ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೆಳೆಗಾರರಿಗೆ ನೆರವಾಗುವಲ್ಲಿ ಸರ್ಕಾರ ವಿಫಲ: ಶಾಸಕ ಪ್ರಿಯಾಂಕ್ ಟೀಕೆ

Last Updated 9 ಜನವರಿ 2021, 5:39 IST
ಅಕ್ಷರ ಗಾತ್ರ

ಕಲಬುರ್ಗಿ: ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ತೊಗರಿ ಬೆಳೆಗಾರರ‌ ನೆರವಿಗೆ ಬರಲು ‌ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ‌ಖರ್ಗೆ ಟೀಕಿಸಿದ್ದಾರೆ.

ಕಳೆದ ಸಾಲಿನಲ್ಲಿ ತೊಗರಿ ಖರೀದಿಗೆ ಪ್ರೋತ್ಸಾಹ ಧನ ಘೋಷಿಸಿದ್ದ ರಾಜ್ಯ ಸರ್ಕಾರ ಈ ಸಲ ತನ್ನ ನಿರ್ಧಾರಿಂದ ಹಿಂದೆ ಸರಿದಿದ್ದು, ರೈತರು ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ತೋರಿಸುತ್ತಿರುವ ನಿಷ್ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.

ಏಷ್ಯಾ ಖಂಡದಲ್ಲಿಯೇ ಕಲಬುರ್ಗಿ ಜಿಲ್ಲೆ ಅತಿಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದ್ದು ತೊಗರಿ ಖಣಜ ಎಂದೇ ಕರೆಯಲಾಗುತ್ತಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ತನ್ನ ಪ್ರೋತ್ಸಾಹ ಧನ ನೀಡಿ ರೈತರು ಬೆಳೆದ ತೊಗರಿಯನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸುತ್ತಿತ್ತು. ಆದರೆ, ಈ ಸಲ ಏಕಾಏಕಿ ಪ್ರೋತ್ಸಾಹ ಧನಕ್ಕೆ ತೀಲಾಂಜಲಿ ನೀಡಿ ಕೇಂದ್ರ ಸರಕಾರ ನಿಗದಿಪಡಿಸಿದ ₹ 6000 ( ಪ್ರತಿ ಕ್ವಿಂಟಲ್ ) ತೊಗರಿ ಖರೀದಿ ಮಾಡಲು ಮುಂದಾಗಿದೆ. ಇದು ಕಲಬುರ್ಗಿ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಎಸಗಿದ ಮಹಾದ್ರೋಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ತೊಗರಿ ಬೆಳೆಗಾರರ ನೆರವಿಗೆ ಧಾವಿಸಿ ಸೂಕ್ತ ಬೆಂಬಲ ಬೆಲ ನೀಡಿ ತೊಗರಿ ಖರೀದಿ ಮಾಡಲಾಗಿತ್ತು.2016-17 ಸಾಲಿನಲ್ಲಿ ₹ 450 ಬೆಂಬಲ ಬೆಲೆ ಘೋಷಿಸಲಾಗಿತ್ತು. ಅದರಂತೆ, 2017-18 ರಲ್ಲಿ ₹ 550, 2018-19 ರಲ್ಲಿ ₹ 425 ನಿಗದಿಪಡಿಸಿ ತೊಗರಿ ಖರೀದಿ ಮಾಡಲಾಗಿತ್ತು" ಎಂದು ವಿವರಿಸಿದ್ದಾರೆ.

2019-20 ರ ಸಾಲಿನಲ್ಲಿ ಕೇಂದ್ರದ ₹ 5,800 ಹಾಗೂ ರಾಜ್ಯದ ಪ್ರೋತ್ಸಾಹ ಧನ ₹ 375 ಸೇರಿ ಒಟ್ಟು ₹ 6100 ನಂತೆ ಒಟ್ಟು 1,27,468 ರೈತರಿಂದ 13,01,403.50 ಕ್ವಿಂಟಲ್ ತೊಗರಿ ಖರೀದಿಸಲಾಗಿತ್ತು. ಹಾಗೆ‌ ಖರೀದಿಸಿದ ಧಾನ್ಯದ ಮೌಲ್ಯ ಒಟ್ಟು‌ ₹ 793.86 ಕೋಟಿ ಆಗಿತ್ತು. ಅದರಲ್ಲಿ, ₹ 590.09 ಕೋಟಿ‌ ಹಣವನ್ನು ( ಶೇ 74.33% ರಂತೆ )1,03,408 ರೈತರಿಗೆ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಬಾಕಿ ಉಳಿದ 24,060 ರೈತರಿಗೆ ಹಣ ಬಿಡುಗಡೆ ಮಾಡಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕರ ಮೌನ..
ರಾಜ್ಯದಲ್ಲಿ ಕಳೆದ ವರ್ಷದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಕಳೆದ ಅಧಿವೇಶನದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಪ್ರೋತ್ಸಾಹಧನ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಅದರಂತೆ ಈ ಸಲ ಪ್ರೋತ್ಸಾಹ ಧನ ಘೋಷಣೆಯಾಗಿಲ್ಲ. ಜಿಲ್ಲೆಯಲ್ಲಿ ರೈತರು ಇಷ್ಟೊಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ರೈತರ ಪರ ಧ್ವನಿ ಎತ್ತಬೇಕಿದ್ದ ಕಲಬುರ್ಗಿ ಜಿಲ್ಲೆಯ ಬಿಜೆಪಿ ಶಾಸಕರು ಮೌನವಾಗಿರುವುದು ನೋಡಿದರೆ ಅವರ ಜನಪರ ಕಾಳಜಿ ಎಂತದ್ದು ಎಂದು ಅರ್ಥವಾಗುತ್ತದೆ. ಇದನ್ನೆಲ್ಲಾ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ರಾಜ್ಯ ಸರ್ಕಾರದ ಧೋರಣೆಯ ವಿರುದ್ದ ಬೀದಿಗಿಳಿಯಲಿದ್ದಾರೆ ಎಂದು ಶಾಸಕರು ಎಚ್ಚರಿಸಿದ್ದಾರೆ.

ಪರಿಹಾರ ನೀಡುವಲ್ಲಿ ವಿಳಂಬ...
ಕಲಬುರ್ಗಿ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ ಹಾಗೂ ನೂರಾರು ಮನೆಗಳು ಸಂಪೂರ್ಣ ಹಾಳಾಗಿವೆ. ಆದರೆ ರಾಜ್ಯ ಸರ್ಕಾರ ಹಾನಿಗೊಳಗಾದ ಪ್ರದೇಶಗಳ ಜಂಟಿ‌ ಸರ್ವೆ ಮಾಡಿ ನೊಂದವರಿಗೆ ಪರಿಹಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಲ ಸುಮಾರು 32 ಲಕ್ಷ ಟನ್ ತೊಗರಿ ಫಸಲಿನ ನಿರೀಕ್ಷೆ ಮಾಡಲಾಗಿದ್ದು. ಈ ಕೂಡಲೇ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹ‌ ಧನವನ್ನು ಘೋಷಣೆ ‌ಮಾಡಿ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT