ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ದಾಟಿದ ಅಂಜನಾದ್ರಿಯ ಆದಾಯ

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಳ
Last Updated 2 ಆಗಸ್ಟ್ 2019, 5:08 IST
ಅಕ್ಷರ ಗಾತ್ರ

ಗಂಗಾವತಿ: ಇತಿಹಾಸಪ್ರಸಿದ್ಧಿಯನ್ನು ಪಡೆದಿರುವ ಅಂಜನಾದ್ರಿಯ ಬೆಟ್ಟದಆಂಜನೇಯ ಸ್ವಾಮಿಯ ಆದಾಯ ಒಂದು ವರ್ಷದಲ್ಲೇ ಒಂದು ಕೋಟಿ ದಾಟುವ ಮೂಲಕ ಮತ್ತೊಂದು ದಾಖಲೆ ಮಾಡಿದೆ.

ಇದು ರಾಮಾಯಣ ಕಾಲದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಹಾಗೂ ಪವನಸುತ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಹಿನ್ನೆಲೆ ಸಾಕಷ್ಟು ಭಕ್ತರ ದಂಡೇ ಅಂಜನಾದ್ರಿಯಲ್ಲಿ ಪ್ರತಿ ಶನಿವಾರ ನೆರೆದಿರುತ್ತದೆ.

ಕೇವಲ ರಾಜ್ಯದ ಭಕ್ತರಷ್ಟೇ ಅಲ್ಲದೆ, ಹೊರರಾಜ್ಯದ ಹಾಗೂ ವಿದೇಶಿ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್, ನಿತಿನ್ ಗಡ್ಕರಿ, ಪಿಯೂಸ್‌ ಗೋಯಲ್‌ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇಷ್ಟು ದಿನ ದೇವಸ್ಥಾನದ ಪ್ರಧಾನ ಆರ್ಚಕ ವಿದ್ಯಾದಾಸ ಬಾಬಾ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ ಪೂಜೆ ವಿಷಯಕ್ಕೆ ದೇವಸ್ಥಾನದ ಟ್ರಸ್ಟಿನ ಸದಸ್ಯರ ಹಾಗೂ ಬಾಬಾ ನಡುವೆ ಗಲಾಟೆಗಳು ನಡೆದು ಉಲ್ಬಣಗೊಳ್ಳುತ್ತಿದ್ದಂತೆ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಸುಪರ್ದಿಗೆ ಪಡೆದುಕೊಂಡಿತ್ತು.

ಕಂದಾಯ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ನಿರ್ವಹಣೆಯನ್ನು ವಹಿಸಿಕೊಂಡ ಮೇಲೆ ಅಂಜನಾದ್ರಿಯ ಆದಾಯ ಪ್ರತಿ ತಿಂಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಜುಲೈ ತಿಂಗಳಿಂದ ಹಿಡಿದು ಈ ವರ್ಷದ ಜುಲೈ ತಿಂಗಳವರೆಗೆ, ಬರೋಬ್ಬರಿ ದೇವಸ್ಥಾನದ ಆದಾಯ ಸುಮಾರು ₹1. 3 ಕೋಟಿ ಸಂಗ್ರಹವಾಗುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

ಒಂದು ಕೋಟಿ ಆದಾಯದಲ್ಲಿ ಸಿಬ್ಬಂದಿ ವೇತನ, ದಾಸೋಹ ಹಾಗೂ ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ₹ 47 ಲಕ್ಷ ಖರ್ಚು ಮಾಡಲಾಗಿದೆ. ಸದ್ಯ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ₹ 56 ಲಕ್ಷ ಜಮಾ ಆಗಿದೆ ಎಂದು ತಹಶೀಲ್ದಾರ್ ವಿರೇಶ್ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT