ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿಯಲ್ಲಿ ಎರಡು ಹೊಸ ಬಸ್ ನಿಲ್ದಾಣ: ಸಚಿವ ರಾಮಲಿಂಗಾರೆಡ್ಡಿ

Published 26 ಜನವರಿ 2024, 0:23 IST
Last Updated 26 ಜನವರಿ 2024, 0:23 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿನ ದಟ್ಟಣೆಯನ್ನು ತಪ್ಪಿಸಲು ನಗರದ ಹೊರವಲಯದಲ್ಲಿ ಎರಡು ಹೊಸದಾಗಿ ಬಸ್‌ ನಿಲ್ದಾಣಗಳನ್ನು ಆರಂಭಿಸಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದರು.

ಇಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೋಟೆ ಮಾದರಿಯ ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸಕ ಅಲ್ಲಮಪ್ರಭು ಪಾಟೀಲ ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತದಿಂದ ಜಾಗ ಕೊಡಿಸಿದರೆ ನಾವು ಬಸ್ ನಿಲ್ದಾಣ ನಿರ್ಮಿಸಲು ಸಿದ್ಧರಿದ್ದೇವೆ’ ಎಂದರು.

‘ಕೆಕೆಆರ್‌ಟಿಸಿಗೆ ಈಗಾಗಲೇ 630 ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಮಾರ್ಚ್ ವೇಳೆಗೆ ಮತ್ತೆ 485 ಬಸ್ ನೀಡಲಾಗುವುದು. 500 ಜನರಿಗೆ ಅನುಕಂಪದ ಮೇಲೆ ಉದ್ಯೋಗ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಸಂಸ್ಥೆಯಲ್ಲಿನ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ ₹ 1 ಕೋಟಿ ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೇ ಮಾದರಿಯಾಗಿದೆ’ ಎಂದು ಹೇಳಿದರು. 

‘ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈಶಾನ್ಯ ಭಾಗದ ಜಿಲ್ಲೆಗಳು ಬೆಂಗಳೂರಿಗೆ 600 ಕಿ.ಮೀ. ದೂರದಲ್ಲಿರುವ ಕಾರಣ ಮತ್ತು ಓಡಾಟ ಹೆಚ್ಚಿರುವುದರಿಂದ ವೋಲ್ವೊ ಎ.ಸಿ. ಬಸ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ವ್ಯವಸ್ಥಾಪಕ ನಿರ್ದೇಶರ ಎಂ. ರಾಚಪ್ಪ ಅವರಿಗೆ ಸೂಚನೆ ನೀಡಿದ್ದೇನೆ’ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘‌ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿನಿತ್ಯ 1,200 ಬಸ್‌ಗಳು ಸಂಚರಿಸುತ್ತಿವೆ. ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸಲು ಜೇವರ್ಗಿ ರಸ್ತೆ, ಹುಮನಾಬಾದ ರಸ್ತೆ, ಆಳಂದ ರಸ್ತೆ ಹಾಗೂ ಸೇಡಂ ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಚಿನ್ನದ ಪದಕ: ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 6 ಜನರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಎಜಾಜ್ ಅಹ್ಮದ್, ರೇವಣಸಿದ್ದಪ್ಪ ಅವರಿಗೆ ಅನುಕಂಪದ ನೇಮಕಾತಿ ಅದೇಶ ಪತ್ರ ನೀಡಲಾಯಿತು. ಸೇವಾ ಅವಧಿಯಲ್ಲಿ ಮೃತಪಟ್ಟ 8 ಜನ ಅಧಿಕಾರಿ, ಸಿಬ್ಬಂದಿಯ ಅವಲಂಬಿತರಿಗೆ ತಲಾ ₹ 10 ಲಕ್ಷದಂತೆ ₹ 80 ಲಕ್ಷ ಆಂತರಿಕ ಗುಂಪು ವಿಮಾ ಪರಿಹಾರದ ಚೆಕ್‍ಗಳನ್ನು ಸಚಿವರು ವಿತರಿಸಿದರು.

ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸ್ವಾಗತಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ., ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಪಾಲಿಕೆ ಸದಸ್ಯೆ ವರ್ಷಾ ಜಾನೆ, ಕೆಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ದೇವರಾಜ, ಸಿಎಂಇ ಸಂತೋಷಕುಮಾರ ಗೊಗೋರೆ, ಮುಖ್ಯ ಭದ್ರತಾ ಮತ್ತು ವಿಜಿಲೆನ್ಸ್ ಅಧಿಕಾರಿ ಆನಂದ ಬಂದರಕಳ್ಳಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಿದ್ದಪ್ಪ ಗಂಗಾಧರ, ಈಶ್ವರ ಹೊಸಮನಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಇತರರು ವೇದಿಕೆಯಲ್ಲಿದ್ದರು.

ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ನಗರ ಬಸ್ ಉದ್ಘಾಟನೆ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಸಿ ಸ್ಲೀಪರ್ ಹಾಗೂ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು
ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ನಗರ ಬಸ್ ಉದ್ಘಾಟನೆ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಸಿ ಸ್ಲೀಪರ್ ಹಾಗೂ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು
ನಾನು ಕೆಕೆಆರ್‌ಡಿಬಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಂಡಳಿಯಿಂದ ₹ 5 ಕೋಟಿ ಬಿಡುಗಡೆ ಮಾಡಿಸಿ ನಗರ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಮತ್ತೆ ₹ 15 ಕೋಟಿ ನೀಡಿದ್ದರಿಂದ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದೆ
ಡಾ. ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಕಳೆದ ವರ್ಷ ಮಂಡಳಿಯಿಂದ ಬಸ್ ಖರೀದಿಗೆ ₹ 45 ಕೋಟಿ ಒದಗಿಸಿದ್ದೆವು. ಈ ಬಾರಿ ಮತ್ತೆ ₹ 50 ಕೋಟಿ ನೀಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಸಾರಿಗೆ ನಿಗಮ ₹ 100 ಕೋಟಿ ಕೊಟ್ಟರೆ ಹೆಚ್ಚು ಬಸ್ ಖರೀದಿಸಬಹುದು
ಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಕೆಕೆಆರ್‌ಡಿಬಿಯಿಂದ ಬಸ್‌ಗಳ ಖರೀದಿಗೆ ಶೇ 50ರಷ್ಟು ವೆಚ್ಚ ಭರಿಸಿದರೆ ನಾವು ಉಳಿದ ಶೇ 50 ಭರಿಸುತ್ತೇವೆ. ಈ ಬಗ್ಗೆ ಮಂಡಳಿ ಅಧ್ಯಕ್ಷರು ಉದಾರವಾಗಿ ಹಣ ನೀಡಬೇಕು
ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
20 ಐಷಾರಾಮಿ ಬಸ್ ಲೋಕಾರ್ಪಣೆ
ಸಮಾರಂಭಕ್ಕೂ ಮುನ್ನ ಸಚಿವ ರಾಮಲಿಂಗಾರೆಡ್ಡಿ ಅವರು 6 ಕಲ್ಯಾಣ ರಥ ಎಂಬ ವೋಲ್ವೊ ಎಸಿ ಸ್ಲೀಪರ್ ಬಸ್ ಹಾಗೂ 14 ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು. ಎಸಿ ವೋಲ್ವೊ ಬಸ್ ಕಲಬುರಗಿ–ಬೆಂಗಳೂರು ವಿಜಯಪುರ–ಬೆಂಗಳೂರು ಮಧ್ಯೆ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇತ್ತೀಚೆಗೆ ನಿಗಮಕ್ಕೆ ಸೇರ್ಪಡೆಯಾದ ಎಸಿ ಬಸ್‌ಗಳನ್ನು ಮೊದಲ ಬಾರಿಗೆ ಸಿಂಧನೂರು–ಬೆಂಗಳೂರು ಮಧ್ಯೆ ಸೇವೆಗೆ ನಿಯೋಜಿಸಲಾಗಿತ್ತು. ಇದೀಗ ಕಲಬುರಗಿ ವಿಜಯಪುರ ಜಿಲ್ಲೆಯ ಜನತೆಗೂ ಐಷಾರಾಮಿ ಎಸಿ ಬಸ್ ಸೌಲಭ್ಯ ಸಿಕ್ಕಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT