ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಪಾಲಿಕೆಯಿಂದ ಸಿಗದ ನೀರು; ಬಸವಳಿದ ಜನ

10ರಿಂದ 11 ದಿನಗಳಿಗೊಮ್ಮೆ ನೀರು ಪೂರೈಕೆ; ಅದೂ ಸಹ ಕಲುಷಿತ
Published 27 ಮಾರ್ಚ್ 2024, 5:09 IST
Last Updated 27 ಮಾರ್ಚ್ 2024, 5:09 IST
ಅಕ್ಷರ ಗಾತ್ರ

ಕಲಬುರಗಿ: ಸೂರ್ಯನ ಪ್ರಖರ ಬಿಸಿಲಿಗೆ ಕುಸಿಯುತ್ತಿರುವ ನೀರಿನ ಸೆಲೆ, ನಲ್ಲಿಗಳಿದ್ದರೂ ಬಾರದ ಜೀವಜಲ. ನೀರಿಗಾಗಿ 10ರಿಂದ 11ದಿನ ಕಾಯಬೇಕಾದ ಸ್ಥಿತಿ, ನೀರಿನ ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ನೀರು ಪೂರೈಕೆ ಮಾಡುವಲ್ಲಿ ಎಡವಿದ ಅಧಿಕಾರಿಗಳು, ಪಾಲಿಕೆಯಿಂದ ನೀಡುವ ಕೆಲ ಟ್ಯಾಂಕರ್‌ ನೀರು ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿರುವ ಸ್ಥಿತಿ...

ನಗರದ ವಾರ್ಡ್‌ ನಂಬರ್‌ 32ರಲ್ಲಿ ಕಂಡುಬರುವ ದೈನಂದಿನ ಸ್ಥಿತಿ ಇದು. ಸಾಯಿ ನಗರ, ಗುಬ್ಬಿ ಕಾಲೊನಿ, ಪ್ರಗತಿ ಕಾಲೊನಿ, ವಿದ್ಯಾನಗರ, ಬಡೇಪುರ ಕಾಲೊನಿ ಸೇರಿ 8 ಕಾಲೊನಿಗಳು ಇದ್ದು, ಸುಮಾರು 8ರಿಂದ 10 ಸಾವಿರ ಜನ ವಾಸವಾಗಿದ್ದಾರೆ. ದಿನವಿಡೀ ನೀರಿನ ಸಮಸ್ಯೆಯಿಂದ ತೀವ್ರ ಸಂಕಟ ಎದುರಿಸುತ್ತಿದ್ದಾರೆ.

ಪಾಲಿಕೆಯ ಅಧಿಕಾರಿಗಳು ಸಭೆ ಮಾಡಿ 5 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕು ಎಂಬ ನಿಯಮವನ್ನು ರೂಪಿಸಿದ್ದಾರೆ. ಆದರೇ ಇದು ವಾರ್ಡ್‌ ನಂಬರ್ 32ಕ್ಕೆ ಮಾತ್ರ ಅನ್ವಯವಾಗುತ್ತಿಲ್ಲ. ಮಹಿಬೂಬ್‌ ನಗರ ವ್ಯಾಪ್ತಿಯ ಟ್ಯಾಂಕ್‌ ಮೂಲಕ ವಾರ್ಡ್‌ಗೆ ನೀರು ಸರಬರಾಜು ಆಗುತ್ತಿದೆ. ಅಲ್ಲಿ ಎಲ್‌ ಅಂಡ್‌ ಟಿ ಹಾಗೂ ಕೆಳ ಹಂತದ ಅಧಿಕಾರಿಗಳ ಮಾತು ಕೇಳದೆ ಮಹಿಬೂಬ್‌ ನಗರ ವಾರ್ಡ್‌ ವ್ಯಾಪ್ತಿಗೆ ಹೆಚ್ಚಿನ ಒತ್ತು ನೀಡಿ ನೀರು ಹರಿಸುತ್ತಾರೆ. ಇದರಿಂದ ನೀರಿನ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಬಡಾವಣೆ ನಿವಾಸಿಗಳು.

ವಾರ್ಡ್‌ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕೊಳವೆಬಾವಿ ಇದ್ದು, ಅದರಲ್ಲಿ 12ರಲ್ಲಿ ಸ್ವಲ್ಪ ನೀರಿದೆ. ಸರಿಯಾಗಿ ಮೋಟರ್‌ ವ್ಯವಸ್ಥೆ ಇಲ್ಲ. ಗುಬ್ಬಿ ಕಾಲೊನಿಯ ಪುರಾತನ ಕಾಲದ ಬಾವಿಯಿದ್ದು, ಅದಕ್ಕೆ ಮೋಟರ್ ಅಳವಡಿಸಿ ನೀರು ಪೂರೈಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಕಳೆದ ವಾರ ಎಲ್‌ ಅಂಡ್‌ ಟಿ ಸಂಸ್ಥೆ ಕಚೇರಿ ಬೀಗ್‌ ಹಾಕಿ ಪ್ರತಿಭಟನೆ ಸಹ ಮಾಡಲಾಗಿತ್ತು. ಆದರೂ ಈವರೆಗೆ ಸಮಸ್ಯೆ ಮಾತ್ರ ಹಾಗೇ ಇದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಗಮನ ಹರಿಸಿ ಮೋಟರ್‌ ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಇತ್ಯರ್ಥ ಮಾಡಬೇಕು ಎನ್ನುತ್ತಾರೆ ಬಡಾವಣೆ ನಿವಾಸಿ ಸಿದ್ದು ಬಿರಾದಾರ.

‘ಪಾಲಿಕೆಯಿಂದ ದಿನಕ್ಕೆ 2ರಿಂದ 3 ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಾರೆ. ಅದು ಯಾವುದಕ್ಕೂ ಸಾಗುತ್ತಿಲ್ಲ. ಪ್ರಭಾವಿಗಳು ತಮ್ಮ ಮನೆಗೆ ಎಲ್ಲ ನೀರು ಹಾಕಿಕೊಂಡು ಕಳಿಸುತ್ತಾರೆ. ಇದರಿಂದ ನೀರಿನ ಸಮಸ್ಯೆ, ಸಮಸ್ಯೆಯಾಗಿಯೇ ಉಳಿದಿದೆ. ಆದ್ದರಿಂದ ದಿನಾಲೂ 3 ಟ್ರ್ಯಾಕ್ಟರ್‌ ಮೂಲಕ ನಿರಂತರವಾಗಿ ಬಡಾವಣೆ ನಿವಾಸಿಗಳಿಗೆ ನೀರು ಪೂರೈಕೆ ಮಾಡಬೇಕು‘ ಎನ್ನುತ್ತಾರೆ ಸಿದ್ದು ಬಿರಾದಾರ.

ಪಾಲಿಕೆಯಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಇರುವುದರಿಂದ ಪ್ರತಿ ಟ್ಯಾಂಕರ್‌ಗೆ ₹ 800 ಹಣ ನೀಡಿ ನೀರು ಖರೀದಿಸಿ ಬಳಕೆ ಮಾಡಬೇಕಾದ ಅನಿವಾರ್ಯತೆ ಇದೆ. ದೊಡ್ಡ ಕುಟುಂಬ ಇರುವುದರಿಂದ ನೀರು ಸಾಕಾಗುವುದಿಲ್ಲ. ಹೆಚ್ಚುವರಿ ಟ್ಯಾಂಕರ್‌ ಮೂಲಕ ಪಾಲಿಕೆಯವರು ನೀರು ಪೂರೈಕೆ ಮಾಡಬೇಕು ಎನ್ನುತ್ತಾರೆ ಅಲ್ಲಿನ ನಿವಾಸಿ ಸುನಿಲ್‌.

ವಾರ್ಡ್‌ನ ತೆಗೆನೂರು ಕಾಲೇಜು, ಗುಬ್ಬಿ ಬಡಾವಣೆ ಸೇರಿದಂತೆ ಇನ್ನು ಎರಡು ಸ್ಥಳಗಳಲ್ಲಿ ಯುಜಿಡಿ ಲೀಕೇಜ್‌ ಆಗಿ ರಸ್ತೆಯ ಮೇಲೆ ನೀರು ನಿಂತು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಿದೆ. ಇದರಿಂದ ವಾಹನ ಸವಾರರಿಗೂ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ನಿವಾಸಿ ಮಲ್ಲಿಕಾರ್ಜುನ ಸುಣಗಾರ.

ಕಲಬುರಗಿಯ ಗುಬ್ಬಿ ಕಾಲೊನಿಯಲ್ಲಿರುವ ಪುರಾತನ ಕಾಲದ ಬಾವಿ
ಕಲಬುರಗಿಯ ಗುಬ್ಬಿ ಕಾಲೊನಿಯಲ್ಲಿರುವ ಪುರಾತನ ಕಾಲದ ಬಾವಿ
ಮಹಾನಗರ ಪಾಲಿಕೆಯ ನಳದಿಂದ ಪೂರೈಕೆಯಾದ ಕಲುಷಿತ ನೀರು
ಮಹಾನಗರ ಪಾಲಿಕೆಯ ನಳದಿಂದ ಪೂರೈಕೆಯಾದ ಕಲುಷಿತ ನೀರು

‘₹ 10 ಸಾವಿರ ಖರ್ಚು ಮಾಡಿ ಮನೆಗೆ ನಲ್ಲಿ ನೀರಿನ ಸಂಪರ್ಕ ಮಾಡಿಕೊಂಡಿದ್ದೇನೆ. ಆದರೆ ಒಂದು ದಿನವೂ 2 ಕೊಡ ನೀರು ತುಂಬಿಕೊಂಡಿಲ್ಲ. ಬಿಲ್‌ ಮಾತ್ರ ಕೇಳಲು ಬರುತ್ತಾರೆ

-ವಿಜಯಕುಮಾರ್‌ ಸಂಗಶೆಟ್ಟಿ ಗುಬ್ಬಿ ಕಾಲೊನಿ ನಿವಾಸಿ

ಸುಮಾರು ವರ್ಷಗಳಿಂದ ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ಸರಿದೂಗಿಸಲು ₹ 10 ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಾಣ ಮಾಡಬೇಕು

-ಚಂದ್ರಕಾಂತ ಡಿಗ್ಗಿಕರ ಬಡಾವಣೆ ನಿವಾಸಿ

ನೀರಿನ ಸಮಸ್ಯೆ ಅಧಿಕಾರಿಗಳಿಗೆ ತಿಳಿಸಿದರೆ ಭರವಸೆ ಮಾತ್ರ ಉತ್ತರವಾಗಿದ್ದು ಸಮಸ್ಯೆ ಬಗೆಹರಿಬೇಕು ಇಲ್ಲವಾದರೆ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ

-ಯಂಕಮ್ಮ ಗುತ್ತೇದಾರ ವಾರ್ಡ್‌ 32ರ ಪಾಲಿಕೆ ಸದಸ್ಯೆ

‘ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ನೀರು ಪೂರೈಕೆ’

‘ಕೆಲ ದಿನಗಳ ಹಿಂದೆ ವಾಲ್ವಮನ್‌ಗಳ ಸಮಸ್ಯೆಯಿಂದ ಗುಬ್ಬಿ ಕಾಲೊನಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಈಗ ಯಾವುದೇ ಸಮಸ್ಯೆ ಇಲ್ಲ. ತೀವ್ರ ಸಮಸ್ಯೆಯಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬರದಿಂದ ಬೋರವೆಲ್‌ಗಳ ನೀರು ಕಡಿಮೆಯಾದ ಸ್ಥಳಗಳಲ್ಲಿ ನೀರು ಪೂರೈಕೆ ಮಾಡಲು ಮಹಾನಗರ ಪಾಲಿಕೆಯಿಂದ 40 ಟ್ಯಾಂಕರ್‌ ನೀರು ಮೀಸಲಿಡಲಾಗಿದೆ. ವಾರ್ಡ್‌ ವ್ಯಾಪ್ತಿಯ ಬಾವಿಗೆ ಮೋಟರ್‌ ಅಳವಡಿಸಲು ಹಾಗೂ ಕೊಳವೆ ಬಾವಿಗಳ ಮೋಟರ್‌ ದುರಸ್ತಿಗೆ ಪಾಲಿಕೆ ಸದಸ್ಯರು ಕೋರಿದ್ದಾರೆ. ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT