ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ಬಿಡುಗಡೆಗೆ ಹಿಂದೇಟೇಕೆ: ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ

Published 5 ಮಾರ್ಚ್ 2024, 9:25 IST
Last Updated 5 ಮಾರ್ಚ್ 2024, 9:25 IST
ಅಕ್ಷರ ಗಾತ್ರ

ಕಲಬುರಗಿ‌: ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ನಿಭಾಯಿಸಲು ಹಣದ ಕೊರತೆ ಇಲ್ಲ. ನಮ್ಮ ಸರ್ಕಾರ ಪಾಪರ್ (ದಿವಾಳಿ) ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಹಾಗಿದ್ದರೆ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲ ಕಾಯಂ ಎಂಬಂತಾಗಿದೆ. ನಮ್ಮ ಸರ್ಕಾರ ಇದ್ದಾಗ ಎಲ್ಲ ಕೆರೆ ಕಟ್ಟೆಗಳು ಭರ್ತಿಯಾಗಿದ್ದವು. ನಾವು ಅತಿವೃಷ್ಟಿಯಾದ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗಬಾರದೆಂದು ಆಹಾರದ ಕಿಟ್ ವಿತರಣೆ ಮಾಡಿದ್ದೆವು. ತಕ್ಷಣ ಪರಿಹಾರ ಬಿಡುಗಡೆ ಮಾಡಿದ್ದೆವು. ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಹಣ ಬರುವುದು ತಡವಾದರೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿ. ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗಳಲ್ಲಿ ₹ 700 ಕೋಟಿ ಹಣ ಇದೆ ಎಂದು ಹೇಳುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ ಎನ್ನುವುದಾದರೆ ಆ ಹಣ ಬಿಡುಗಡೆ ಮಾಡಲು ಏಕೆ ಹಿಂಜರಿಕೆ’ ಎಂದರು.

ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಬವಣೆಯ ಕುರಿತ ಪ್ರಶ್ನೆಗೆ, ‘ಮಹಾರಾಷ್ಟ್ರದ ಜಲಾಶಯಗಳಿಂದ ರಾಜ್ಯದ ಭೀಮಾ ನದಿಗೆ ನೀರು ಬಿಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ಬಳಿ ನಿಯೋಗ ಹೋಗುವುದಾದರೆ ನಾವೂ ಹೋಗುತ್ತೇವೆ’ ಎಂದು ಹೇಳಿದರು.

ಬರಗಾಲ ಎದುರಾಗಿದ್ದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುತ್ತಿದ್ದ ಕೂಲಿಯ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸದಿರುವ ಕೇಂದ್ರ ಸರ್ಕಾರದ ಧೋರಣೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ, ‘ರಾಜ್ಯ ಸರ್ಕಾರವೇ ಕೂಲಿಯ ಹಣವನ್ನು ನೀಡಬೇಕು. ನಂತರ ಕೇಂದ್ರದಿಂದ ಪಡೆಯಬೇಕು. ನಾವು ಎಂದಿಗೂ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿದಿರಲಿಲ್ಲ. ಮೊದಲು ನಾವು ಜನರಿಗೆ ಹಣ ಬಿಡುಗಡೆ ಮಾಡಿ ನಂತರ ಕೇಂದ್ರದಿಂದ ಬಂದಾಗ ಪಡೆದುಕೊಳ್ಳುತ್ತಿದ್ದೆವು‘ ಎಂದರು.

ಸಂಸದ ಡಾ. ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮಡು, ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮುಖಂಡ ಹರ್ಷಾನಂದ ಗುತ್ತೇದಾರ ಗೋಷ್ಠಿಯಲ್ಲಿದ್ದರು.

ಪೇಚಿಗೆ ಸಿಲುಕಿದ ಅಶೋಕ

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಮುಖಂಡ ಸಯ್ಯದ್ ನಾಸಿರ್ ಹುಸೇನ್ ಪರ ಘೋಷಣೆ ಕೂಗುವ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆರ್.ಅಶೋಕ ಒತ್ತಾಯಿಸಿದರು.

ಇದಕ್ಕೆ ಪತ್ರಕರ್ತರು, ‘ಮಂಡ್ಯದಲ್ಲಿ ಎರಡು ವರ್ಷಗಳ ಹಿಂದೆ ಬಿಜೆಪಿ ಯುವ ಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಕಾರ್ಯಕರ್ತ ರವಿ ಎಂಬಾತ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರಲ್ಲ‘ ಎಂದು ಪ್ರಶ್ನಿಸಿದಾಗ ಪೇಚಿಗೆ ಸಿಲುಕಿದ ಅಶೋಕ, ‘ನನಗೆ ಗೊತ್ತಿರುವಂತೆ ಮಂಡ್ಯದಲ್ಲಿ ರವಿ ಎಂಬ ಕಾರ್ಯಕರ್ತ ಇಲ್ಲ. ನೀವು (ಮಾಧ್ಯಮದವರು) ದಾಖಲೆ ನೀಡಿದರೆ ವಿಚಾರಿಸುತ್ತೇನೆ‘ ಎಂದು ಹೇಳಿದರು.

‘ನಿಮ್ಮ ಕಾರ್ಯಕರ್ತ ಎಂಬುದಕ್ಕೆ ಪತ್ರಕರ್ತರೇಕೆ ದಾಖಲೆ ಕೊಡಬೇಕು‘ ಎಂದಾಗ, ‘ನಾನು ಮಂಡ್ಯದ ಪಕ್ಷದ ಮುಖಂಡರೊಂದಿಗೆ ಮಾತನಾಡಿ ವಿಚಾರಿಸುತ್ತೇನೆ. ಉದ್ದೇಶಪೂರ್ವಕವಾಗಿ ಅಥವಾ ಬಾಯಿತಪ್ಪಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದರೂ ತಪ್ಪೇ. ಇದನ್ನು ಪಕ್ಷ ಸಹಿಸುವುದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT