ಭಾನುವಾರ, ಜುಲೈ 25, 2021
21 °C
ಜಿಲ್ಲೆಯಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ, ಮತ್ತೆ ಇಬ್ಬರು ಕಾನ್‌ಸ್ಟೆಬಲ್‌, ಜಿಮ್ಸ್‌ ಸಿಬ್ಬಂದಿಗೂ ಪಾಸಿಟಿವ್‌

ಕೋವಿಡ್‌: ಮಹಿಳೆ ಸೇರಿ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ಶನಿವಾರ ಒಬ್ಬ ಮಹಿಳೆ ಹಾಗೂ ಇಬ್ಬರು ವೃದ್ಧರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದೊಂದಿಗೆ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಶುಕ್ರವಾರ ಕೂಡ ಮೂವರು ವಯಸ್ಕರೇ ಮೃತಪಟ್ಟಿದ್ದರು. ಮರುದಿನ ಮತ್ತೆ ಮೂವರ ಸಾವಿನ ಮೂಲಕ ಎರಡೇ ದಿನದಲ್ಲಿ ಆರು ಮಂದಿ ಮೃತಪಟ್ಟಂತಾಗಿದೆ.

ತೀವ್ರ ಜ್ವರ, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಗರದ ಇಸ್ಲಾಮಾಬಾದ್‌ ಕಾಲೊನಿಯ 45 ವರ್ಷದ ಮಹಿಳೆ ಜುಲೈ 3ರಂದು ಮೃತಪಟ್ಟಿದ್ದಾರೆ. ಅವರು ಜುಲೈ 1ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಪ್ರದೇಶದ 75 ವರ್ಷದ ವೃದ್ಧ ಕೂಡ ತೀವ್ರ ಉಸಿರಾಟದ ತೊಂದರೆಯಿಂದ ಜಲೈ 2ರಂದು ಕೊನೆಯುಸಿರೆಳೆದರು. ಅವರು ಜುಲೈ 1ರಂದು ಜಿಮ್ಸ್‌ನ ಕೋವಿಡ್‌ ಐಸೋಲೇಷನ್‌ ವಾರ್ಡ್‌ಗೆ ದಾಖಲಾಗಿದ್ದರು.

ಉಸಿರಾಟದ ತೊಂದರೆ, ಎದೆ ನೋವಿನ‌ ಸಮಸ್ಯೆಯಿಂದ ಬಳಲುತ್ತಿದ್ದ ದರ್ಗಾ ಪ್ರದೇಶದ 73 ವರ್ಷದ ವೃದ್ಧ ಜುಲೈ 1ರಂದು ಜಿಮ್ಸ್‌ನಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಜುಲೈ 2ರಂದು ನಿಧನ ಹೊಂದಿದರು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದ್ದಾರೆ.

37 ಪಾಸಿಟಿವ್‌, 46 ಗುಣಮುಖ: ಜಿಲ್ಲೆಯಲ್ಲಿ ಹೊಸದಾಗಿ 37 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಶನಿವಾರ ದೃಢಪಟ್ಟಿದೆ. ಇದರಲ್ಲಿ ಸೌದಿ ಅರೇಬಿಯಾದಿಂದ ಮರಳಿದ ಒಬ್ಬ ವ್ಯಕ್ತಿಯೂ ಇರುವುದು ಗಮನಾರ್ಹ.

ಇವರಲ್ಲಿ 9 ಮಹಿಳೆ, ಇಬ್ಬರು ಮಕ್ಕಳಿದ್ದಾರೆ. ವಿಷಮಶೀತ ಜ್ವರದಿಂದ ಬಳಲುತ್ತಿರುವ 12 ಮಂದಿ, ತೀವ್ರ ಉಸಿರಾಟದ ತೊಂದರೆ ಇರುವ 4 ಮಂದಿ, ಸೋಂಕಿತರ ಸಂಪರ್ಕಕ್ಕೆ ಬಂದ 6 ಜನ ಇದ್ದಾರೆ. 12 ಸೋಂಕಿತರಿಗೆ ಯಾರ ಸಂಪರ್ಕದಿಂದ ಬಂದಿದೆ ಎಂಬುದು ಪತ್ತೆಯಾಗಿಲ್ಲ.‌

ಬಾಕ್ಸ್‌–1

ಜಿಮ್ಸ್‌ ಸಿಬ್ಬಂದಿ, ಕಾನ್‌ಸ್ಟೆಬಲ್‌, ಆಶಾ ಕಾರ್ಯಕರ್ತೆಯರಿಗೂ ಸೋಂಕು

ಕಲಬುರ್ಗಿ: ನಗರದ ಮತ್ತೆ ಮೂವರು ಪೊಲೀಸ್‌ ಕಾನ್‌ಸ್ಟೆಬಲ್‌, ಒಬ್ಬ ಆಶಾ ಕಾರ್ಯಕರ್ತೆಹಾಗೂ ಒಬ್ಬ ಜಿಮ್ಸ್‌ ನೌಕರರಿಗೂ ಕೋವಿಡ್‌ ಪತ್ತೆಯಾಗಿದೆ.

ತಾಜ್‌ ಸುಲ್ತಾನಪುರದ ಕೆಎಸ್‍ಆರ್‌ಪಿ ಕ್ಯಾಂಪ್‍ನಲ್ಲಿರುವ 25 ವರ್ಷ ಮತ್ತು 30 ವರ್ಷದ ಕಾನ್‌ಸ್ಟೆಬಲ್‌ಗಳು ಈಗ ಐಸೋಲೇಷನ್‌ ವಾರ್ಡ್‌ ಸೇರಿದ್ದಾರೆ. ನಾಗನಹಳ್ಳಿಯ ಪೊಲೀಸ್‌ ತರಬೇತಿ ಕೇಂದ್ರದಲ್ಲಿ (ಪಿಟಿಸಿ) 29 ವರ್ಷ ಮಹಿಳೆಗೂ ಪಾಸಿಟಿವ್ ಬಂದಿದೆ. ಈ ಮೂವರೂ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ಕರ್ತವ್ಯ ಮಾಡುತ್ತಿದ್ದರು.

ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ಆಶಾ ಕಾರ್ಯಕರ್ತೆ, ಜಿಮ್ಸ್‌ನ ಕೋವಿಡ್ ಆಸ್ಪತ್ರೆಯ 55 ವರ್ಷದ ಮಹಿಳೆ, ಕೆಬಿಎನ್ ಆಸ್ಪತ್ರೆಯ 24 ವರ್ಷದ ಯುವಕ, ನಾಗನಹಳ್ಳಿ ಪೊಲೀಸ್ ತರಬೇತಿ ಸಂಸ್ಥೆಯ 45 ವರ್ಷದ ವ್ಯಕ್ತಿ, ಐವಾನ್ ಇ ಶಾಹಿ ಪ್ರದೇಶದ ಪಿಡಬ್ಲ್ಯುಡಿ ಕ್ವಾಟರ್ಸ್‌ನಲ್ಲಿರುವ ನೌಕರರ ಕುಟುಂಬದ ಇಬ್ಬರು ಸದಸ್ಯರಿಗೆ ವೈರಸ್ ಅಂಟಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.