ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಸುಂದರ; ಸಮಸ್ಯೆಗಳ ಆಗರ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಎಲ್ಲೆಡೆ ಹರಡಿಕೊಂಡಿರುವ ಕಸ, ವಿಷಕಾರಿ ಜೀವ-ಜಂತುಗಳ ಆಹ್ವಾನ ನೀಡುವ ಪೊದೆ, ಮುಚ್ಚಳ ಕಾಣದೆ ಬಾಯಿ ತೆರೆದುಕೊಂಡಿರುವ ಆಳವಾದ ಚರಂಡಿ, ಮೂಗಿಗೆ ತಟ್ಟುವ ಗಬ್ಬು ವಾಸನೆ ಇವುಗಳ ಮಧ್ಯೆಯೇ ಹಲವರ ಕ್ಲಿಷ್ಟಕರ ಬದುಕು.

ಇದು ಸರ್ಕಾರಿ ಆಸ್ಪತ್ರೆ, ಎಂ.ಆರ್.ಮೆಡಿಕಲ್ ಕಾಲೇಜಿನ ಎದುರುಗಡೆ ಇರುವ ಸುಂದರ ನಗರ ವಾರ್ಡ್ ಸಂಖ್ಯೆ 45 ಚಿತ್ರಣ. ಸಮಸ್ಯೆಗಳನ್ನು ತುಂಬಿಕೊಂಡಿರುವ ನಗರಕ್ಕೆ ಮೂಲಸೌಕರ್ಯಗಳಿಲ್ಲ. ಹೆಸರಿಗೆ ಮಾತ್ರ ಸುಂದರ ನಗರ. ವರ್ತಮಾನ ಕಾಲಕ್ಕೆ ವ್ಯಂಗ್ಯ ನುಡಿಯುತ್ತದೆ ಈ ನಗರದ ಹೆಸರು.

ಎಲ್ಲ ಜನಾಂಗ ಆತ್ಮೀಯತೆಯಿಂದ ವಾಸಿಸುವ ಈ ನಗರದಲ್ಲಿ ನೆಮ್ಮದಿಯ ಜೀವನ ಇಲ್ಲ. ಮಳೆಗಾಲದಲ್ಲಿ ಮನೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಆಹಾರ ಧಾನ್ಯಗಳು, ಮಕ್ಕಳ ಪುಸ್ತಕ, ಬಟ್ಟೆ ನೀರಿನಲ್ಲಿ ತೇಲುತ್ತವೆ.

ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಕೊನೆ ಪಕ್ಷ ಮಹಿಳೆಯರು ತಮ್ಮ ಮನೆ ಅಂಗಳದಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಚರಂಡಿಯಿಂದ ಗಬ್ಬು ವಾಸನೆ ಮೂಗಿಗೆ ತಟ್ಟನೆ ತಟ್ಟುತ್ತದೆ. ಸಮಸ್ಯೆಗಳ ಆಗರವಾಗಿರುವ ಈ ನಗರ  ಹೆಸರಿಗೆ ಮಾತ್ರ  ಸುಂದರ ನಗರವಾಗಿದೆ.

ಬಡಾವಣೆಯ ಕೆಲವೊಂದು ರಸ್ತೆಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದು ಸಂಚಾರಕ್ಕೆ ತೊಂದರೆಯುಂಟು ಮಾಡುತ್ತಿವೆ. ಅಲ್ಲಲ್ಲಿ ಮನೆ ಮುಂದೆ ಚರಂಡಿ ನೀರು ಹರಿಯುತ್ತಿರುವುದರಿಂದ ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಈ ಬಡಾವಣೆಯ ಜನರ ಸಮಸ್ಯೆ, ಯಾರ ಗಮನಕ್ಕೂ ಬಂದಂತಿಲ್ಲ. ಸಮಸ್ಯೆಗಳಲ್ಲಿ ಜೀವನ ಸಾಗಿಸುತ್ತಿರುವ ನಿವಾಸಿಯಲ್ಲಿನ ಕೆಲವರ ಮಾತು ಇಂತಿವೆ.

`ನಮ್ಮ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ಬಾರಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೇವೆ. ಹಂದಿಗಳ ಕಾಟ ತಡೆಯದಾಗಿದೆ.

ಡೆಂಗೆ ಜ್ವರದಿಂದಾಗಿ ಸಾವಿರಾರು ರೂಪಾಯಿ ಆಸ್ಪತ್ರೆಗೆ ಹಾಕಿದ್ದೇವೆ. ಓಟು ಕೇಳುವಾಗ ನೆನಪಿಗೆ ಬರುವ ನಾವು ಈಗ ನೆನಪಾಗುವುದಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ನಾವು ಸಂಸಾರ ತೊರೆದು ಚಳವಳಿ ಪ್ರಾರಂಭಿಸಿ, ಜೀವ ಬಲಿದಾನವಾದಾಗ ಮಾತ್ರ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬಹುದೋ ಏನೋ?~ ಎಂದು ನಗರದ ಹಿರಿಯ ನಾಗರಿಕ ಅಶೋಕಕುಮಾರ ಕುಲಕರ್ಣಿ ಆಕ್ರೋಶದಿಂದ ನುಡಿಯುತ್ತಾರೆ.

`ಚರಂಡಿ ತುಂಬಿಕೊಂಡಿವೆ. ಮಳೆಗಾಲದಲ್ಲಿ ನಮ್ಮ ಮನೆಯಲ್ಲಿ ನೀರು ತುಂಬಿಕೊಳ್ಳುತ್ತವೆ ಮಹಾನಗರ ಪಾಲಿಕೆ ಇತ್ತ ಕಡೆ ಗಮನಹರಿಸದ ಕಾರಣ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೆವು. ಆಗ ಪದ್ಮನಾಭನ್, ಹಿಂದಿನ ಕಮೀಷನರ್ ಮನೋಜ್‌ಜೈನ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇಲ್ಲಿವರೆಗೂ ಯಾವುದೇ ಕಾರ್ಯಾಚರಣೆ ಆಗಿಲ್ಲ ಎಂದು ರವಿಕುಮಾರ ತಿಳಿಸಿದರು.

ನಮ್ಮ ಬಡಾವಣೆಯಲ್ಲಿ ಸಮಸ್ಯೆ ಇದ್ದಿದ್ದು ಇದ್ದಾಂಗೆ ಇದೆ. ಮಳೆಗಾಲದಲ್ಲಿ ಮನೆಯಲ್ಲಿ ನೀರು ತುಂಬುವುದರಿಂದ ನನಗೆ ಶೀತವಾಗಿದೆ. ಆಸ್ಪತ್ರೆಗೆ 5 ಸಾವಿರ ರೂಪಾಯಿ ಹಾಕಿದ್ದೇವೆ. ಆದರೂ ಸಂಪೂರ್ಣ ವಾಸಿಯಾಗಿಲ್ಲ. ನೀರಿನಲ್ಲಿ ನೆನೆದು ಕಾಲಿನ ಉಗುರು ಬೆಳೆದಿಲ್ಲ. ಉಗುರುಗಳು ಇನ್ನೂ ನೋವಾಗುತ್ತವೆ ಎಂದು ರೆಹನಾ ಬೇಗಂ ತಿಳಿಸಿದರು.

ಮನವಿ ಸಲ್ಲಿಸಿದಾಗ, ಪ್ರತಿಭಟನೆ ಕೈಗೊಂಡಿದ್ದಾಗ ಮಾತ್ರ ರಸ್ತೆ ಕಸ ಗುಡಿಸೋಕೆ ಬರುವರು. ಕೆಲಸ ಮಾಡುವುದಕಿಂತ ಹೆಚ್ಚಾಗೆ ನಿವಾಸಿಗಳಿಗೆ ತಿಂಡಿ ತಿನ್ನೋಕೆ, ಟೀ ಕುಡಿಯೊಕ್ಕೆ ಅಂಥ ದುಡ್ಡು ಕೇಳೋದೆ ಜಾಸ್ತಿ ಎಂದು ಗೃಹಿಣಿ ಲೀಲಾ ಪ್ರತಿನಿಧಿ ದೂರಿದರು.

`ದಿನಾ 2 ಟೈಂ ಬಡಾವಣೆಯಲ್ಲಿ ಬೋರ್‌ವೆಲ್ ನೀರ ಬಿಡ್ತೀನಿ, 9 ವರ್ಷದಿಂದ ಈ ಕೆಲಸ ಮಾಡುತ್ತ ಬಂದಿನೀ.. ಮೊದ್ಲು ತಿಂಗಳಿಗೆ 750 ರೂಪಾಯಿ ಪಗಾರ ಕೊಡ್ತಿದ್ರು. 2ವರ್ಷದ ನಂತರ ಒಂಬೈನೂರು ಕೊಟ್ರು.. ಅದೂ ನಾಲ್ಕೈದು ತಿಂಗಳ ಬಿಟ್ಟು ಪಗಾರ ಬರ‌್ತಿತ್ತು.  ಮೂರು ಮಕ್ಕಳಿರುವ ನನ್ನ ಕುಟುಂಬಕ್ಕೆ ಇಷ್ಟೇ ಪಗಾರ ಸಾಲೋಲ್ಲ. ಪಗಾರ ಜಾಸ್ತಿ ಮಾಡಿ ಮತ್ತು ಪ್ರತಿ ತಿಂಗಳಿಗೊಮ್ಮೆ ತಪ್ಪದೆ ಕೊಡಿ ಎಂದು ಕೇಳಿದರೆ, ಪಗಾರ ಜಾಸ್ತಿ ಮಾಡುವದಕ್ಕೆ ಆಗೊಲ್ಲ. ಬೇಕಾದರೆ ಕೆಲಸ ಬೀಡು ಎಂದು ನಗರ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ~ ಎಂದು ನಿವಾಸಿ ಮಲ್ಲಿಕಾರ್ಜುನ ವಠಾರ ಹೇಳಿದರು. 

ನಾನು ಗೆದ್ದಿದ್ದು ವಾರ್ಡ್ ಸಂಖ್ಯೆ 30ರಿಂದ. ಈ ಬಡಾವಣೆ ನಿವಾಸಿಯಾಗಿ ನಾನು ಮೆಟಲ್ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ನಾನು ಬಡಾವಣೆಯ ನಿವಾಸಿ ಎಂಬ ಕಾರಣದಿಂದ ಈ ಕೆಲಸ ಮಾಡ್ದ್ದಿದೇನೆ.  ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದೆ. ಅದೇ ಪಕ್ಷದ ಕಾರ್ಪೊರೇಟರ್ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಗರ ನಿವಾಸಿ ಮಾಜಿ ಮೇಯರ್ ಚಂದ್ರಿಕಾ  ಪರಮೇಶ್ವರ ಹೇಳಿದರು.

ಮಹಾನಗರ ಪಾಲಿಕೆಯಲ್ಲಿ ಕೂಲಿಕಾರ್ಮಿಕರು ಕಡಿಮೆ ಇರುವುದರಿಂದ ಇಲ್ಲಿನ ಕಸ ವಿಲೇವಾರಿ ಮಾಡುತ್ತಿಲ್ಲ. ಈ ಬಡಾವಣೆಯಲ್ಲಿ ಹೆಚ್ಚಿನ ಜನ ಇದ್ದಾರೆ. ಆದರೆ ಕಸದ ತೊಟ್ಟಿಗಳು ಕಡಿಮೆ ಇವೆ. ಇರುವ ಕಸದ ತೊಟ್ಟಿಯಲ್ಲಿ ಜನ ಕಸ ತಂದು ಹಾಕುವುದಿಲ್ಲ. ಕಸದ ಡಬ್ಬಿ ಸುತ್ತಲೂ ಕಸ ಇರುತ್ತದೆ. ಕಸದ ಡಬ್ಬಿಯಲ್ಲಿ ನೋಡಿದರೆ ಕಸ ಇರುವುದಿಲ್ಲ ಎಂದು ಕಾರ್ಪೊರೇಟರ್ ರಮಾನಂದ `ಪ್ರಜಾವಾಣಿ~ಗೆ ತಿಳಿಸಿದರು.

ನಮ್ಮ ಬಿಜೆಪಿ ಸರ್ಕಾರ ಸಾಕಷ್ಟು ಬಜೆಟ್ ಬಿಡುಗಡೆ ಮಾಡಿದೆ. ಎರಡು ಮೂರು ರಸ್ತೆ ಬಿಟ್ಟರೆ, ಉಳಿದ ರಸ್ತೆಗಳ ಸಿಸಿ ರಸ್ತೆ ಕಾಮಗಾರಿ ಮುಗಿದಿದೆ. ಮುಂದಿನ ಬಜೆಟ್‌ದಲ್ಲಿ ಡ್ರೈನೇಜ್ ಕಾಮಗಾರಿ ಶುರು ಮಾಡಿಸುವೆ. ಇಲ್ಲಿನ ಜನರಿಗೆ ಅದೇ ಸಮಸ್ಯೆ ಹೆಚ್ಚಾಗಿದೆ. ಪಾಲಿಕೆ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಳಿದರೆ ಕೂಲಿ ಕಾರ್ಮಿಕರ ಸಮಸ್ಯೆ ಹೇಳುತ್ತಾರೆ. ನಮ್ಮ ಏರಿಯಾಕ್ಕೆ ಕೇವಲ ಮೂರು ಜನ ಲೇಬರ್ಸ್‌ ಇದ್ದಾರೆ. ಅದರಲ್ಲಿ ಎಲ್ಲರೂ ಒಂದೇ ದಿನ ಬರುವುದಿಲ್ಲ. ನನ್ನನ್ನು ನಂಬಿ ಗೆಲ್ಲಿಸಿ ತಂದ ಜನಕ್ಕೆ ಕೆಲಸ ಮಾಡಿ ತೋರಿಸುವೆ. ಹೆಸರಿಗೆ ತಕ್ಕ ಸುಂದರ ನಗರವಾಗಿ ನಿರ್ಮಾಣ ಮಾಡುವ ಆಶೆ ನನ್ನದು. ಈ ಕೆಲಸ ಇನ್ನು ಕೆಲವೆ ದಿನಗಳಲ್ಲಿ ಮಾಡುವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಪೊರೇಟರ್ ಹೇಳಿದಂತೆ ಕೆಲಸ ಮಾಡಿ ಸಮಸ್ಯೆಗೆ ಕಡಿವಾಣ ಹಾಕಲಿ. ತಾವೂ ಚಂದದ ಬದುಕು ಸಾಗಿಸುವಂತಾಗಲಿ ಎಂಬ ಆಶಯ ಜನರಿಂದಲೂ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT