ಕಲಬುರಗಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಇನ್‍ಟ್ಯಾಕ್ ಕಲಬುರಗಿ ಘಟಕ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ (ಪಿಡಿಎ) ಇವುಗಳ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2024ರ ಅಂಗವಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಕಲಬುರಗಿಯ ಕೋಟೆಯಲ್ಲಿ ಬುಧವಾರ ಐಎಎಸ್ ಪ್ರೊಬೇಷನರಿ ಅಧಿಕಾರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ, ಮೀನಾಕ್ಷಿ ಆರ್ಯ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, 'ಕಲ್ಯಾಣ ಕರ್ನಾಟಕದಲ್ಲಿ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶಿಯ, ವಿದೇಶಿ ಪ್ರವಾಸಿಗರು ನಿರಂತರವಾಗಿ ಬರುತ್ತಿದ್ದು, ನಮ್ಮ ಭಾಗದ ಪ್ರವಾಸಿ ತಾಣಗಳಲ್ಲಿ ಈ ರೀತಿಯ ಪಾರಂಪರಿಕ ನಡಿಗೆಗಳನ್ನು ಆಯೋಜಿಸುವುದರ ಮೂಲಕ ಪ್ರವಾಸಿಗರನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದಾಗಿದೆ’ ಎಂದು ಹೇಳಿದರು.
ಕಲಬುರಗಿ ಸರ್ಕಾರಿ (ಸ್ವಾಯತ್ತ) ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಕುಂಬಾರ ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ವಿಷಯ ಕುರಿತು ಮಾತನಾಡಿದರು.
ಇನ್‍ಟ್ಯಾಕ್ ಕಲಬುರಗಿ ಚಾಪ್ಟರ್ ಸಂಯೋಜಕ ಪ್ರೊ. ಶಂಭುಲಿಂಗ ಎಸ್. ವಾಣಿ ಕಲಬುರಗಿ ಪ್ರದೇಶದ ಇತಿಹಾಸ ಮತ್ತು ಪರಂಪರೆ ಹಾಗೂ ಕೋಟೆಯ ಎಲ್ಲಾ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅವುಗಳ ಪ್ರಮುಖ್ಯತೆಯನ್ನು ಕುರಿತು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಗುಲಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಅಧಿಕಾರಿ ಸಂಜುಕುಮಾರ ಟೈಗರ್, ಇನ್‍ಟ್ಯಾಕ್ ಕಲಬುರಗಿ ಸಂಘಟನಾ ಕಾರ್ಯದರ್ಶಿ ಪರ್ವಿನ್, ಉರ್ ರಿಜ್ವಾನ್ ಸಿದ್ದಿಕಿ, ನಬಿ, ಇನ್‍ಟ್ಯಾಕ್ ಸಹ ಸಂಯೋಜಕ ಡಾ. ಶಶಿಶೇಖರ ರೆಡ್ಡಿ ಭಾಗವಹಿಸಿದ್ದರು.