಬುರ್ಗಿ: ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕಿದ್ದರೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಹೇಳಿದರು.

ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗಿದ 2020–21ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಸೇವೆ ಅನನ್ಯವಾಗಿದೆ. ಸಮಾಜದ ಒಳಿತಿಗೆ ನಾವೆಲ್ಲರೂ ಕೈ ಜೋಡಿಸಬೇಕು. ಪ್ರಶಸ್ತಿ ಪಡೆದುಕೊಂಡ ಶಿಕ್ಷಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆಗೆ ಮಕ್ಕಳಿಗೆ ಉತ್ತಮ ಬೋಧನೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ’ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯಾ ಗುತ್ತೇದಾರ ಮಾತನಾಡಿ, ಕೋವಿಡ್–19 ತುರ್ತು ಸಂದರ್ಭದಲ್ಲಿಯೂ ಶಿಕ್ಷಕರು ತಮ್ಮ ಸೇವೆ ಮುಂದುವರಿಸಿರುವುದರಿಂದ ಸರ್ಕಾರ ಇವರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಡಿಡಿಪಿಐ ಎಸ್.ಪಿ. ಬಾಡಗಂಡಿ ಮಾತನಾಡಿ, ಜಿಲ್ಲೆಯಲ್ಲಿ 25 ಶಿಕ್ಷಕರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಜೊತೆಗೆ ಅಫಜಲಪೂರ ತಾಲ್ಲೂಕಿನ ಬಂದರವಾಡ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ ಡೆಂಗಿ ಅವರು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದು, ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ (ರಾಜು) ಲೇಂಗಟಿ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇಶಮುಖ ಎಚ್.ಎಸ್., ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜು ದೊಡ್ಡಮನಿ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ರಮೇಶ ಜಾನಕರ ಇದ್ದರು. ಡಿಡಿಪಿಐ ಕಚೇರಿಯ ಸಹಾಯಕ ವಿಜಯ ಕುಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT