ಬುಧವಾರ, ಡಿಸೆಂಬರ್ 2, 2020
16 °C
ಗ್ರಾಮದಲ್ಲಿ ಸಿಗುತ್ತಾರೆ 7 ಭಾಷೆ ಬಲ್ಲವರು, 5 ಭಾಷೆ ಮಾತನಾಡುತ್ತಾರೆ ಶೇ 20 ಮಕ್ಕಳು

ಬಹು ಭಾಷೆಗಳ ಸಂಗಮ ತಾಣ ಶಾದಿಪುರ

ಜಗನ್ನಾಥ ಡಿ.ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಪುಟ್ಟ ಗ್ರಾಮ ಶಾದಿಪುರವು ಬಹು ಭಾಷೆಗಳ ಸಂಗಮ ತಾಣ. ಇಲ್ಲಿ ಗಡಿ ವಿವಾದ ಇದ್ದರೂ ಭಾಷೆ ಮಾತ್ರ ವಿವಾದಕ್ಕೆ ಒಳಗಾಗಿಲ್ಲ.

ಇಲ್ಲಿ ಕನ್ನಡ, ತೆಲುಗು, ಮರಾಠಿ, ಹಿಂದಿ ಹಾಗೂ ಲಂಬಾಣಿ ಭಾಷೆಗಳನ್ನು ಮಾತನಾಡುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಇಂಗ್ಲಿಷ್‌ ಮತ್ತು ಉರ್ದು ಭಾಷೆಗಳ ಪರಿಚಯ ಹೊಂದಿದ್ದಾರೆ. ಜನರು ಪರಸ್ಪರ ಭಾಷೆಗಳನ್ನು ಗೌರವಿಸುತ್ತ ಭಾವೈಕ್ಯದಿಂದ ಜೀವನ ನಡೆಸುತ್ತಿದ್ದಾರೆ.

ಇಲ್ಲಿ ಭಾಷೆಗಳು ಜಾತಿ ಮತಗಳಿಂದಲೇ ಚಾಲ್ತಿಗೆ ಬಂದರೂ ಕೂಡ ಅವುಗಳನ್ನು ಎಲ್ಲರೂ ಅಪ್ಪಿಕೊಂಡು ಒಪ್ಪಿಕೊಂಡಿದ್ದಾರೆ.

ಶಾದಿಪುರವು ಗ್ರಾಮ ಪಂಚಾಯತಿನ ಕೇಂದ್ರ ಸ್ಥಾನ. ಇಲ್ಲಿ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿವೆ. ಶಾದಿಪುರ, ಚಿಂದಾನೂರು ಮತ್ತು ಚಿಕ್ಕಲಿಂಗದಳ್ಳಿ ಎಂಬ ಮೂರು ಕಂದಾಯ ಗ್ರಾಮಗಳಿವೆ. ಸುತ್ತಲೂ 7 ತಾಂಡಾಗಳಿವೆ. ಇದರಿಂದ ಇಲ್ಲಿ ಲಂಬಾಣಿಗರೇ ಬಹುಸಂಖ್ಯಾತರಾಗಿದ್ದಾರೆ.

ಇಲ್ಲಿ ನಮ್ಮಷ್ಟಕ್ಕೆ ನಾವು ಹೆಜ್ಜೆ ಹಾಕುತ್ತ ಹೋದರೂ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಮಾರು ಐದಾರು ಭಾಷೆಗಳನ್ನು ಬಳಸುವುದು ನಮ್ಮ ಕಿವಿಗೆ ಅಪ್ಪಳಿಸುತ್ತವೆ. ಜನ ಸಾಮಾನ್ಯರು ಮಾತನಾಡುವ ಭಾಷೆ ಪಟ್ಟಿ ಮಾಡಿದರೆ 7 ಭಾಷೆ
ಬಲ್ಲವರೂ ಇಲ್ಲಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ 2– ಭಾಷೆ ಮಾತನಾಡುವ ಮಕ್ಕಳ ಸಂಖ್ಯೆ ಶೇ 25ರಿಂದ 30 ಇದೆ. ಪ್ರೌಢ ಶಾಲೆಯಲ್ಲಿ ಇದರ ಪ್ರಮಾಣ ಶೇ 40 ದಾಟುತ್ತದೆ. ಶೇ 15ರಿಂದ 20ರಷ್ಟು ಮಕ್ಕಳಿಗೆ  ಐದು ಭಾಷೆಗಳು ಗೊತ್ತು. ವಯಸ್ಕರಲ್ಲಿ ಶೇ 90 ಜನರು ಬಹು ಭಾಷಿಕರಾಗಿದ್ದಾರೆ. ಮಹಿಳೆಯರಲ್ಲಿ ಶೇ 50ಕ್ಕಿಂತ ಅಧಿಕ ಮಂದಿ ಬಹುಭಾಷಿಕರು.

ಶಾದಿಪುರ ಆದದ್ದು ಹೇಗೆ?

ಈಗಿನ ಶಾದಿಪುರವು ಹಲವು ಶತಮಾನಗಳ ಹಿಂದೆ ಎತ್ತರದ ಗುಡ್ಡವಾಗಿತ್ತು. ಆಗ ದೇಶದಲ್ಲಿ ಪ್ಲೇಗ್, ಕಾಲರಾದಂತಹ ಮಹಾಮಾರಿ ರೋಗಗಳು ಉಲ್ಬಣಿಸಿದ್ದವು. ರೋಗಗಳಿಗೆ ಹೆದರಿ ಊರು ತೊರೆದಾಗ ಶಾದಿಪುರ ರೂಪುಗೊಂಡಿತು.

ವನ್ಯಜೀವಿಧಾಮದಲ್ಲಿರುವ ಶೇರಿಭಿಕನಳ್ಳಿ ಗ್ರಾಮವನ್ನು ತೊರೆದ ಜನರು ಇಲ್ಲಿಗೆ ಬಂದು ಸೇರಿದರು. ಕೆಲವರು ಹರಿದು ಹಂಚಿ
ಹೋದರು. ಹೀಗೆ ಅಸ್ತಿತ್ವಕ್ಕೆ ಬಂದ ಈ ಗ್ರಾಮಕ್ಕೆ ಶಾದಿಪುರ ಹೆಸರು ಬರಲು ಗ್ರಾಮದ ಶೇಕ್‍ಶಾವಲಿ ಪೀರ್ ದರ್ಗಾ ಕಾರಣವಾಗಿದೆ. ಶಾವಲಿ ಪೀರ್ ಮುಂದೆ ಶಾದಿಪುರ ಆಗಿರಬಹುದು ಎನ್ನುತ್ತಾರೆ ಹಿರಿಯರಾದ ರಾಮಚಂದ್ರ ಪಟೇಲ್.

ಇದು ನಿಜಾಮನ ಜಹಾಗೀರು ಗ್ರಾಮ. ಇಲ್ಲಿನ ಮಾವಿನ ನೆಡುತೋಪನ್ನು ಅವನ ವಂಶಸ್ಥರೇ ನೋಡಿಕೊಳ್ಳುತ್ತಿದ್ದರು. ದೇಶ ವಿದೇಶಗಳಿಂದ ತಂದಿದ್ದ ಮಾವಿನ ಬಗೆ ಬಗೆಯ ತಳಿಯ ಸಸಿಗಳನ್ನು ಇಲ್ಲಿ ನೆಟ್ಟು ಬೆಳೆಸಲಾಗಿತ್ತು. ನಿಜಾಮನ ಮೊಮ್ಮಗಳು ಈಗ ಇಟಲಿಯಲ್ಲಿ ನೆಲೆಸಿದ್ದಾರೆ. 1970 ಕ್ಕಿಂತಲೂ ಮೊದಲು ಅವರು ಪ್ರತಿ ವರ್ಷ ಇಲ್ಲಿಗೆ ಬರುತ್ತಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು