ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಟಿಸಿ ಬಸ್‌ಗೆ ಬೆಂಕಿ: ಮಹಾರಾಷ್ಟ್ರಕ್ಕೆ ಸಂಚಾರ ಸ್ಥಗಿತ

ಮಹಾರಾಷ್ಟ್ರದ ಬಸ್‌ಗಳಿಗೂ ನಿರ್ಬಂಧ ವಿಧಿಸಲು ಚಿಂತನೆ: ಎಂ.ಡಿ. ರಾಚಪ್ಪ
Published 30 ಅಕ್ಟೋಬರ್ 2023, 17:41 IST
Last Updated 30 ಅಕ್ಟೋಬರ್ 2023, 17:41 IST
ಅಕ್ಷರ ಗಾತ್ರ

ಕಲಬುರಗಿ: ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದ್ದು, ಕರ್ನಾಟಕಕ್ಕೆ ಸೇರಿದ ಕೆಕೆಆರ್‌ಟಿಸಿ ಬಸ್‌ಗೆ ಸೋಮವಾರ ಬೆಂಕಿ ಹಚ್ಚಿದ ಪರಿಣಾಮ ಅಂತರ ರಾಜ್ಯ ಬಸ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.

‘ಬೀದರ್‌ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಸೋಮವಾರ ಹೊರಟಿದ್ದ ಬಸ್ (ಕೆಎ–38 ಎಫ್–1201) ಅನ್ನು ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಪ್ರತಿಭಟನಾಕಾರರು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರರಾಜ್ಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಹೇಳಿದರು.

‘ಬಸ್‌ನಲ್ಲಿದ್ದ 39 ಪ್ರಯಾಣಿಕರಿಗೆ ಸ್ಥಳೀಯ ಪೊಲೀಸರ ನೆರವಿನಿಂದ ಸುರಕ್ಷಿತವಾಗಿ ಪ್ರಯಾಣಿಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್‌ಗಳನ್ನು ಹತ್ತಿರದ ಪೊಲೀಸ್ ಠಾಣೆ, ಬಸ್ ಡಿಪೊಗಳಲ್ಲಿ ಪಾರ್ಕ್ ಮಾಡಲು ಸಂಸ್ಥೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಉಮರ್ಗಾದ ತರುರಿ ಬಳಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಎಫ್‌ಐಆರ್‌ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ..
ಎಂ. ರಾಚಪ್ಪ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ಪ್ರಯಾಣಿಕರಿಗೆ ಭದ್ರತೆ ನೀಡಿದ ಮಹಾರಾಷ್ಟ್ರ ‍ಪೊಲೀಸರು ಸುರಕ್ಷಿತವಾಗಿ ಅವರನ್ನು ಉಮರ್ಗಾಕ್ಕೆ ತಲುಪಿಸಿದ್ದಾರೆ.

ನಿತ್ಯ 300 ಬಸ್‌ ಸಂಚಾರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಂದ ನಿತ್ಯ ಸುಮಾರು 300 ಶೆಡ್ಯೂಲ್‌ಗಳಲ್ಲಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ, ಅಫಜಲಪುರ, ಇಂಡಿ ತಾಲ್ಲೂಕುಗಳ ಜನರು ನಿತ್ಯ ಮಹಾರಾಷ್ಟ್ರದ ಆಸ್ಪತ್ರೆಗಳು, ಮಾರುಕಟ್ಟೆಗೆ ಹೋಗಲು ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಎಂ. ರಾಚಪ್ಪ ಅವರು, ‘ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ನಮ್ಮ ಸಂಸ್ಥೆಯ ಬಸ್‌ಗಳನ್ನು ಸದ್ಯಕ್ಕೆ ಮಹಾರಾಷ್ಟ್ರಕ್ಕೆ ಓಡಿಸದಿರಲು ನಿರ್ಧರಿಸಿದ್ದೇವೆ. ಮಹಾರಾಷ್ಟ್ರದ ಬಸ್‌ಗಳನ್ನೂ ರಾಜ್ಯಕ್ಕೆ ಕಳುಹಿಸದಿರುವಂತೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಹಾಗೂ ಅಲ್ಲಿನ ಪೊಲೀಸರೊಂದಿಗೆ ಮಾತುಕತೆ ನಡೆಸುವುದಾಗಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮತ್ತೆ ಬಸ್ ಕಾರ್ಯಾಚರಣೆ ನಡೆಸಲಾಗುವುದು’ ಎಂದರು.

ಬಸ್‌ಗೆ ಮಸಿ ಬಳಿದಿದ್ದ ಎಂಎನ್‌ಎಸ್‌ ಕಾರ್ಯಕರ್ತರು

2021ರ ಡಿಸೆಂಬರ್‌ ತಿಂಗಳಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಕಾರ್ಯಕರ್ತರು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಘಟಕಕ್ಕೆ ಸೇರಿದ ಬಸ್ಸನ್ನು ತಡೆದು ಮಸಿ ಬಳಿದಿದ್ದರು. ಮುಂಬೈನಿಂದ ಕಲಬುರಗಿಗೆ ಬರುತ್ತಿದ್ದ ಬಸ್ಸನ್ನು ತಡೆದಿದ್ದ ಕಾರ್ಯಕರ್ತರು ಚಾಲಕನ ಕೈಗೆ ಸಂಘಟನೆಯ ಧ್ವಜ ನೀಡಿ ಘೋಷಣೆ ಕೂಗಿಸಿದ್ದರು.

ಆಗಲೂ ಕೆಲ ದಿನ ಮಹಾರಾಷ್ಟ್ರಕ್ಕೆ ರಾಜ್ಯದ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT