ಭಾನುವಾರ, ಮೇ 9, 2021
25 °C
ಗೋಳಾ (ಬಿ): ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮಾದರಿ ಕಾರ್ಯ

ಪಕ್ಷಿಗಳ ದಾಹ ನೀಗಿಸಲು ‘ಗುಟುಕು ಅಭಿಯಾನ’

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಆಳಂದ: ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ವಿಪರೀತ ನೀರಿನ ಅಭಾವ. ಇಂಥ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳು ನೀರು ಸಿಗದೆ ಬಾಯಾರಿಕೆ ತೀರಿಸಿಕೊಳ್ಳಲು ಒದ್ದಾಡುತ್ತವೆ. ಮೂಕ ಹಕ್ಕಿಗಳ ಸಂಕಟವನ್ನು ಅರಿತ ತಾಲ್ಲೂಕಿನ ಗೋಳಾ (ಬಿ) ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ‘ಗುಟುಕು ಅಭಿಯಾನ’ದ ಮೂಲಕ ಅವುಗಳಿಗೆ ಆಹಾರ, ನೀರು ಒದಗಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ.

ಶಿಕ್ಷಕರು ಈ ಕಾರ್ಯದ ಬಗ್ಗೆ ಪ್ರಸ್ತಾಪಿಸಿದಾಗ ಶಾಲೆಯ 130 ವಿದ್ಯಾರ್ಥಿಗಳೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ತಮ್ಮ ಮನೆಯಲ್ಲಿರುವ ಹಳೆಯ ಡಬ್ಬಿ, ಮಡಕೆ, ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಿಗೆ ದಾರ ಕಟ್ಟಿ, ಅರವಟಿಕೆಗಳನ್ನಾಗಿ ರೂಪಿಸಿದ್ದಾರೆ.

ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಈಚೆಗೆ ಇಡೀ ಗ್ರಾಮದಲ್ಲಿ ಜಾಗೃತಿ ಜಾಥಾ ಕೈಗೊಂಡು ಪಕ್ಷಿಗಳ ಮಹತ್ವ, ಅವುಗಳ ರಕ್ಷಣೆ ಮಾಡುವುದರ ಕುರಿತು ಕರಪತ್ರ ಹಂಚಿದ್ದಾರೆ.

ಅಲ್ಲದೆ ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಅಂಗನವಾಡಿ ಕೇಂದ್ರ, ದೇವಸ್ಥಾನಗಳ ಆವರಣ ಸೇರಿದಂತೆ ವಿವಿಧೆಡೆ ನೂರಕ್ಕೂ ಹೆಚ್ಚು ಮರಗಳಿಗೆ ಅರವಟಿಕೆಗಳನ್ನು ದಾರದಿಂದ ಕಟ್ಟಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನೀರು, ಆಹಾರ ಹಾಕುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ
ಯಶಸ್ವಿಯಾಗಿದ್ದಾರೆ.

‘ಗೋಳಾ (ಬಿ) ಗ್ರಾಮದಲ್ಲಿ ಬಿಸಿಲಿನ ಝಳಕ್ಕೆ ಜಲಮೂಲಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಬಾಯಾರಿಕೆಯಿಂದ ಬಳಲುವ ಪಕ್ಷಿಗಳ ಉಳಿವಿಗಾಗಿ ನಮ್ಮ ಶಾಲೆ ವಿದ್ಯಾರ್ಥಿಗಳು ಕೈಗೊಂಡಿರುವ ಕಾರ್ಯಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ಮನೆಗಳ ಮುಂದೆ ಇರುವ ಮರಗಳಿಗೆ ಅರವಟಿಕೆ ಅಳವಡಿಸಿ ನೀರು, ದವಸ ಧಾನ್ಯ ಹಾಕುತ್ತಿದ್ದಾರೆ’ ಎನ್ನುತ್ತಾರೆ ಇಕೋ ಕ್ಲಬ್ ಮುಖ್ಯಸ್ಥರೂ ಆದ ವಿಜ್ಞಾನ ಶಿಕ್ಷಕ ದೇವೀಂದ್ರ ಎಸ್.ಬಿರಾದಾರ.

‘ಪ್ರತಿದಿನ 3 ಸಲ ಬಾಟಲಿಗಳಲ್ಲಿ ನೀರು ತುಂಬಿಸುತ್ತೇವೆ. ಗುಬ್ಬಚ್ಚಿ, ಕಾಗೆ ಸೇರಿದಂತೆ ಹಲವು ಹಕ್ಕಿಗಳು, ಓತಿಕೇತ, ಅಳಿಲು ದವಸ- ಧಾನ್ಯಗಳನ್ನು ತಿಂದು, ನೀರು ಕುಡಿದು ಹೋಗುತ್ತಿರುವುದು ಸಂತೋಷ ತಂದಿದೆ. ಗುಬ್ಬಚ್ಚಿಗಳ ಚೀಂವ್, ಚೀಂವ್ ನಿನಾದ ಕೇಳಿ ಆನಂದಿಸುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

*ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗ್ರಾಮದಲ್ಲಿ ಬಹುತೇಕರು ಮನೆಯ ಆವರಣದಲ್ಲಿ ಅರವಟಿಕೆ ಹಾಕಿ ಹಕ್ಕಿಗಳಿಗೆ ನೀರು, ಆಹಾರ ಒದಗಿಸುತ್ತಿದ್ದಾರೆ

–ರವಿ ಕುಲಕರ್ಣಿ,ಮುಖ್ಯಶಿಕ್ಷಕ

*ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಅಭಿಯಾನ. ಸ್ವಯಂಪ್ರೇರಿತರಾಗಿ ಅರವಟಿಕೆ ತಯಾರಿಸಿ ಮರಗಳಿಗೆ ಕಟ್ಟಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದಾರೆ

–ದೇವೀಂದ್ರ ಎಸ್.ಬಿರಾದಾರ, ಇಕೋ ಕ್ಲಬ್ ಮುಖ್ಯಸ್ಥ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು