ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಸನ್ನತಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣ ನೀಡಿಲ್ಲ’

ಶಾಸಕ ಪ್ರಿಯಾಂಕ್ ಖರ್ಗೆ ಆರೋಪ
Last Updated 9 ಜನವರಿ 2022, 4:11 IST
ಅಕ್ಷರ ಗಾತ್ರ

ಕಲಬುರಗಿ: ‘ಸನ್ನತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. 2018–19ರ ನಂತರ ಈವರೆಗೂ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಾಲವಾರ- ಸನ್ನತಿ ರಸ್ತೆ ನಿರ್ಮಾಣಕ್ಕೆ ₹4.85 ಕೋಟಿ, ಸನ್ನತಿ –ಬನ್ನಟ್ಟಿ ಕ್ರಾಸ್ ರಸ್ತೆ ನಿರ್ಮಾಣಕ್ಕೆ ₹5.5 ಕೋಟಿ ಮತ್ತು ರಾಜ್ಯ ಹೆದ್ದಾರಿ 149ರಿಂದ ಬುದ್ಧ ಸ್ತೂಪದವರೆಗಿನ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಬಿಡುಗಡೆ ಮಾಡಲಾಗಿತ್ತು’ ಎಂದು ಹೇಳಿದ್ದಾರೆ.‌

‘ನಾನು ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ಸನ್ನತಿ ಅಭಿವೃದ್ಧಿಗೆ ನೀಡಿರುವ ಹಣ ನನ್ನ ಬದ್ಧತೆಗೆ ಸಾಕ್ಷಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದ ಪುರಾತತ್ವ ವಿಭಾಗವನ್ನು ಪ್ರವಾಸೋದ್ಯಮ ಇಲಾಖೆಯ ಭಾಗವಾಗಿಸಲು, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ನಡುವೆ ಸಂವಹನ ಹಾಗೂ ಸಂಯೋಜನೆ ಮೂಡಿಸಲು ಹಿಂದೆಂದೂ ಮಾಡಿರದ ಕೆಲಸ ಮಾಡಲಾಗಿದೆ’ ಎಂದಿದ್ದಾರೆ.

‘ಸನ್ನತಿ ಸ್ಥಳ ಪರಿಚಯ, ಅಭಿವೃದ್ಧಿ, ಶಿಲಾಶಾಸನ ಸಂರಕ್ಷಣೆ, ಪ್ರಚಾರ, ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಿರದಿದ್ದರೆ, ಸಂಸದರಿಗೆ ಈ ಸ್ಥಳದ ಮಾಹಿತಿಯೂ ಸಿಗುತ್ತಿರಲಿಲ್ಲ. ಪುರಾತತ್ವ ಇಲಾಖೆ, ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯ ವೈಖರಿಯ ಕುರಿತು ಸಂಸದರಿಗೆ ಮಾಹಿತಿ ಇಲ್ಲ’ ಎಂದು ಅವರು ಟೀಕಿಸಿದ್ದಾರೆ.

‌‘2015ರಲ್ಲಿ ಕಾಂಗ್ರೆಸ್ ಸರ್ಕಾರವು ಸನ್ನತಿಯಲ್ಲಿ ಲ್ಯಾಂಡ್ ಸ್ಕೇಪಿಂಗ್, ಇಂಟರ್‌ಪ್ರಿಟೇಷನ್ ಸೆಂಟರ್, ಸೈನೇಜಸ್ ಸೇರಿದಂತೆ ಮುಂತಾದ ಪ್ರವಾಸಿ‌ ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲು ₹2 ಕೋಟಿ ಮಂಜೂರು ಮಾಡಿತ್ತು. ಅದರಂತೆ, ₹1.5 ಕೋಟಿಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಧಾರವಾಡದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಹಣ ಬಿಡುಗಡೆಯಾಗಿ 6 ವರ್ಷ ಕಳೆದರೂ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿ’ ಎಂದು ದೂರಿದ್ದಾರೆ.

‘ಕಾಳಗಿಯಲ್ಲಿನ ಬೌದ್ಧ ಸ್ತೂಪಗಳು ಹಾಗೂ ಸಾಮ್ರಾಟ್ ಅಶೋಕನ ಶಿಲಾಶಾನಗಳ ಸಂರಕ್ಷಣೆಯ ಕಾರ್ಯವನ್ನೂ ನಾನು ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ಕೈಗೆತ್ತಿಕೊಂಡಿದ್ದೆ. ಅದಕ್ಕೆ ₹50 ಲಕ್ಷ ಹಣ ಬಿಡುಗಡೆ ಮಾಡಿಸಿದ್ದೆ. ಇದು ಸಂಸದರಿಗೆ ಮರೆತು ಹೋಗಿದೆ’ ಎಂದು ಹೇಳಿದ್ದಾರೆ.

‘‌ಕಲ್ಯಾಣ ಕರ್ನಾಟಕದಲ್ಲಿನ ಪುರಾತತ್ವ ಸ್ಥಳಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹೈದರಾಬಾದ್ ಕರ್ನಾಟಕ ಪ್ರವಾಸೋದ್ಯಮ ಸಮಿತಿ ರಚಿಸಿ ಅನೇಕ ಸಭೆಗಳನ್ನು ನಡೆಸಲಾಗಿತ್ತು. ಆದರೆ ಆ ಸಮಿತಿಯ ಆಹ್ವಾನಿತ ಸದಸ್ಯರಾಗಿದ್ದರೂ ಜಾಧವ ಅವರು ಒಂದೂ ಸಭೆಗೆ ಹಾಜರಾಗಿರಲಿಲ್ಲ’ ಎಂದು ಅವರು ಟೀಕಿಸಿದ್ದಾರೆ.

‘ಸಂಸದರು ಲಘುವಾದ ಹೇಳಿಕೆ ನೀಡುವುದು ಬಿಟ್ಟು ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಒಂದೂವರೆ ಕೋಟಿ ಹಣ ಸನ್ನತಿಯ ಅಭಿವೃದ್ಧಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT