ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋಬಿಘಾಟ್‌ಗೆ ಬೇಕು ಕಾಯಕಲ್ಪ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ನಗರದಲ್ಲಿ ಇರುವುದು ಇದೊಂದೇ ಧೋಬಿಘಾಟ್‌. ಆದರೂ ನಿರ್ವಹಣೆ ಇಲ್ಲದೆ ಅತಂತ್ರವಾಗಿದೆ. ಇದರಿಂದಾಗಿ ಬಟ್ಟೆಬರೆ ಶುಚಗೊಳಿಸುವ ಕಾಯಕದಲ್ಲಿ ತೊಡಗಿರುವ ಮಡಿವಾಳ ಕುಟುಂಬಗಳು ತೊಂದರೆ ಪಡುವಂತಾಗಿದೆ.

ಶರಣಬಸವೇಶ್ವರ ಕೆರೆ (ಅಪ್ಪನಕೆರೆ)ಯ ಎದುರು­ಭಾಗದಲ್ಲಿ ಟ್ಯಾಂಕ್‌ಬಂಡ್‌ ರಸ್ತೆಗೆ ಹೊಂದಿಕೊಂಡಂತೆ, ವಿಜ್ಞಾನ ಕೇಂದ್ರಕ್ಕೆ ತಾಗಿಕೊಂಡೇ ಇರುವ ದೋಭಿಘಾಟ್‌ ಹಲವು ‘ಇಲ್ಲ’ಗಳ ನಡುವೆ, ‘ಎಲ್ಲವೂ ಇದೆ’ ಎಂಬಂತೆ ಇದೆ. ಇಲ್ಲಿನ ಕಾಡುಪೊದೆ ಕಡಿಯುವವರಿಲ್ಲ. ಕಾಂಪೌಂಡ್‌ ಕಟ್ಟಿಸುವವರಿಲ್ಲ. ಮಳೆ ಪ್ರವಾಹಕ್ಕೆ ಹಾನಿಯಾದ ಬಟ್ಟೆ ಒಣಗಿಸುವ ಸಲಕರಣೆ, ತೊಳೆಯುವ 30ರಷ್ಟು ಕಟ್ಟೆಗಳನ್ನು ದುರಸ್ತಿ ಮಾಡಿಸುವವರಿಲ್ಲ. ರಾತ್ರಿ ಸರಿಯಾಗಿ ವ್ಯವಸ್ಥಿತ ಬೆಳಕಿನ ವ್ಯವಸ್ಥೆಯೂ ಇಲ್ಲಿಲ್ಲ. ಹಾವು–ಚೇಳುಗಳ ಉಪಟಳವೂ ಇದೆ ಎನ್ನುವುದು ಇಲ್ಲಿನವರ ದೂರು.

‘ಕೆಲವನ್ನೆಲ್ಲ ನಾವೇ ನಮ್ಮ ಧೋಬಿ, ಮಡಿವಾಳ ಸಂಘಟನೆಯಿಂದ ಮಾಡಬಹುದು. ಆದರೆ ಜಮೀನು ಮಾಲೀಕತ್ವ ನಮ್ಮ ಹೆಸರಿಗೆ ಬಂದಿಲ್ಲ. ಹೀಗಾಗಿ ಸಮಸ್ಯೆ ಆಗಿದೆ. ನಾಲ್ಕು ದಶಕಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ 4 ಎಕರೆ ಜಮೀನು ಕೊಟ್ಟಿದ್ದರು. ಈಗ ಅದರ ಕಾಲುಭಾಗವೂ  ನಮ್ಮ ವಶದಲ್ಲಿಲ್ಲ.

ಇದನ್ನು ನಮ್ಮ ಸಂಘಕ್ಕೆ ಕೊಡಿ ಎಂದು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಗಳಿಗೆ ಮನವಿ ಮಾಡಿದ್ದೇವೆ. ಹಾಗಾದಲ್ಲಿ ಇಲ್ಲಿ ಬಟ್ಟೆತೊಳೆಯುವ ಕಾಯಕ  ಮಾಡುವ ಸುಮಾರು 70ಮಡಿವಾಳ ಕುಟುಂಬಗಳಿಗೆ ನೇರ ಹಾಗೂ 500ರಷ್ಟು  ಕುಟುಂಬಗಳಿಗೆ ಪರೋಕ್ಷ  ಉಪಕಾರ ಆಗಬಹುದು’ ಇದು ಸಂಘದ ಅಧ್ಯಕ್ಷ ಶಿವಪ್ಪ ಡಿ. ಪರೀಟ್‌ ಅಭಿಪ್ರಾಯ. ಒಂದೆಡೆ ‘ನಿರ್ವಹಣೆ ನಾವೇ ಮಾಡುತ್ತೇವೆ ಜಮೀನಿನ ಮಾಲೀಕತ್ವ ನಮ್ಮ ಸಂಘಕ್ಕೆ ನೀಡಿ’ ಎನ್ನುವ ಧೋಬಿ ಮಡಿವಾಳ ಸಂಘಟನೆ; ಇನ್ನೊಂದೆಡೆ ‘ಇದು ನಗರ ಪಾಲಿಕೆ ಆಸ್ತಿ. ಧೋಬಿ ಮಡಿವಾಳ ಸಂಘಟನೆಯಲ್ಲಿ ಮಾಲೀಕತ್ವದ ದಾಖಲೆಪತ್ರಗಳಿಲ್ಲ’ ಎನ್ನುವ ಪಾಲಿಕೆ ಅಧಿಕಾರಿಗಳು– ಈ ಗುದ್ದಾಟದ ನಡುವೆ ಧೋಬಿಘಾಟ್‌ ಸೌಲಭ್ಯಗಳಿಲ್ಲದೆ ಬಡವಾಗಿದೆ.

‘ಬಾವಿ ನೀರು, ಬೆಳಕಿಗಾಗಿ ವಿದ್ಯುತ್‌ ವ್ಯವಸ್ಥೆಯ ಬಿಲ್‌ ಮೊತ್ತವನ್ನು ನಗರಪಾಲಿಕೆ ಭರಿಸುತ್ತಿದೆ. ಉಳಿದಂತೆ 1975ರಲ್ಲಿ ಕಟ್ಟಿದ ಬಟ್ಟೆ ತೊಳೆಯುವ ಕಟ್ಟೆ, ಇತರ ಸಲಕರಣೆ, ನೆಲಹಾಸು ನವೀಕರಣ ಆಗಬೇಕಿದೆ’ ಎನ್ನುತ್ತಾರೆ ಸಂಘದ ಖಜಾಂಚಿ ಮಲ್ಲಿಕಾರ್ಜುನ ಪರೀಟ್‌.

‘ಮಳೆ ನೀರು ಇಲ್ಲೇ ಬಿಟ್ಟರು’
ಇಷ್ಟೆಲ್ಲ ಸಾಲದು ಎಂಬಂತೆ ತಿಂಗಳ ಹಿಂದೆ ಭಾರಿ ಮಳೆಗೆ ಸಮೀಪದ  ಅಪ್ಪನಕೆರೆಯಿಂದ ಹೆಚ್ಚುವರಿ ನೀರನ್ನು ಸಾಗಿಸಲು  ಧೋಬಿಘಾಟ್‌ ಮೂಲಕ ಕಾಲುವೆ ಕೊರೆದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು. ಇದರಿಂದ ನಗರದ ನೆರೆಹಾವಳಿಯೇನೊ ತಗ್ಗಿತು. ಆದರೆ ಧೋಬಿಘಾಟ್‌ನಲ್ಲಿ ಸಮಸ್ಯೆ ಬಿಗಡಾಯಿಸಿದೆ. ಕಾಲುವೆ ತೋಡಿದ್ದರಿಂದ ಇಲ್ಲಿನ ಶುಚೀಕರಣ ಸೌಲಭ್ಯಗಳು, ಕಲ್ಲಿನ ನೆಲಹಾಸು ಹಾನಿಯಾಗಿದೆ ಎನ್ನುತ್ತಾರೆ ದೋಭಿಘಾಟ್‌ ಬಳಕೆದಾರರು.

ಡ್ರೈ ಕ್ಲೀನ್‌ ಭೂತ!
ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಬಟ್ಟೆ ಶುಚಿಗೊಳಿಸಿ, ಐರನ್‌ (ಇಸ್ತ್ರಿ)ಮಾಡಿ ಸಾಂಪ್ರದಾಯಿಕ ಬದುಕು ಏಗುತ್ತಿರುವ ಮಡಿವಾಳರ ಬದುಕಿನ ಮೇಲೆ ಡ್ರೈ ಕ್ಲೀನಿಂಗ್‌ ಅಂಗಡಿಗಳು ಭೂತದಂತೆ ಕಾಡತೊಡಗಿವೆ. ಮಡಿವಾಳರ ಆದಾಯ ಕಡಿಮೆಯಾಗಿದೆ ಎಂಬುದು ಕುಟುಂಬಗಳ ಮತ್ತೊಂದು ಅಹವಾಲು. ಇವೆಲ್ಲದಕ್ಕೂ ಪರಿಹಾರ ಕ್ರಮ ಆಗಬೇಕಿದೆ.

‘ಮಾಲೀಕತ್ವ ಸಂಘಕ್ಕೆ ನೀಡಲಿ’

1975ರ ಕಾಲದಲ್ಲಿ ಅಂದಿನ ಜಿಲ್ಲಾಧಿಕಾರಿ ನೀಡಿದ ಜಮೀನು ಇದು. ಇದೀಗ ನಾವು ಮಾಲೀಕತ್ವ­ಕ್ಕಾಗಿ ಪರದಾಡು­ವಂತಾಗಿದೆ. ಕೆಲವು ರಿಯಲ್‌ ಎಸ್ಟೇಟ್‌ ದಂಧೆ­ಕೋರರ ದೃಷ್ಟಿಯೂ ಇತ್ತ ಬಿದ್ದಿದೆ. ದೋಭಿ ಮಡಿವಾಳ ಜಿಲ್ಲಾ ಸಂಘಟನೆಯ ಹೆಸರಲ್ಲಿ ಈ ಜಾಗವನ್ನು ನೀಡಬೇಕು ಎಂಬುದು ನಮ್ಮ ಮನವಿ.
–ಶಿವಪ್ಪ ಡಿ. ಪರೀಟ್‌,
ಅಧ್ಯಕ್ಷ,  ಧೋಬಿ ಮಡಿವಾಳರ ಸಂಘ ಗುಲ್ಬರ್ಗ

‘ಪ್ರವಾಹದಿಂದ ಹಾನಿಯಾಗಿದೆ’

ಕೆರೆಯ ಪ್ರವಾಹದ ನೀರನ್ನು ಧೋಬಿಘಾಟ್‌ಗೆ ಹಾಯಿಸಿದ್ದ­ರಿಂದ ಇಲ್ಲಿ ನೆಲಹಾಸು ಕೊಚ್ಚಿಹೋಗಿದೆ. ಜೆಸಿಬಿಯಂಥ ಬೃಹತ್‌ ಯಂತ್ರಗಳ ಸಂಚಾರ, ಕಾಲುವೆ ತೋಡಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಇದನ್ನು ನಗರಪಾಲಿಕೆ ಶೀಘ್ರ ದುರಸ್ತಿ ಮಾಡಿಸಬೇಕು.
–ಮಲ್ಲಿಕಾರ್ಜುನ ಪರೀಟ್‌,
ಖಜಾಂಚಿ, ಧೋಬಿ ಮಡಿವಾಳರ ಸಂಘ ಗುಲ್ಬರ್ಗ

‘ದುರಸ್ತಿಗೆ ಕ್ರಮ’

ಧೋಬಿಘಾಟ್‌ ಮೂಲಕ ಈಚೆಗೆ ಪ್ರವಾಹ ಸಂದರ್ಭದಲ್ಲಿ ಶರಣಬಸ­ವೇಶ್ವರ ಕೆರೆಯಿಂದ ಹೆಚ್ಚುವರಿ ನೀರು ಹೊರಹಾಕಲಾಯಿತು. ಇದರಿಂದ ಧೋಬಿಘಾಟ್‌ನ ಪರಸಿಕಲ್ಲಿನ ನೆಲ­ಹಾಸು, ಇನ್ನಿತರ ಹಾನಿ ಸಂಭವಿ­ಸಿದೆ. ಕೆರೆ ಅಭಿವೃದ್ಧಿ ಸುಮಾರು ₨6 ಕೋಟಿ ಅನುದಾನ ಲಭಿಸಲಿದ್ದು, ಈ ಮೊತ್ತದಲ್ಲಿ ಘಾಟ್‌ ದುರಸ್ತಿ ಕಾರ್ಯ­ವನ್ನೂ ಸೇರಿಸಲಾಗುವುದು. ಮಡಿ­ವಾಳ ಸಂಘ­ಟನೆಯ ಪದಾಧಿ­ಕಾರಿಗಳು ಹೇಳುತ್ತಿ­ರುವ ಜಮೀನು ಮತ್ತಿತರ ಸಮಸ್ಯೆ­ಗಳ ಬಗ್ಗೆ ಪರಿಶೀಲಿಸಿದ ಬಳಿಕ ಕ್ರಮಕೈಗೊಳ್ಳ­ಲಾಗುವುದು.
–ಶ್ರೀಕಾಂತ ಕಟ್ಟಿಮನಿ,
ಆಯುಕ್ತರು, ಗುಲ್ಬರ್ಗ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT