ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ₹ 5 ಕೋಟಿ ’

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಡಯಾಲಿಸಿಸ್ ಘಟಕ’ ಉದ್ಘಾಟಿಸಿದ ದಿನೇಶ್ ಗುಂಡುರಾವ್
Published 25 ಜೂನ್ 2024, 4:43 IST
Last Updated 25 ಜೂನ್ 2024, 4:43 IST
ಅಕ್ಷರ ಗಾತ್ರ

ಮಡಿಕೇರಿ: ‘ನಮ್ಮ ತಂದೆ ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದು, ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ನಿಶ್ಚಿತವಾಗಿಯೂ ಇನ್ನಷ್ಟು ಶಕ್ತಿ ತುಂಬಲಾಗುವುದು’ ಎಂದು ಆರೋಗ್ಯ ಖಾತೆ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು.

ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರು ಸೋಮವಾರ ‘ಡಯಾಲಿಸಿಸ್ ಘಟಕ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗಳ ಅಭಿವೃದ್ಧಿಗೆ ಒಟ್ಟು ₹ 5 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ. ಇದನ್ನು ಮಂಜೂರು ಮಾಡಿಕೊಡಲಾಗುವುದು. ಮಾತ್ರವಲ್ಲ, ಮುಂದಿನ ಬಜೆಟ್‌ನಲ್ಲಿ ಕುಶಾಲನಗರ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು.

ಈಗ ಇಲ್ಲಿ 3 ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್‌)ಯಡಿ ಮತ್ತೊಂದು ಯಂತ್ರವನ್ನೂ ಅಳವಡಿಸಿಕೊಳ್ಳಲು ಅವಕಾಶ ಇದೆ ಎಂದರು.

ಇನ್ನು 3–4 ತಿಂಗಳುಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಔಷಧಗಳು ದೊರೆಯುವಂತೆ ಮಾಡಲಾಗುವುದು. ಆಗ ಆಸ್ಪತ್ರೆಯ ಸುತ್ತಮುತ್ತ ತಮಿಳುನಾಡಿನಂತೆ ಒಂದೇ ಒಂದು ಔಷಧ ಅಂಗಡಿಗಳೂ ಇರುವುದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ತಜ್ಞವೈದ್ಯರು ಕೆಲಸ ನಿರ್ವಹಿಸಲು ಆಸಕ್ತಿ ತೋರಬೇಕು’ ಎಂದು ಹೇಳಿದರು.

ಇದಕ್ಕೂ ಮುನ್ನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ದಿನೇಶ್‌ ಗುಂಡೂರಾವ್ ರೋಗಿಗಳ ಉಭಯ ಕುಶಲೋಪರಿ ವಿಚಾರಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಕೆ.ಪಿ. ಚಂದ್ರಕಲಾ, ಚಂದ್ರಮೌಳಿ, ಮಂಜುನಾಥ್, ಕೆಡಿಪಿ ಸಭೆಯ ಸದಸ್ಯರಾದ ಸುನಿತಾ, ತಹಶೀಲ್ದಾರರಾದ ಕಿರಣ್ ಗೌರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

ಡಯಾಲಿಸೀಸ್‌ಗಾಗಿ ರೋಗಿಗಳು ಪರದಾಡುತ್ತಿರುವ ಕುರಿತು ‘ಪ್ರಜಾವಾಣಿ’ ‘ಡಯಾಲಿಸಿಸ್‌ಗೆ ಬೇರೆಡೆ ಹೋಗುವ ಸ್ಥಿತಿ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಆರೋಗ್ಯ ಖಾತೆ ಸಚಿವ ದಿನೇಶ್‌ ಗುಂಡೂರಾವ್ ಅವರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಡಯಾಲಿಸಿಸ್ ಘಟಕ ಉದ್ಘಾಟಿಸಿ ರೋಗಿಗಳೊಂದಿಗೆ ಮಾತನಾಡಿದರು. ಶಾಸಕ ಡಾ. ಮಂತರ್‌ಗೌಡ ಭಾಗವಹಿಸಿದ್ದರು
ಆರೋಗ್ಯ ಖಾತೆ ಸಚಿವ ದಿನೇಶ್‌ ಗುಂಡೂರಾವ್ ಅವರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಡಯಾಲಿಸಿಸ್ ಘಟಕ ಉದ್ಘಾಟಿಸಿ ರೋಗಿಗಳೊಂದಿಗೆ ಮಾತನಾಡಿದರು. ಶಾಸಕ ಡಾ. ಮಂತರ್‌ಗೌಡ ಭಾಗವಹಿಸಿದ್ದರು

ಜಿಲ್ಲೆಗೆ ನೇಮಕವಾಗುವ ವೈದ್ಯರಿಗೆ ವಿಶೇಷ ಪ್ಯಾಕೇಜ್:

ಒತ್ತಾಯ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಇದು ಬೆಟ್ಟಗುಡ್ಡ ಪ್ರದೇಶ ಎಂಬ ಕಾರಣಕ್ಕೆ ತಜ್ಞ ವೈದ್ಯರು ಯಾರೂ ಕೆಲಸಕ್ಕೆ ಬರಲು ಒಲವು ತೋರುತ್ತಿಲ್ಲ. ಹಾಗಾಗಿ ಜಿಲ್ಲೆಗೆ ನೇಮಕವಾಗುವ ತಜ್ಞ ವೈದ್ಯರಿಗೆಂದೇ ವಿಶೇಷ ವೇತನದ ಪ್ಯಾಕೇಜ್ ನೀಡಬೇಕು’ ಎಂದು ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ವೈಫಲ್ಯ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ 1 ಡಯಾಲಿಸಿಸ್‌ ಯಂತ್ರ ನೀಡುವ ಕುರಿತು ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು. ಹೆಬ್ಬಾಲೆ ಮತ್ತು ಸುಂಟಿಕೊಪ್ಪ ಆರೋಗ್ಯ ಕೇಂದ್ರಗಳನ್ನೂ ಮೇಲ್ದರ್ಜೆಗೇರಿಸಬೇಕು ಎಂದು ಅವರು ಮನವಿ ಮಾಡಿದರು.

ಕೂಡಿಗೆ ಕೈಗಾರಿಕಾ ಪ್ರದೇಶಕ್ಕೆ ಗುಂಡೂರಾವ್ ಹೆಸರು ‘ಮುಖ್ಯಮಂತ್ರಿ ಗುಂಡೂರಾವ್ ಅವರ ಹೆಸರು ಕೊಡಗು ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯಬೇಕಿದೆ. ಹಾಗಾಗಿ ಕೂಡಿಗೆ ಕೈಗಾರಿಕಾ ಪ್ರದೇಶಕ್ಕೆ ಗುಂಡೂರಾವ್ ಅವರ ಹೆಸರಿಡಲು ಚಿಂತಿಸಲಾಗಿದೆ’ ಎಂದು ಶಾಸಕ ಡಾ. ಮಂತರ್‌ಗೌಡ ತಿಳಿಸಿದರು.

ಕುಶಾಲನಗರಕ್ಕೂ ‘ಸ್ಟೆಮಿ’ ಯೋಜನೆ ವ್ಯಾಪ್ತಿಗೆ ತನ್ನಿ

ದಿನೇಶ್‌ ಗುಂಡೂರಾವ್ ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲ್ಲೂಕು ಅನುಷ್ಠಾನ ಅಧ್ಯಕ್ಷ ವಿ.ಪಿ. ಶಶಿಧರ್ ಹೃದಯಘಾತವಾದಾಗ ತಕ್ಷಣಕ್ಕೆ ಜೀವ ಉಳಿಸುವ ಕುರಿತು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಹೃದಯಾಘಾತವಾದಾಗ ತಕ್ಷಣ ಜೀವ ಉಳಿಸಲು ‘ಸ್ಟೆಮಿ’ ಎಂಬ ಯೋಜನೆಯನ್ನು ನಟ ಪುನೀತ್‌ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನೂ ತರುವಂತೆ ಪ್ರಸ್ತಾವ ಸಲ್ಲಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ. ಸತೀಶ್‌ಕುಮಾರ್ ಅವರಿಗೆ ವೇದಿಕೆ ಮೇಲೆಯೇ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT