ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ; ರಾಜಕೀಯವಾಗಿಬಳಸುವುದು ಸರಿಯಲ್ಲ: ಖರ್ಗೆ

Last Updated 19 ಫೆಬ್ರುವರಿ 2019, 17:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿಯ ವಿಚಾರವನ್ನು ಯಾರೂ ರಾಜಕೀಯವಾಗಿ ಬಳಸಬಾರದು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ಸುರಕ್ಷತೆ ದೃಷ್ಟಿಯಿಂದ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕು. ಸೈನಿಕರ ಬೆಂಬಲಕ್ಕೆ ನಿಂತು ನೈತಿಕ ಧೈರ್ಯ ತುಂಬಬೇಕು. ಸೈನ್ಯ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸಬೇಕು’ ಎಂದರು.

ಉಗ್ರರ ದಾಳಿ ವಿಚಾರವಾಗಿ ನವಜೋತ್ ಸಿಂಗ್ ಸಿಧು ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಸೈನಿಕರನ್ನು ಕುಗ್ಗಿಸುವಂತಹ ಮಾತುಗಳನ್ನು ಯಾರೂ ಆಡಬಾರದು’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಕಲಬುರ್ಗಿಗೆ ಬರುತ್ತಿದ್ದಾರೆ. ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್ ದರ್ಜೆಗೇರಿಸಬೇಕು ಎಂದು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಮೋದಿ ಭಾಷಣ ಮಾಡುತ್ತಾರೆ, ಹೋಗುತ್ತಾರೆ. ಕಾಂಗ್ರೆಸ್‌ಗೆ ಬೈಯ್ಯುತ್ತಾರೆ. ಆದರೆ, ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ’ ಎಂದು ಕಿಡಿ ಕಾರಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಚುನಾವಣಾ ಪೂರ್ವ ಮೈತ್ರಿಗೆ ಪ್ರತಿಕ್ರಿಯಿಸಿ, ‘ಶಿವಸೇನೆಯವರು ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಅಂದಿದ್ದರು. ಈಗ ಚೋರನ ಪಕ್ಕದಲ್ಲೇ ಹೋಗಿ ಕುಳಿತಿದ್ದಾರೆ. ನಾವು ಯಾವ ಚುನಾವಣೆಯನ್ನೂ ಸರಳವಾಗಿ ತೆಗೆದುಕೊಂಡಿಲ್ಲ, ತೆಗೆದುಕೊಳ್ಳುವುದೂ ಇಲ್ಲ. ನಾವೂ ಕೂಡ ಹೋರಾಟ ಮಾಡುತ್ತೇವೆ’ ಎಂದರು.

‘ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಅವರು ಮೋದಿ ನೇತೃತ್ವದಲ್ಲಿ ಬಿಜೆಪಿ ಸೇರುತ್ತಾರಂತಲ್ಲ’ ಎಂಬ ಪ್ರಶ್ನೆಗೆ, ‘ದೊಡ್ಡ ಮಂದಿಗೆ ದೊಡ್ಡ ನಮಸ್ಕಾರ, ಅಂತಹ ದೊಡ್ಡ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ ನನ್ನನ್ನು ಕೇಳಿ’ ಎಂದು ತಿಳಿಸಿದರು.

**

ಸ್ಟೇಟಸ್‌ನಲ್ಲಿ ಪಾಕ್‌ ಧ್ವಜ: ವಶಕ್ಕೆ
ಸಿಂದಗಿ (ವಿಜಯಪುರ):
ಪಾಕಿಸ್ತಾನ ಧ್ವಜದ ಚಿತ್ರವನ್ನು ವಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಸಂಬಂಧಿಸಿದಂತೆ, ಸಿಂದಗಿ ಪೊಲೀಸರು ಗ್ರೂಪ್ ಅಡ್ಮಿನ್‌ ಅಬ್ದುಲ್‌ ಎಂಬುವವರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಸ್ಟೇಟಸ್‌ ಹಾಕಿದ್ದ, ಸಮೀರ ಎಂಬಾತನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಪಾಕಿಸ್ತಾನ ದುರುಳ ರಾಷ್ಟ್ರ: ಪಾಟೀಲ
ವಿಜಯಪುರ:
‘ಪಾಕಿಸ್ತಾನ ದುರುಳ ರಾಷ್ಟ್ರ. ಭಯೋತ್ಪಾದಕ ರಾಷ್ಟ್ರ. ಆ ದೇಶದ ನಡೆ ಖಂಡನಾರ್ಹ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಮಂಗಳವಾರ ಇಲ್ಲಿ ಟೀಕಿಸಿದರು.

‘ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿದ ಹೇಯಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸಬೇಕು. ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ, ಪ್ರಧಾನಿಗೆ ಶಕ್ತಿ ತುಂಬಬೇಕು. ಇದರಲ್ಲಿ ಯಾರೊಬ್ಬರೂ ರಾಜಕಾರಣ ಮಾಡಬಾರದು. ಪಾಕಿಸ್ತಾನವನ್ನು ಒಂಟಿಯಾಗಿ ಮಾಡುವುದೇ ಗುರಿಯಾಗಬೇಕು’ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಬೆಂಬಲಿಸುವವರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT