ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಡ್ರಾಮಿ: ಕೆಂಪು ಬಸ್‌ ಕಾಣದ ಊರುಗಳು

ಯಡ್ರಾಮಿ ತಾಲ್ಲೂಕಿನ ಶಿವಪುರ, ಯತ್ನಾಳ ಮತ್ತಿತರ ಹಳ್ಳಿಗಳಿಗಿಲ್ಲ ಸಾರಿಗೆ ಬಸ್‌
Published : 14 ಸೆಪ್ಟೆಂಬರ್ 2024, 7:35 IST
Last Updated : 14 ಸೆಪ್ಟೆಂಬರ್ 2024, 7:35 IST
ಫಾಲೋ ಮಾಡಿ
Comments

ಯಡ್ರಾಮಿ: ತಾಲ್ಲೂಕಿನ ಶಿವಪುರ, ಯತ್ನಾಳ, ಅಖಂಡಹಳ್ಳಿ, ಕೊನ್ನೂರ ತಾಂಡಾ, ಜಂಬೇರಾಳ, ಹರನಾಳ, ಸೈದಾಪುರ, ಬೆನ್ನೂರ, ಕಾಖಂಟಕಿ, ದುಮ್ಮದ್ರಿ, ಕೋಣಸಿರಸಿಗಿ, ಹಾಲಘತ್ತರಿಗಿ, ಅಲ್ಲಾಪುರ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಇನ್ನೂ ಕೆಂಪು ಬಸ್ ಮುಖವೇ ನೋಡಿಲ್ಲ.

ಈ ಎಲ್ಲಾ ಗ್ರಾಮಗಳ ಪೈಕಿ ಕೆಲ ಗ್ರಾಮಗಳಿಗೆ ಕ್ರಾಸ್‌ವರೆಗೆ ಬಸ್ ಹೋದರೆ ಇನ್ನೂ ಕೆಲ ಗ್ರಾಮಗಳಿಗೆ ಕ್ರಾಸ್‌ವರೆಗೂ ಸಹ ಬಸ್ ಇಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲ್ನಡಿಗೆಯಿಂದ ಕ್ರಾಸ್‌ವರೆಗೆ ಬಂದು ಬಸ್ ಹತ್ತುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.
ಯತ್ನಾಳ, ಅಖಂಡಹಳ್ಳಿ ತೆರಳುವ ರಸ್ತೆ ಉದ್ದಕ್ಕೂ ಎರಡು ಬದಿಗಳಲ್ಲಿ ಕಂಟಿಗಳು ಬೆಳೆದು ಅಲ್ಲಲ್ಲಿ ತಗ್ಗುಗುಂಡಿಗಳು ಬಿದ್ದು ಬೈಕ್ ಸವಾರರೇ ಭಯದಲ್ಲಿ ಸಾಗುವ ಪರಿಸ್ಥಿತಿ ಎದುರಾಗಿದೆ. ಇಲ್ಲಿಗೆ ಬಸ್ ಸಂಚಾರವೂ ಇಲ್ಲ.

ಹರನಾಳ, ಸೈದಾಪುರ, ದುಮ್ಮದ್ರಿ, ಕೋಣಸಿರಸಿಗಿ ಗ್ರಾಮಗಳಿಗೆ ಕ್ರಾಸ್‌ವರೆಗೆ ಬಸ್ ಹೋಗುತ್ತದೆ. ಈ ಎಲ್ಲಾ ಗ್ರಾಮದ ಮಕ್ಕಳು ಕಾಲ್ನಡಿಗೆ ಮೂಲಕವೇ ಕ್ರಾಸ್‌ವರೆಗೆ ಬಂದು ಬಸ್ ಹತ್ತಿ ಶಾಲಾ ಕಾಲೇಜಿಗೆ ಹೋಗಿ ಬರುತ್ತಾರೆ. ಈ ಗ್ರಾಮಗಳಿಗೆ ತೆರಳುವ ರಸ್ತೆಗಳು ಹದಗೆಟ್ಟಿದ್ದರಿಂದ ಹಗಲಿನಲ್ಲೇ ಓಡಾಟ ನಡೆಸಲು ಮಕ್ಕಳು ಭಯಬೀಳುತ್ತಾರೆ. ಶಿವಪುರ ಗ್ರಾಮಕ್ಕೆ ಖಾಸಗಿ ವಾಹನಗಳು ಬಿಟ್ಟರೆ ಕಾಲ್ನಡಿಗೆಯೇ ಗತಿಯಾಗಿದೆ. ಶಿವಪುರಕ್ಕೆ ಬರಬೇಕಾದರೆ ಸುತ್ತಲಿನ ಹಳ್ಳಿಗಳ ಸಾರ್ವಜನಿಕರು, ಮಕ್ಕಳು ನಡೆದುಕೊಂಡೇ ಬರಬೇಕು. ಆಕಸ್ಮಾತ್‌ ಯಾರಿಗಾದರೂ ಆರೋಗ್ಯ ಹಾಳಾದರೆ ಹೊತ್ತುಕೊಂಡು ಬರುವ ಪರಿಸ್ಥಿತಿ ಇಲ್ಲಿದೆ. ಇಲ್ಲಿ ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆಗಳು ಇಲ್ಲದೆ ಇರುವುದು ಕಾರಣ ಈ ಪ್ರದೇಶದಲ್ಲಿ ಸಾರಿಗೆ ಬಸ್ ಸಂಚಾರವೇ ಇಲ್ಲ. ಹೀಗಾಗಿ ಗ್ರಾಮೀಣರು ಸುಮಾರು ಮೂರ್ನಾಲ್ಕು ಕೀ.ಮಿ. ದೂರದ ಹಂಗರಗಾ(ಕೆ) ಗ್ರಾಮಕ್ಕೆ ನಡೆದುಕೊಂಡೇ ಬರಬೇಕು. ನಂತರ ಅಲ್ಲಿಂದ ಖಾಸಗಿ ಅಥವಾ ಬಸ್ ಹಿಡಿದು ಪಟ್ಟಣ ನಗರಕ್ಕೆ ತೆರಳಬೇಕು. ರಾತ್ರಿಯಾದರೆ ಇವರ ಸ್ಥಿತಿ ಹೇಳತೀರದಾಗಿದೆ.

ಗ್ರಾಮೀಣ ಪ್ರದೇಶ ಸರ್ವಾಂಗೀಣ ಅಭಿವ್ಯದ್ದಿಗಾಗಿ ರಾಜ್ಯ ಸರ್ಕಾರವೂ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಆದರೆ ಅಧಿಕಾರಿಗಳ ನಿಷ್ಕಾಳಜಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರದ ಯೋಜನೆಗಳು ಸಂಪೂರ್ಣ ಹಳ್ಳ ಹಿಡಿದಿವೆ.

‘ಈ ಗ್ರಾಮಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಬಸ್ ಸೌಕರ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಶಾಲಾ ಮಕ್ಕಳೊಂದಿಗೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಅನೇಕ ಬಾರಿ ಮನವಿ ಪತ್ರ ಕೊಟ್ಟರೂ ಕ್ಯಾರೆ ಎಂದಿಲ್ಲ. ದಯವಿಟ್ಟು ಶಾಲಾ ಮಕ್ಕಳಿಗೋಸ್ಕರವಾದರೂ ಬಸ್ ಓಡಿಸಲಿ’ ಎಂದು ಯಡ್ರಾಮಿಯ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಸಾಹೇಬಗೌಡ ದೇಸಾಯಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT