ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಕ್ಕೆ ಪೇ ಆ್ಯಂಡ್ ಪಾರ್ಕ್

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಸಾರ್ವಜನಿಕ ಜಾಗ, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳು ಹಿಂತಿರುಗಿ ಬರುವಷ್ಟರಲ್ಲಿ ಕಳವಾಗುತ್ತಿವೆ. ಇತರ ವಾಹನಗಳ ಮಾಲೀಕರಿಗೂ ನೆಮ್ಮದಿ ಇಲ್ಲ! ಇಂತಹ ಸ್ಥಿತಿಯಲ್ಲಿ ವಾಹನಗಳ ಸಂರಕ್ಷಣೆ, ನಿಲುಗಡೆಗಾಗಿಯೇ `ಪೇ ಆ್ಯಂಡ್ ಪಾರ್ಕ್~ (ಶುಲ್ಕ ಸಹಿತ ವಾಹನ ನಿಲುಗಡೆ) ವ್ಯವಸ್ಥೆಯನ್ನು ನಗರದಲ್ಲಿ ಅಳವಡಿಸಲಾಗಿದೆ. ಆದರೆ ಸ್ವಲ್ಪ ಹಣ ಕೊಡಬೇಕು ಅಷ್ಟೆ.

ಗುಲ್ಬರ್ಗದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಬಳಕೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆ ಮೇಲೆ ಪಾದಚಾರಿಗಳು ಸಂಚರಿಸಬೇಕು ಎಂದರೆ ಪರದಾಡುವ ಪರಿಸ್ಥಿತಿ ಬಂದಿದೆ.
ರಸ್ತೆ ಹಾಗೂ ಬದಿಗಳಲ್ಲಿ ಸಾಲಾಗಿ ನಿಲ್ಲುವ ವಾಹನಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಚಾರಿ ಪೊಲೀಸರು ನಗರದಲ್ಲಿ ಹೊಸ ಪಾರ್ಕಿಂಗ್ ವ್ಯವಸ್ಥೆಯನ್ನು ಈಚೆಗೆ ಆರಂಭಿಸಿದ್ದಾರೆ.

ಸೂಪರ್ ಮಾರ್ಕೆಟ್‌ನ ಪ್ರಮುಖ ಮೂರು ಸ್ಥಳಗಳಲ್ಲಿ ವಾಹನಗಳ ನಿಲುಗಡೆಯ  `ಪೇ ಆ್ಯಂಡ್ ಪಾರ್ಕ್~ ಸ್ಥಳ ಗುರುತಿಸಲಾಗಿದೆ.  ಕಡಿಮೆ ಖರ್ಚಿನಲ್ಲಿ ಸಾರ್ವಜನಿಕರ ವಾಹನಗಳಿಗೆ ರಕ್ಷಣೆ ಒದಗಿಸಬೇಕು ಎಂಬ ಪೂರ್ವ ಕಲ್ಪನೆ ಇದರ ಆರಂಭಕ್ಕೆ ಕಾರಣ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ದ್ವಿಚಕ್ರ ವಾಹನಕ್ಕೆ ರೂ. 5, ಚತುಷ್ಚಕ್ರ ವಾಹನಗಳಿಗೆ 10 ರೂಪಾಯಿ ನಿಗದಿಗೊಳಿಸಲಾಗಿದೆ. ಕಾರು, ಬೈಕ್‌ಗಳನ್ನು 12 ಗಂಟೆಗಳ ವರೆಗೆ ನಿಲುಗಡೆ ಮಾಡಿದರೆ ದಿನಕ್ಕೆ 25ರೂಪಾಯಿ ಹಾಗೂ ತಿಂಗಳು ಪರ್ಯಂತ ವಾಹನ ನಿಲುಗಡೆ ಮಾಡುವರಿಗೆ 650 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

`ದಿನಕ್ಕೆ ಸುಮಾರು 20ರಿಂದ 30 ಕಾರುಗಳು ಇಲ್ಲಿ ಪಾರ್ಕಿಂಗ್ ಮಾಡುತ್ತವೆ. ಟೋಕನ್ ವ್ಯವಸ್ಥೆ ಇದೆ. ಮೊದಲು ಹಣ ಕೊಟ್ಟು ವಾಹನಗಳ ನೋಂದಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲಿಗೆ ಬೈಕ್‌ಗಳು ಬರುವುದು ಅತಿ ವಿರಳ. ವಾಹನಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೂ, ಸಾರ್ವಜನಿಕರು ಅದರ ಲಾಭ ಪಡೆದುಕೊಳ್ಳುವುದಿಲ್ಲ. ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಶುಲ್ಕ ಸಹಿತ ನಿಲುಗಡೆಗೆ ಬರುತ್ತಿದ್ದುವು. ಈಗ ಆ ವಾಹನಗಳು ಬರುವುದೇ ಇಲ್ಲ. ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ತೋರಿಸುತ್ತಿಲ್ಲ~ ಎಂದು ಇಲ್ಲಿ ಕೆಲಸ ಮಾಡುವ ಸೋಮನಾಥ ಗೌಳಿ ತಿಳಿಸಿದರು.

`ಕಡಿಮೆ ದುಡ್ಡಿನಲ್ಲಿ ವಾಹನಗಳ ರಕ್ಷಣೆ ಮಾಡುವ ಈ ಕೆಲಸ ಸಾರ್ವಜನಿಕರಿಗೆ ಅನುಕೂಲವಾಗಿದೆ. ನಾನು ಇಲ್ಲಿಗೆ ಪ್ರಥಮ ಬಾರಿಗೆ ಬಂದಿದ್ದೇನೆ. ಬೇರೆ ಊರಿಂದ ಗುಲ್ಬರ್ಗಕ್ಕೆ ಬರುವವರಿಗೆ ವಾಹನಗಳ ನಿಲುಗಡೆ ಹಾಗೂ ಕಳ್ಳರಿಂದ ರಕ್ಷಣೆ ಬಗ್ಗೆ ತಲೆ ಕಡಿಸಿಕೊಳ್ಳುವಂತಿಲ್ಲ~ ಇದು ಉತ್ತಮ ವ್ಯವಸ್ಥೆ ಎಂಬುದು ಕಾರು ಚಾಲಕ ದಯಾನಂದ ಮೂಲಗೆ ಅವರ ಅಭಿಪ್ರಾಯ.

ಹೊಸ ವ್ಯವಸ್ಥೆಯಿಂದ ಆಟೋಗಳಿಗೆ ಅಷ್ಟೊಂದು ಅನುಕೂಲತೆ ಇಲ್ಲ. ಏಕೆಂದರೆ ಆಟೋ ನಿಲ್ದಾಣದಲ್ಲಿ ಆಟೋಗಳನ್ನು ನಿಲ್ಲಿಸಿದಾಗ ಮಾತ್ರ ನಮಗೆ ಪ್ರಯಾಣಿಕರು ಸಿಗುತ್ತಾರೆ. ಯಾವುದೇ ಆಟೋಗಳನ್ನು ಎರಡು ಮೂರು ಗಂಟೆಗಳ ಕಾಲ ನಿಲ್ಲಿಸುವಂತಹ ಅವಕಾಶ ಬರುವುದಿಲ್ಲ~  ಎಂದು ಹೆಸರು ಹೇಳಲು ಇಚ್ಛಿಸದ ಆಟೋ ಚಾಲಕರೊಬ್ಬರು ತಿಳಿಸಿದರು.

ಪ್ರಮುಖ ಉದ್ದೇಶ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಗೆ ಸುರಕ್ಷತೆ, ಸುಭದ್ರತೆ ನೀಡಬೇಕು ಎಂಬುದು ಒಂದು ಕಡೆಯಾದರೆ, ಫೂಟ್‌ಪಾತ್‌ಗಳಲ್ಲಿ  ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶ ಹೊಸ ವ್ಯವಸ್ಥೆ ಹಿಂದಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ `ಪ್ರಜಾವಾಣಿ~ಗೆ ತಿಳಿಸಿದರು.

ಜನರ ಹಿತಕ್ಕಾಗಿ ಜಾರಿಗೆ ಯಾವುದೇ ನಿಯಮ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ವಾಗತಿಸಬೇಕು. ವಾಹನಗಳ ಸುರಕ್ಷತೆ ಮತ್ತು ಸಂಚಾರ ಸಮಸ್ಯೆ ನಿವಾರಣೆಗಾಗಿ ಜಾರಿಗೆ ತಂದಿದ್ದ ಈ ನಿಯಮಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT