ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಮ್ರವಷ್ಟೇ ಹೊಳಪು, ಬದುಕು ಇಲ್ಲಿ ಮಸುಕು!

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ನಗರದ ಕಲಾಯಿಗಲ್ಲಿಯಲ್ಲಿ ಒಂದು ಬಾರಿ ನಡೆದಾಡಿದರೆ ಸಾಕು ತಾಮ್ರದ ಹೊಳಪು ಕಣ್ಣು ಕುಕ್ಕುತ್ತದೆ. ಹಲವು ಕುಟುಂಬಗಳು ತಾಮ್ರದಿಂದ ಗೃಹಬಳಕೆ ವಸ್ತುಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿರುವುದು ಕಾಣಿಸುತ್ತದೆ. ಇಲ್ಲಿ ತಾಮ್ರ ಹೊಳೆಯುತ್ತದೆ. ಆದರೆ, ಕಲಾಯಿ ಕುಟುಂಬಗಳ ಭವಿಷ್ಯ ಮಸುಕಾಗಿದೆ.

ಅನೇಕ ವರ್ಷಗಳಿಂದ ಇಲ್ಲಿ ತಾಮ್ರದ ಕೆಲಸ ನಡೆಯುತ್ತಿದೆ. ಹಾಗಾಗಿಯೇ ಜಾಗಕ್ಕೆ  ‘ಕಲಾಯಿ ಗಲ್ಲಿ’ ಎಂಬ ಹೆಸರು. ಹಿಂದೆಲ್ಲ ಜನರು ತಾಮ್ರದ ಬಟ್ಟಲು, ಬಿಂದಿಗೆ, ಕೊಡ ಬಳಸುತ್ತಿದ್ದಾಗ ಅದಕ್ಕೆ ಕಿಲುಬು (ತುಕ್ಕು) ಬರದಂತೆ ಒಳಭಾಗಕ್ಕೆ ಹೊಳೆಯುವ ಲೋಹ ಲೇಪ (ಕಲಾಯಿ)ಇಲ್ಲೇ ಕೊಡಲಾಗುತ್ತಿತ್ತು. ಮನೆಗಳಲ್ಲಿ ಬಿಸಿ ನೀರಿನ ಭಾರಿ ಹಂಡೆಯಿಂದ ನೀರು ಕುಡಿಯುವ ಲೋಟ, ಉಣ್ಣುವ ಬಟ್ಟಲು ಎಲ್ಲ ಸಾಮಗ್ರಿಗಳೂ ತಾಮ್ರಮಯ ಆಗಿದ್ದ ಆ ಕಾಲದಲ್ಲಿ ಕಲಾಯಿ ಗಲ್ಲಿ ಸಕ್ರಿಯವಾಗಿತ್ತು. ಈಗ ಹೆಸರಷ್ಟೇ ಉಳಿಸಿಕೊಂಡಿದೆ ಎನ್ನುವಂತೆ ಬೆರಳೆಣಿಕೆ ಕುಟುಂಬಗಳು ತಾಮ್ರದ ಕೆಲಸದಲ್ಲಿ ತೊಡಗಿವೆ. ಬೇಸಿಗೆ ಕಾಲದಲ್ಲಿ ಹೊಟ್ಟೆ ತುಂಬುತ್ತದೆ, ಉಳಿದ ಕಾಲದಲ್ಲಿ ತಾಮ್ರ ಕೈ ಕಚ್ಚುತ್ತದೆ!

‘ತಾಮ್ರದಿಂದ ಕೊಡ, ಟಾಕಿ, ದೇಗ್ಚಿ, ಬೋಗಣಿ ಮುಂತಾದ ವಸ್ತುಗಳನ್ನು ಮಾಡುತ್ತೇವೆ. ಇದು ಮದುವೆ ಸೀಜನ್‌ ಆಗಿದ್ದರಿಂದ ಈಗ ನಮಗೆ ಬಿಡುವಿಲ್ಲದ ಕೆಲಸ. ಈ ಸಮಯದಲ್ಲೇ ನಾಲ್ಕು ದುಡ್ಡು ಕೈ ಸೇರೋದು. ಆನಂತರ ಜೀವನ ನಡೆಸೋದೇ ಕಷ್ಟ. ತಾತಾ ಮುತ್ತಾತರ ಕಾಲದಿಂದ ಮಾಡಿಕೊಂಡು ಬಂದ ಕಸುಬು. ಬೇರೆ ಕೆಲಸ ಗೊತ್ತಿಲ್ಲದ ಕಾರಣ ಮನೆ ಮಂದಿಯೆಲ್ಲ ಇದೇ ಕಸುಬನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ’ ಎನ್ನುತ್ತಾರೆ ಶೇಕ್‌ ಇಕ್ಬಾಲ್‌.

ವಿವಿಧ ಪಾತ್ರೆ ಅಂಗಡಿಗಳ ಮಾಲೀಕರು ತಂದು ಕೊಟ್ಟಂತಹ ಕಚ್ಚಾ ವಸ್ತುಗಳಿಂದ ಕೊಡ ಮಾಡುತ್ತಿರುವ ಇಕ್ಬಾಲ್‌ ಕುಟುಂಬದವರು, 1 ಕೆ.ಜಿ. ಕಚ್ಚಾ ತಾಮ್ರಕ್ಕೆ ₨30ರಂತೆ ತೆಗೆದುಕೊಳ್ಳುತ್ತಾರೆ. 2 ಕೆ.ಜಿ.ಗೆ ಒಂದು ಕೊಡ ತಯಾರಿಸುತ್ತಾರೆ. ಒಂದು ಕೊಡಕ್ಕೆ ಇವರಿಗೆ ಸಿಗುವುದು ₨60 ಮಾತ್ರ. ಬೆವರು, ರಕ್ತ ಒಂದು ಮಾಡಿ ದಿನವಿಡೀ ದುಡಿದರೂ ಇವರಿಗೆ ಸಿಗುವುದು ಒಬ್ಬರಿಗೆ ₨150 ಮಾತ್ರ. ಒಂದೇ ಕುಟುಂಬದ 5 ಜನ ಅಣ್ಣ–ತಮ್ಮಂದಿರು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಲಾ 5ರಂತೆ ಪ್ರತಿದಿನ 25 ಕೊಡಗಳನ್ನು ತಯಾರಿಸುತ್ತಾರೆ. ಅಂಗಡಿ ಮಾಲೀಕರು ಕೊಟ್ಟ ಕಚ್ಚಾ ತಾಮ್ರವನ್ನು ಕಾಯಿಸಿ ತೆಳ್ಳಗೆ ಮೂರು ಭಾಗ ಮಾಡಿ ಅಂಟಿಸುತ್ತಾರೆ.

ಐದು ಜನರು ಮಾಡಿದ ಕೊಡಗಳಿಗೆ ಮನೆಯ ಹಿರಿಯರೊಬ್ಬರು ಕುಳಿತು ಫೈನಲ್‌ ಟಚಪ್‌ ನೀಡುತ್ತಾರೆ ತೇಜಪ್‌ನಿಂದ.
‘ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಹಿರಿಯರು ಬಳಸುತ್ತಿದ್ದ ವಸ್ತುಗಳು ಕಣ್ಮರೆಯಾಗುತ್ತಿವೆ. ಸುಲಭವಾಗಿ ಸಾಗಿಸಬಹುದಾದ ಅಗ್ಗದ ಪ್ಲಾಸ್ಟಿಕ್‌ ವಸ್ತುಗಳೇ ಇದಕ್ಕೆ ಕಾರಣ. ಯಾವುದೇ ಮನೆ ಸಾಮಗ್ರಿಯೂ ಈಗ ಪ್ಲಾಸ್ಟಿಕ್‌ನಲ್ಲಿ ಲಭಿಸುತ್ತಿದೆ. ಪ್ಲಾಸ್ಟಿಕ್‌ ಕೊಡ, ಪ್ಲಾಸ್ಟಿಕ್ ಚರಿಗೆ ಇಂತಹ ಹಲವು ಗೃಹೋಪಯೋಗಿ ವಸ್ತುಗಳು ಇಂದು ಪ್ಲಾಸ್ಟಿಕ್‌ಮಯವಾಗಿದೆ. ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿದ್ದ ತಾಮ್ರದ ವಸ್ತುಗಳು ಕಣ್ಮರೆ ಯಾಗುತ್ತಿವೆ’ ಎಂದು ವಿಷಾದಿಸುತ್ತಾರೆ ಗೃಹಿಣಿ ಸುಶೀಲಮ್ಮ.

‘ಹಿರಿಯರು ತಾಮ್ರದಿಂದ ಅನೇಕ ತರಹದ ವಸ್ತುಗಳನ್ನು ಮಾಡಿಕೊಂಡು ಉಪಯೋಗಿಸುತ್ತಿದ್ದರು. ತಾಮ್ರದ ಕೊಡ, ಟಾಕಿ, ಚರಿಗೆ, ಬಟ್ಟಲು, ಅಡುಗೆ ಪಾತ್ರೆ ಮುಂತಾದ ವಸ್ತುಗಳನ್ನು ತಮಗೆ ಬೇಕಾದ ಆಕಾರದಲ್ಲಿ ಸಿದ್ಧ ಮಾಡಿಕೊಂಡು ಬಳಸುತ್ತಿದ್ದರು. ಈಗ ತಾಮ್ರಕ್ಕೆ ಚಿನ್ನದ ಬೆಲೆ ಬಂದಿದೆ. ಮೊದಲೆಲ್ಲಾ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತವರು ಮನೆಯವರು ತಾಮ್ರದ ಅನೇಕ ವಸ್ತುಗಳನ್ನು ಕೊಡುತ್ತಿದ್ದರು. ಆದರೆ, ಈಗ ನೆಪ ಮಾತ್ರಕ್ಕೆ ಪೂಜೆಯ ತಂಬಿಗೆ ಕೊಡಲಾಗುತ್ತಿದೆ’ ಎನ್ನುತ್ತಾರೆ ತಂಬಿಗೆ ಖರೀದಿಸಲು ಬಂದ ಶಂಕ್ರಮ್ಮ ಸನಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT