ಆಳಂದ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಸರ್ಕಾರವಾಗಿದೆ’ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಲಿಂಗಾಯತ ಭವನದಲ್ಲಿ ಬುಧವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಆಳಂದ ಪುರಸಭೆ ವತಿಯಿಂದ ಹಮ್ಮಿಕೊಂಡ ಅಮೃತ ಯೋಜನೆಯಡಿ ಅಮರ್ಜಾ ಅಣೆಕಟ್ಟೆಯಿಂದ ಆಳಂದ ಪಟ್ಟಣಕ್ಕೆ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಕೆಕೆಆರ್‌ಡಿಬಿಗೆ ₹5500 ಕೋಟಿ ಅನುದಾನ ಹರಿದು ಬರಲಿದೆ. ಒಟ್ಟು ₹1 ಸಾವಿರ ಕೋಟಿ ಅನುದಾನದಡಿ ಕಲ್ಯಾಣ ಪಥ ಕಾರ್ಯಕ್ರಮದಡಿ ಈ ಭಾಗದ ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಸಮಗ್ರ ಕುಡಿಯುವ ನೀರು ಯೋಜನೆಗೆ ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ನೀಲನಕ್ಷೆ ರೂಪಿಸಲಾಗುತ್ತಿದೆ’ ಎಂದರು.
‘ಕೇಂದ್ರದ ಬಿಜೆಪಿ ಸರ್ಕಾರವು ನಮ್ಮ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಮರುನಾಮಕರಣ ಮಾಡಿ ಪ್ರಚಾರ ಪಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆಪಾದಿಸಿದ ಅವರು ಬಿಜೆಪಿ ಆಳುವ ಸರ್ಕಾರವಾದರೆ, ನಮ್ಮದು ಜನರ ಸಮಸ್ಯೆ ಆಲಿಸುವ ಸರ್ಕಾರವಾಗಿದೆ’ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಮರ್ಜಾ ಅಣೆಕಟ್ಟೆಗೆ ಭೀಮಾನದಿ ಹೆಚ್ಚುವರಿ ನೀರು ಭರ್ತಿಗೆ ₹250 ಕೋಟಿ ಮಂಜೂರು ಮಾಡಿದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ. ಈಗ 8 ವರ್ಷದ ನಂತರ ಮತ್ತೆ ಆಳಂದ-ಅಫಜಲಪುರ ತಾಲ್ಲೂಕಿನ 30 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಕಾಮಗಾರಿಯು ಇದೇ ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ, ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಆಳಂದ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಅಮೃತ ಯೋಜನೆಯಡಿ ಒಟ್ಟು ₹86 ಕೋಟಿ ಅನುದಾನದಲ್ಲಿ ಮನೆ ಮನೆಗೆ ನೀರು ಪೂರೈಕೆ ಕೈಗೊಳ್ಳಲಾಗುವುದು. ಕಳೆದ ವರ್ಷ ಅತಿವೃಷ್ಟಿಗೆ ಹಾಳಾದ ಬೆಳೆಗೆ ಒಟ್ಟು ₹86 ಕೋಟಿ ಬೆಳೆವಿಮೆ ಸೇರಿದಂತೆ ನೆಟೆರೋಗ ಪರಿಹಾರ, ಬೆಳೆ ಹಾನಿ ಪರಿಹಾರವು ಒಟ್ಟು ₹178 ಕೋಟಿ ಪರಿಹಾರವು ನಮ್ಮ ತಾಲ್ಲೂಕಿನ ರೈತರಿಗೆ ಬಂದಿದೆ’ ಎಂದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ರೈತಪರ ಕಾಳಜಿಯುಳ್ಳ ಬಿ.ಆರ್.ಪಾಟೀಲ ಅವರ ಹೋರಾಟದ ಫಲದಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ. ಸಿರಪುರ ಮಾದರಿ ಜಲಸಂವರ್ಧನೆ ಕಾಮಗಾರಿಯು ಅಫಜಲಪುರ ತಾಲ್ಲೂಕಿನಲ್ಲಿಯೂ ಕೈಗೊಳ್ಳಲಾಗಿದೆ. ಇಬ್ಬರೂ ಜೋಡೆತ್ತಿನಂತೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ’ ಎಂದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಒಳಚರಂಡಿ ಮಂಡಳಿ ಸಹಾಯಕ ನಿರ್ದೇಶಕ ಎನ್.ನರಸಿಂಹರೆಡ್ಡಿ ಮಾತನಾಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮರತೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಈಶಾನ್ಯ ವಲಯ ಪೋಲಿಸ್ ಮಹಾ ನಿರೀಕ್ಷಕ ಅಜಯ ಹಿಲೋರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ತಹಶೀಲ್ದಾರ್ ಅಣ್ಣಾರಾವ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ತಾಪಂ ಮಾನಪ್ಪ ಕಟ್ಟಿಮನಿ, ಶಿವಪುತ್ರಪ್ಪ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಮೊದಲು ಅಮರ್ಜಾ ಅಣೆಕಟ್ಟೆಗೆ ತೆರಳಿ ಅಲ್ಲಿ ಪಟ್ಟಣಕ್ಕೆ ನೀರು ಸರಬುರಾಜು ಮಾಡುವ ಕಾಮಗಾರಿಯ ಭೂಮಿಪೂಜೆ ಕೈಗೊಂಡು, ಅಣೆಕಟ್ಟೆ ವೀಕ್ಷಣೆ ಮಾಡಲಾಯಿತು. ನಂತರ ಆಳಂದ ಪಟ್ಟಣದಲ್ಲಿ ₹3.12 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಪೋಲಿಸ್ ವಸತಿಗೃಹಗಳ ನಿರ್ಮಾಣದ ಭೂಮಿ ಪೂಜೆ ಕೈಗೊಳ್ಳಲಾಯಿತು.
ಆಳಂದ ತಾಲ್ಲೂಕಿನಲ್ಲಿ ಸಿರಪುರ ಮಾದರಿ ಕಾಮಗಾರಿ ಮುಂದುವರಿಸಲು ₹200 ಕೋಟಿ ಅನುದಾನದ ಅಗತ್ಯವಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಪೂರ್ಣ ಜಲ ಸಂವರ್ಧನೆ ಕಾಮಗಾರಿ ಕೈಗೊಳ್ಳಲಾಗುವುದುಬಿ.ಆರ್.ಪಾಟೀಲ ಶಾಸಕ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನೋಪಯೋಗಿಯಾಗಿವೆ. ಬಿಜೆಪಿಯವರೇ ಈಗ ಹೆಚ್ಚು ನಮ್ಮ ಗ್ಯಾರಂಟಿ ಫಲಾನುಭವಿಗಳು. ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ಜನರಿಗೆ ಯಶಸ್ವಿಯಾಗಿ ತಲುಪಿವೆಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಇದು ನನ್ನ ಕೊನೆಯ ಚುನಾವಣೆ. ಮುಂದೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ಬಿ.ಆರ್.ಪಾಟೀಲರು ಇನ್ನೂ ಸಮರ್ಥರಾಗಿದ್ದು ಅವರು ರಾಜಕಾರಣದಲ್ಲಿ ಮುಂದುವರಿಯಬೇಕು. ಅವರಿಂದ ಹೊಸ ಅಭಿವೃದ್ಧಿ ಕಾರ್ಯ ಜರುಗಲಿವೆಎಂ.ವೈ.ಪಾಟೀಲ ಶಾಸಕ ಅಫಜಲಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.