ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಿಮಾನ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ’

ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪ್ರಿಯಾಂಕ್ ಒತ್ತಾಯ
Last Updated 15 ಜೂನ್ 2022, 9:15 IST
ಅಕ್ಷರ ಗಾತ್ರ

ಕಲಬುರಗಿ: ‘ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ವಿರೋಧಿಸಿ ನಾಡಿನ ಮಠಾಧೀಶರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಲೇಖಕರು, ಹಲವು ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸ್ವಾಭಿಮಾನ ಇದ್ದರೇ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಪುಟದಿಂದ ಹೊರಬರಬೇಕು’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಇಲ್ಲಿನ ಜಗತ್ ವೃತ್ತದಲ್ಲಿ ಬುಧವಾರ ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿಯು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಮರುಪರಿಷ್ಕರಣೆ ಸಮಿತಿಯ ಪಠ್ಯಗಳನ್ನು ವಿರೋಧಿಸಿ ಆಯೋಜಿಸಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸರ್ಕಾರ ತನ್ನ ಅಹಂಗೆ ಕಟ್ಟು ಬೀಳದೆ, ಬಹು ಜನರ ಬೇಡಿಕೆಯನ್ನು ಈಡೇರಿಸಬೇಕು. ಇದು ಯಾವುದೇ ಒಂದು ಪಕ್ಷದ ಬೇಡಿಕೆ ಅಲ್ಲ. ರಾಜ್ಯದ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪುಸ್ತಕದಲ್ಲಿ ಸಮುದಾಯಗಳ ದಾರಿದೀಪವಾದ ಮಹಾನೀಯರಿಗೆ ಅನ್ಯಾಯ ಮಾಡಲಾಗಿದೆ. ಅವರ ಜೀವನ ಚರಿತ್ರೆಯನ್ನು ತಿರುಚಲಾಗಿದೆ. ಸಂವಿಧಾನದ ಮೌಲ್ಯಗಳಿಗೆ ಕತ್ತರಿ ಹಾಕಿ, ಆರ್‌ಎಸ್‌ಎಸ್‌ನ ತತ್ವ ಸಿದ್ಧಾಂತಗಳನ್ನು ಈ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಕೋಮುವಿನ ವಿಷಬೀಜವನ್ನು ವಿದ್ಯಾರ್ಥಿಗಳಿಗೆ ವೇಗವಾಗಿ ಬಿತ್ತಲಾಗಿದೆ. ಈ ಹಿನ್ನೆಲೆಯಲ್ಲಿ ಇದು ಸರಿಯಾದ ನಡೆಯಲ್ಲ ಎಂದು ಹಲವು ಚಿಂತಕರು, ತಜ್ಞರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ’ ಎಂದು ಹೇಳಿದರು.

‘ನಮಗೆ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ತಕರಾರು ಇಲ್ಲ. ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿ ಆಧುನಿಕತೆ ಇಲ್ಲ. ಪ್ರಗತಿಪರವಾದ ಚಿಂತನೆಗಳೂ ಇಲ್ಲ. ಈಗಿನ ಕಾಲಕ್ಕೆ ತಕ್ಕಂತಹ ಅಂಶಗಳು ಸೇರ್ಪಡೆ ಆಗಿಲ್ಲ. ವಿದ್ಯಾರ್ಥಿಗಳಿಗೆ ಬೇಕಾದ ವೈಜ್ಞಾನಿಕ ಮನೋಭಾವನೆ, ಇತಿಹಾಸ, ಪರಂಪರೆ, ಸಮಾನತೆಯ ಸಂದೇಶಗಳನ್ನು ಸಹ ತೆಗೆದು ಹಾಕಲಾಗಿದೆ. ಬುದ್ಧನಿಂದ ಹಿಡಿದು ಸುರಪುರದ ನಾಯಕರವರೆಗೂ ಇತಿಹಾಸ ತಿರುಚುವ ಕೆಲಸವು ನಡೆದಿದೆ. ಯಾರ ಮನವೊಲಿಸಲು ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಈ ಕೆಲಸ ಮಾಡಿದ್ದಾರೆ‘ ಎಂದು ಅವರು ಪ್ರಶ್ನಿಸಿದರು.

‘ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಎರಡೂವರೆ ವರ್ಷ ತೆಗೆದುಕೊಂಡಿತ್ತು. ಅದರಲ್ಲಿ 27 ಉಪಸಮಿತಿಗಳು, ಒಂದು ಉನ್ನತ ಮಟ್ಟದ ಸಮಿತಿ ಇತ್ತು. ಸದನದಲ್ಲಿ ಈ ಬಗ್ಗೆ ಚರ್ಚೆಯೂ ಆಗಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಎರಡೇ ತಿಂಗಳಲ್ಲಿ ಪರಿಷ್ಕರಣೆ ಮಾಡಿ, ಎಲ್ಲವನ್ನೂ ತಿರುಚಿ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ಅಧಿಕೃತ ಆದೇಶ ಇಲ್ಲದೆ ಸಮಿತಿ ರಚನೆಯಾಗಿದೆ. ಯಾವುದೇ ಮಾನದಂಡದ ಇಲ್ಲದೆ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆದೇಶ ಇಲ್ಲದೆಯೇ ₹150 ಕೋಟಿ ಖರ್ಚುಮಾಡಿ ಪಠ್ಯಪುಸ್ತಕ ಮುದ್ರಿಸಲಾಗಿದೆ. ಘಟನೋತ್ತರ ಮಂಜೂರಾತಿಗೆ ಖರ್ಚು ಮಾಡುವುದಾದರೇ ಈ ಸರ್ಕಾರದಲ್ಲಿ ಹೇಳುವವರು ಕೇಳುವರು ಇದ್ದಾರೆಯೇ? ಕೇಶವಕೃಪ ಅವರು ಸಚಿವ ಸಂ‍ಪುಟದಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆಯೇ? ರೋಹಿತ್ ಚಕ್ರತೀರ್ಥ, ಬಿ.ಸಿ. ನಾಗೇಶ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಏಕೆ ಹೆದರುತ್ತಿದ್ದಾರೆ? ಎಂದು ಪ್ರಿಯಾಂಕ್ ಪ್ರಶ್ನಿಸಿದರು.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಬಿಜೆಪಿ ತನ್ನ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡುತ್ತಿದೆ. ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡಲು ಹೋರಟಿದೆ. ಅದು ನಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವರಲ್ಲಿ ಸಮಾಜದ ಎಲ್ಲಾ ಬಗೆಯ ಜನರನ್ನು ಗೌರವಿಸುವಂತಹ ಮನೋಭಾವ ಬೆಳೆಸಬೇಕು. ಬುದ್ಧ,ಬಸವಣ್ಣ, ನಾರಾಯಣಗುರು, ಕುವೆಂಪು ಅವರಂತಹ ಮಹಾನ್ ಪುರುಷರನ್ನು ಅಪಮಾನ ಮಾಡಿದ್ದು ಖಂಡಿನೀಯ’ ಎಂದು ಹೇಳಿದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ‘ಬಿಜೆಪಿ ಸರ್ಕಾರ ಆದೇಶ ಇಲ್ಲದೆ, ಯೋಗ್ಯತೆ ಇಲ್ಲದವರನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿದನ್ನು ಖಂಡಿಸಿ ಬಿಜೆಪಿಯೇತರ ಪಕ್ಷಗಳು, ಸಂಘಟನೆಗಳು ಒಗ್ಗೂಡಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಕುವೆಂಪು ಅವರ ನಾಡಗೀತೆಗೆ ಅವಮಾನ ಮಾಡಿದವರಿಗೆ ಸನ್ಮಾನ ಮಾಡಿ, ಸಾಹಿತಿಗಳನ್ನು ತುಕಡೆ ತುಕಡೆ ಗ್ಯಾಂಗ್ ಎಂದು ಅಪಮಾನ ಮಾಡಿದ ಬಿ.ಸಿ.ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಸಚಿವ ಸ್ಥಾನದಲ್ಲಿ ಉಳಿಯುವ ಅರ್ಹತೆ ಅವರಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಮ್ಮೆ ನಾವು ತಪ್ಪು ಮಾಡಿದ್ದೇವೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಈಗ ನಾವು ತಪ್ಪು ಮಾಡಿಲ್ಲ. ಅದೇ ಪಠ್ಯಪುಸ್ತಕಗಳನ್ನು ಮುಂದುವರೆಸುತ್ತೇವೆ ಎನ್ನುತ್ತಾರೆ. ಬಿಜೆಪಿಯವರಿಗೆ ಎಷ್ಟು ನಾಲಿಗೆ ಇವೆ? ಬಿಜೆಪಿ ರಾಜಕೀಯ ಪಕ್ಷವಲ್ಲ. ಅದು ಆರ್‌ಎಸ್‌ಎಸ್‌ನ ಒಂದು ಭಾಗ. ನಾಗಪುರದಲ್ಲಿ ಕುಳಿತವರ ಮಾತುಗಳನ್ನು ಕೇಳಿ ಕರ್ನಾಟಕದ ಭಾವೈಕ್ಯ ಪರಂಪರೆಯನ್ನು ನಾಶ ಮಾಡಿ, ನಮ್ಮ ಮಕ್ಕಳ ತಲೆಯೊಳಗೆ ವಿಷ ತುಂಬವ ಪಠ್ಯ ತಂದಿದ್ದಾರೆ. ಇದನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಡಾ. ಅಜಯ್ ಸಿಂಗ್, ಕನೀಜ್ ಫಾತಿಮಾ, ಅಂಜಲಿ ನಿಂಬಾಳಕರ್, ಕೆಪಿಸಿಸಿ ರಾಜ್ಯ ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಬಾಬುರಾವ ಚವ್ಹಾಣ್, ಶಿವಾನಂದ ಪಾಟೀಲ, ಆರ್.ಕೆ.‌ ಹುಡಗಿ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ, ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡರಾದ ಎಸ್‌.ಎಂ. ಶರ್ಮಾ, ವಿ.ಜಿ. ದೇಸಾಯಿ, ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT