ಕಮಲಾಪುರ: ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಗಂಡೋರಿ ನಾಲಾ (ಬೆಳಕೋಟಾ) ಜಲಾಶಯದಿಂದ 250 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.
ಗಂಡೋರಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಶನಿವಾರ, ಭಾನುವಾರ ಮಳೆ ಪ್ರಮಾಣ ಹೆಚ್ಚಾಗಿತ್ತು. ಒಳ ಹರಿವು ಹೆಚ್ಚಾಗಿ ನೀರು ಅಪಾಯದ ಮಟ್ಟ ತಲುಪುವಂತಿತ್ತು. ಮುನ್ನಚ್ಚರಿಕೆ ಕ್ರಮವಾಗಿ 3 ಗೇಟ್ ತೆರೆದು 1250 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಸದ್ಯ 1650 ಕ್ಯುಸೆಕ್ ಒಳ ಹರಿವು ಇದೆ. 1.887 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಇದ್ದು, ಸದ್ಯ1.716 ಟಿಎಂಸಿ ನೀರಿದೆ. ಜಲಾಶಯ ಶೇ 90ರಷ್ಟು ಭರ್ತಿಯಾಗಿದೆ ಎಂದು ಜೆಇ ಶ್ರೀಕಾಂತ ಹೊಂಡಾಳೆ ತಿಳಿಸಿದರು.
ಸೋಮವಾರ ಮಧ್ಯಾಹ್ನ ಜಲಾಶಯದ ಹರಿವಿನ ಬಳಿ ಯುವಕರು, ಯುವತಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಪ್ರಜಾವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊ ಪ್ರಸಾರವಾಗುತ್ತಿದ್ದಂತೆ ಗಮನಿಸಿದ ಸಿಪಿಐ ಶಿವಶಂಕರ ಸಾಹು ಸ್ಥಳಕ್ಕಾಗಮಿಸಿ ಅಪಾಯ ವಲಯಗಳಲ್ಲಿ ತೆರಳದಂತೆ ತಾಕೀತು ಮಾಡಿದರು. ‘ಜಲಾಶಯದ ನಿರ್ವಹಣೆ ಮಾಡುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಕೇಳುವವರು ಯಾರು ಇಲ್ಲದಿದ್ದರೆ ಜನ ಎಲ್ಲಿ ಬೇಕಾದರು ತೆರಳುತ್ತಾರೆ. ಅಪಾಯ ಸಂಭವಿಸಿದರೆ ಯಾರು ಹೊಣೆ’ ಎಂದು ಜಲಾಶಯ ನಿರ್ವಹಣೆ ಸಿಬ್ಬಂದಿಗೆ ಎಚ್ಚರಿಸಿದರು.
ದಸ್ತಾಪುರ ಗ್ರಾಮದಲ್ಲಿ ಪ್ರವಾಹ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಸ್ತಾಪುರ ಗ್ರಾಮ ನಡುಗಡ್ಡೆಯಂತಾಗಿತ್ತು. ಗ್ರಾಮದ ಹಿಂಬದಿಯಲ್ಲಿ ಗಂಡೋರಿ ನಾಲೆ, ಮುಂಬದಿಯಲ್ಲಿ ಹಳ್ಳ ಹರಿಯುತ್ತದೆ. ಈ ಎರಡೂ ಕಡೆಗಳಲ್ಲಿ ಪ್ರವಾಹ ಉಂಟಾಗಿ ಸುತ್ತಲೂ ನೀರು ಆವರಿಸಿತ್ತು. ಸೇತುವೆ ಮೇಲೆ ಪ್ರವಾಹ ಉಂಟಾಗಿ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಸದ್ಯ ಸೇತುವೆ ಮೇಲೆ ಜನ ಜಾನುವಾರು ವಾಹನ ಸಂಚರಿಸದಂತೆ ಮುನ್ನಚ್ಚರಿಕೆ ವಹಿಸಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು. ತಹಶೀಲ್ದಾರ್ ಮೋಸಿನ್ ಅಹಮ್ಮದ ಭಾನುವಾರ ಭೇಟಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.