ಶುಕ್ರವಾರ, ಜೂನ್ 25, 2021
29 °C
ದಿಕ್ಸಂಗ (ಕೆ), ಜೇವರ್ಗಿ (ಕೆ) ಗ್ರಾಮಗಳ ರೈತರಲ್ಲಿ ಸಂತಸ; ಹದಗೆಟ್ಟ ಬ್ರಿಜ್‌ ದುರಸ್ತಿಗೆ ಆಗ್ರಹ

ಅಫಜಲಪುರ ಬ್ಯಾರೇಜ್‌ಗಳಿಗೆ ‘ಮಹಾ’ ನೀರು

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಬತ್ತಿ ಹೋಗಿದ್ದ ತಾಲ್ಲೂಕಿನ ದಿಕ್ಸಂಗಾ(ಕೆ), ಜೇವರ್ಗಿ(ಕೆ) ಗ್ರಾಮದ ಬ್ಯಾರೇಜ್‌ಗಳಿಗೆ ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ ಕರ್ನೂಲ ಕೆರೆಯಿಂದ ನೀರು ಬಿಟ್ಟಿದ್ದರಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮಗಳ ಹತ್ತಿರ ಹರಿಯುವ ಬೋರಿ ಹಳ್ಳಗಳ ಸೇತುವೆಗಳಿಗೆ 4– 5 ದಿನಗಳ ಹಿಂದೆ ಮಹಾರಾಷ್ಟ್ರದ ಬ್ಯಾರೇಜ್‌ಗಳ ಹೆಚ್ಚುವರಿ ನೀರು ಹರಿದು ಬಂದು ಅಕ್ಕಲಕೋಟ ತಾಲ್ಲೂಕಿನ ಸರಹದ್ದಿಗೆ ಬರುವ ಅಫಜಲಪುರ ತಾಲ್ಲೂಕಿನ ಎಲ್ಲಾ ಹಳ್ಳ ಕೊಳ್ಳಗಳಿಗೆ ನೀರು ಬಂದಿದೆ. ಆದರೆ ದಿಕ್ಸಂಗಾ(ಕೆ) ಹತ್ತಿರ ಸಣ್ಣ ನೀರಾವರಿ ಇಲಾಖೆಯವರು ನಿರ್ಮಿಸಿರುವ ಬ್ಯಾರೇಜ್‌ ಕಂ ಬ್ರೀಜ್‌ಗಳಿಗೆ ಅಳವಡಿಸಿರುವ ಗೇಟ್‌ಗಳು ಕಳಪೆಯಾಗಿದ್ದು, ಅವುಗಳ ಸೋರಿಕೆಯಿಂದ ಬಂದಿರುವ ನೀರು ಹರಿದು ಹೋಗಿ ಭೀಮಾನದಿ ಸೇರುತ್ತಿದೆ. ಆದರೆ ಜೇವರ್ಗಿ(ಕೆ) ಗ್ರಾಮದ ಬ್ಯಾರೇಜ್‌ ಕಂ ಬ್ರೀಜ್‌ನಲ್ಲಿ ನೀರು ತುಂಬಿಕೊಂಡಿದೆ ಎಂದು ರೈತರು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿಕೊಂಡರೂ ನೀರು ಬಿಡುವುದಿಲ್ಲ. ಆದರೆ ಅಕ್ಕಲಕೋಟ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಇರುವದರಿಂದ ಆ ಗ್ರಾಮಗಳ ವ್ಯಾಪ್ತಿಗೆ ಬರುವ ಬ್ಯಾರೇಜ್‌ಗಳ ಭರ್ತಿ ಮಾಡಲು ನೀರು ಬಿಟ್ಟಿದ್ದಾರೆ. ಹೀಗಾಗಿ ಹೆಚ್ಚಾದ ನೀರು ಅಫಜಲಪುರ ತಾಲ್ಲೂಕಿನ ಬೋರಿ ಹಳ್ಳಗಳಿಗೂ ಬಂದಿದೆ. ಆದರೆ ದಿಕ್ಸಂಗಾ(ಕೆ) ಗ್ರಾಮದ ಹತ್ತಿರ ಬ್ಯಾರೇಜ್‌ ಕಂ ಬ್ರೀಜ್‌ಗೆ ಅಳವಡಿಸಿರುವ ಗೇಟ್‌ಗಳು ಕಳಪೆ ಆಗಿದ್ದರಿಂದ ಅವುಗಳು ಸೋರಿಕೆಯಾಗುತ್ತಿದ್ದು, ನೀರು ನಿಲ್ಲುತ್ತಿಲ್ಲ ಎಂದು ನಂದರಗಾ ಗ್ರಾಮದ ಸಂತೋಷ ದೊಡ್ಡಮನಿ, ದಿಕ್ಸಂಗಾ ಗ್ರಾಮದ ಅಡಿವಪ್ಪ ದೊಡ್ಡಮನಿ ಹಾಗೂ ಗೌರ(ಬಿ) ಗ್ರಾಮದ ಭೀಮರಾವ್ ಗೌರ ತಿಳಿಸಿದರು.

ಪ್ರತಿ ವರ್ಷವು ಮಹಾರಾಷ್ಟ್ರ ಬ್ಯಾರೇಜ್‌ನಿಂದ ನೀರು ಬಿಟ್ಟಾಗ ಬ್ಯಾರೇಜ್‌ನಲ್ಲಿ ನೀರು ನಿಲ್ಲದೇ ಹರಿದು ಹೋಗುತ್ತಿದೆ. ಈ ವರ್ಷವು ಹಾಗೆ ಆಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಈ ಬ್ಯಾರೇಜ್‌ ಕಂ ಬ್ರಿಡ್ಜ್  ದುರಸ್ತಿ ಮಾಡಬೇಕು. ಗೇಟ್‌ ಎಲ್ಲಾ ಹಾಳಾಗಿ ಹೋಗಿದೆ. ಬ್ಯಾರೇಜ್‌ ಮೇಲೆ ಸಂಚರಿಸಲು ಬ್ಯಾರೇಜ್‌ 2 ಬದಿಯ ರಕ್ಷಾ ಗೇಟ್‌ಗಳು ಹಾಳಾಗಿ ಹೋಗಿವೆ. ಆದರೂ ಸಹ ಬ್ಯಾರೇಜ್‌ಗಳ ಗೇಟ್‌ಗಳಿಗೆ ಮಣ್ಣು, ಮರಳು ಹಾಕಿ ನೀರು ನಿಲ್ಲಿಸಲಾಗಿದೆ. ಅಷ್ಟೊಂದು ಹೆಚ್ಚಿನ ನೀರು ಸಂಗ್ರಹವಾಗಿಲ್ಲ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದ ಕರ್ನೂಲ ಕೆರೆಯಿಂದ ಅಫಜಲಪುರ ತಾಲ್ಲೂಕಿನ ಬೋರಿ ಹಳ್ಳಗಳಿಗೆ ನೀರು ಬಂದಿದ್ದರಿಂದ ಈ ಭಾಗದ ಸುಮಾರು 20 ಗ್ರಾಮಗಳಿಗೆ ಅನುಕೂಲವಾಗಿದೆ. ಈ ಭಾಗದಲ್ಲಿ ಕುಡಿಯುವ ನೀರು ತೊಂದರೆಯಿತ್ತು. ಬ್ಯಾರೇಜ್‌ಗಳು ಬತ್ತಿ ಹೋಗಿ 2 – 3 ತಿಂಗಳಾಗಿತ್ತು. ಕುಡಿಯುವ ನೀರು, ಜಾನುವಾರುಗಳಿಗೆ ಅನುಕೂಲವಾಗಿದ ಎಂದು ಗೌರ(ಬಿ) ಗ್ರಾಮದ ಶ್ರೀಶೈಲ ಪಾಟೀಲ ತಿಳಿಸಿದರು.

* ದಿಕ್ಸಂಗಾ(ಕೆ) ಬ್ಯಾರೇಜ್‌ ಕಂ ಬ್ರಿಡ್ಜ್‌ಗಳಿಗೆ ಅಳವಡಿಸಿರುವ ಗೇಟ್‌ಗಳನ್ನು ದುರಸ್ತಿ ಮಾಡಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗುವುದು.

–ಎಂ.ವೈ.ಪಾಟೀಲ, ಶಾಸಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು