ಬುಧವಾರ, ಮೇ 12, 2021
27 °C

ನಗರಸಭೆ: ರೂ. 4.73 ಕೋಟಿ ಉಳಿತಾಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: 2011-12ನೇ ಸಾಲಿಗೆ ನಗರಸಭೆ ವಿವಿಧ ಮೂಲಗಳಿಂದ ಸಂಗ್ರಹಿತವಾದ ಮೊತ್ತದಲ್ಲಿ ರೂ.4.73 ಕೋಟಿ ಉಳಿತಾಯ ನಿರೀಕ್ಷಿಸಿ ಬಜೆಟ್ ಮಂಡಿಸಿದೆ.ನಗರಸಭೆ ರೂ. 42.86 ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದು, ಈ ಪೈಕಿ ರೂ. 38.12 ಕೋಟಿಗಳನ್ನು ನಗರದ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಿದೆ.ನಗರಸಭೆಯ ಬಜೆಟ್ ಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ವ ಸದಸ್ಯರ ಸಮ್ಮುಖದಲ್ಲಿ 2011-12ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಯಿತು. ನಗರದ ರಸ್ತೆಗಳ  ಅಭಿವೃದ್ಧಿಗೆ ರೂ. 10.82 ಕೋಟಿ, ರಸ್ತೆಗಳ ನಿರ್ವಹಣೆಗೆ ರೂ. 93 ಲಕ್ಷ, ಚರಂಡಿ ಕಾಮಗಾರಿಗೆ ರೂ. 5.28 ಕೋಟಿ, ಕಟ್ಟಡ ಕಾಮಗಾರಿಗೆ ರೂ. 3.15 ಕೋಟಿ, ಕುಡಿಯುವ ನೀರು ಸರಬರಾಜಿಗೆ ರೂ. 2.47ಕೋಟಿ, ಉದ್ಯಾನ ಅಭಿವೃದ್ಧಿಗೆ ರೂ. 48 ಲಕ್ಷ ಹಾಗೂ ಬೀದಿ ದೀಪಗಳ ನಿರ್ವಹಣೆಗಾಗಿ ರೂ. 1.22 ಕೋಟಿ ಕಾಯ್ದಿರಿಸಲಾಗಿದೆ.ಶೇ. 22ರ ಅನುದಾನದಡಿಯಲ್ಲಿ ಎಸ್.ಸಿ., ಎಸ್.ಟಿ. ಕಲ್ಯಾಣ ನಿಧಿಗೆ ರೂ. 89 ಲಕ್ಷ ಹಾಗೂ ಬಡತನ ರೇಖೆಯಲ್ಲಿರುವ ಕುಟುಂಬಗಳ ಅಭಿವೃದ್ಧಿಗೆ ರೂ. 29 ಲಕ್ಷಗಳನ್ನು ಮೀಸಲಿಡಲಾಗಿದೆ. ಅಧ್ಯಕ್ಷ ಎಚ್.ಎಂ. ನಂದಕುಮಾರ್ ಮಂಡಿಸಿದ ಉಳಿತಾಯ ಬಜೆಟನ್ನು ಸರ್ವ ಸದಸ್ಯರು ಸ್ವಾಗತಿಸಿದರು. ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ಸದಸ್ಯ ಟಿ.ಎಂ. ಅಯ್ಯಪ್ಪ, ಸರ್ಕಾರದಿಂದ ಬರುವ ಅನುದಾನಕ್ಕೆ ಯೋಜನೆ ರೂಪಿಸುವ ಸಂದರ್ಭ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಪ್ರತಿ  ಬಡಾವಣೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟು ಹಿಂದುಳಿದ ಮತ್ತು ಕೊಳಚೆ ಪ್ರದೇಶದ ಬಡಾವಣೆಗಳಿಗೆ ಶೇ 50ರಷ್ಟು ಅನುದಾನ ಮೀಸಲಿಡುವಂತೆ ಮನವಿ ಮಾಡಿದರು.ಮಳೆ ಪರಿಹಾರ ಹಣವು ಜಿಲ್ಲಾಡಳಿತ ಮೂಲಕ ವಿತರಿಸಲಾಗುತ್ತಿದೆ. ಈ ಹಣವನ್ನು ನಗರಸಭೆಯ ಮೂಲಕ ವಿತರಿಸುವಂತಾಗಬೇಕು. ಮಾತ್ರವಲ್ಲದೆ ನಗರಸಭೆಯಲ್ಲಿಯೇ ಪ್ರತ್ಯೇಕ ನಿಧಿ ಸ್ಥಾಪಿಸುವಂತೆ ಕೋರಿಕೊಂಡರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ರೂ. 20 ಲಕ್ಷವನ್ನು ಮಳೆಹಾನಿ ಪರಿಹಾರಕ್ಕೆ ಮೀಸಲಿಡುವುದಾಗಿ ಘೋಷಿಸಿದರು. ಅಧ್ಯಕ್ಷರ ಈ ನಿರ್ಧಾರವನ್ನು ಸರ್ವ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.ಆಡಳಿತ ಪಕ್ಷದ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಿ ಹಣ ಕಾಯ್ದಿರಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ನಂದಕುಮಾರ್ ಕುಂಡಾಮೇಸ್ತ್ರಿ ಯೋಜನೆಗೆ ರೂ. 30 ಕೋಟಿ ವಿನಿಯೋಗಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನವಾದ ಬಳಿಕ ಮಡಿಕೇರಿ ನಗರಕ್ಕೆ ಅಗತ್ಯವಿರುವ ನೀರು ಪೂರೈಕೆಯಾಗಲಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷೆ ವಸಂತಕೇಶವ, ಪೌರಾಯುಕ್ತ ಶಿವಕುಮಾರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.