ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ ಆ್ಯಂಡ್ ಟಿ ವಿರುದ್ಧ ದೂರು | ಕಾನೂನು ಕ್ರಮದ ಬಗ್ಗೆ ಚರ್ಚೆ:ಪ್ರಿಯಾಂಕ್ ಖರ್ಗೆ

Published 22 ಜೂನ್ 2024, 8:16 IST
Last Updated 22 ಜೂನ್ 2024, 8:16 IST
ಅಕ್ಷರ ಗಾತ್ರ

ಕಲಬುರಗಿ: ‘ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ ಮಹಾನಗರಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ, ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ಕಂಪನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿಯಲ್ಲಿ ನೀರು ಪೂರೈಕೆಗಾಗಿ ತೋಡಿದ್ದ ಹೊಂಡದಲ್ಲಿ ಬಿದ್ದು ಕಳೆದ ವರ್ಷ ಇಬ್ಬರು ಬಾಲಕರು ಮೃತಪಟ್ಟಿದ್ದರು. ಎರಡು ಬಾರಿ ಸಭೆ ನಡೆಸಿ, ಎಚ್ಚರಿಕೆ ಕೊಟ್ಟಿದ್ದರೂ ಕಂಪನಿ ಅಧಿಕಾರಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕಂಪನಿ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆಗ ಮುಖ್ಯಮಂತ್ರಿಗಳು, ‘ಮೂರು ಮಹಾನಗರಗಳಿಗೆ ನೀರು ಸರಬರಾಜಿನ ಮಹತ್ವದ ಯೋಜನೆ ಇದು. ಕಂಪನಿಯವರನ್ನು ಕರೆಯಿಸಿ ಮಾತನಾಡೋಣ’ ಎಂದರು. ಹೀಗಾಗಿ, ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಎಲ್‌ ಆ್ಯಂಡ್ ಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರನ್ನು ದೆಹಲಿಯಿಂದ ಕರೆಯಿಸಿ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ನಾನು ಸಹ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿಕಾಂತ ಅವರ ಜತೆಗೆ ಚರ್ಚಿಸಿದ್ದೇನೆ. ಮುಖ್ಯ ಕಾರ್ಯದರ್ಶಿಗಳು ಸಹ ಈ ಬಗ್ಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಪ್ರಸ್ತಾಪಿಸಿ, ಕಲಬುರಗಿಗೆ ಸಂಬಂಧಿಸಿದಂತೆ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ವಿಚಾರ ಮಾಡುತ್ತೇವೆ. ನೀರು ಸರಬರಾಜು ಮಹತ್ವವಾಗಿದ್ದು, ಏಕಾಏಕಿ ನಿರ್ಧಾರ ತೆಗೆದುಕೊಂಡರೆ ತ್ರಿಶಂಕು ಸ್ಥಿತಿ ಎದುರಿಸಬೇಕಾಗುತ್ತದೆ' ಎಂದರು.

'ಬರಗಾಲದ ಬಳಿಕ ಧಾರಾಕಾರವಾಗಿ ಮಳೆಯಾಗಿದ್ದರಿಂದ ಜಲಮೂಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ನಗರಕ್ಕೆ ಸರಬರಾಜು ಆಗುವ ನೀರಿನಲ್ಲಿ ಯಥೇಚ್ಛ ಮಣ್ಣು ಮಿಶ್ರವಾಗಿದೆ. ಹೀಗಾಗಿ, ಕಲುಷಿತ ನೀರು ಮನೆಗಳಿಗೆ ಸರಬರಾಜಾದರೆ ಮತ್ತಷ್ಟು ಹಾನಿಯಾಗಬಹುದು ಎಂದು ಮುನ್ನೆಚ್ಚರಿಕೆ ದೃಷ್ಟಿಯಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಕಲುಷಿತ ನೀರು ಬಳಸದಂತೆ ಮನವಿ ಮಾಡಿದ್ದಾರೆ. ನೀರಿನ ಗುಣಮಟ್ಟದಲ್ಲಿ ಸಮಸ್ಯೆಯಾಗಿದೆ ಹೊರತು ಪ್ರಮಾಣದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ ಕಲುಷಿತ ನೀರು ಪೂರೈಕೆಯಿಂದಾದ ಆರೋಗ್ಯ ಸೇವೆಯಲ್ಲಿನ ವ್ಯತ್ಯಯ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, 'ಏಕಾಏಕಿ ಜೋರು ಮಳೆ ಬಂದು ಕಲುಷಿತ ನೀರು ಸರಬರಾಜು ಆಗಿದೆ. ರೋಗಿಗಳ ಆರೋಗ್ಯ ದೃಷ್ಟಿಯಿಂದ ವೈದ್ಯರು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಕ್ಯಾಥ್‌ಲ್ಯಾಬ್, ಒಪಿಡಿ, ಟಿಎಂಟಿ, ಇಸಿಜಿ, ಅಲ್ಟ್ರಾಸೌಂಡ್ ಸೇರಿದಂತೆ ಎಲ್ಲ ವಿಧದ ಆರೋಗ್ಯ ಸೇವೆಗಳು ಕಾರ್ಯನಿರ್ವಹಿಸಿದ್ದವು' ಎಂದು ಹೇಳಿದರು.

'ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ರಿಸ್ಕ್ ತೆಗೆದುಕೊಳ್ಳಬಾರದು ಎಂದು ವೈದ್ಯರು ನಾಲ್ಕು ದಿನಗಳ ಮಟ್ಟಿಗೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿಕೆ ಮಾಡಿದ್ದಾರೆ. ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗಳಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ.‌ ರಾಜ್ಯದ ಜನರಿಗೆ ಜಯದೇವ ಆಸ್ಪತ್ರೆಯ ಮೇಲೆ ವಿಶ್ವಾಸವಿದೆ. ಪ್ರತಿಪಕ್ಷಗಳ ನಾಯಕರು ಇದರಲ್ಲಿ ರಾಜಕೀಯ ಮಾಡಬಾರದು. ಪ್ರತಿಪಕ್ಷಗಳ ಸಕರಾತ್ಮಕ ಮತ್ತು ರಚನಾತ್ಮಕ ಸಲಹೆಗಳು ಇದ್ದರೆ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT