ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ವಿಮೆಯ ವ್ಯಾಪ್ತಿಗೆ 595 ರೈತರು

ಕಳೆದ ವರ್ಷಕ್ಕಿಂತ ಈ ವರ್ಷ 395 ಹೆಚ್ಚು ರೈತರಿಂದ ನೋಂದಣಿ, ಕೃಷಿ ಇಲಾಖೆ ಅಧಿಕಾರಿಗಳಿಂದ ವ್ಯಾಪಕ ಪ್ರಚಾರ
Published 29 ಆಗಸ್ಟ್ 2024, 7:08 IST
Last Updated 29 ಆಗಸ್ಟ್ 2024, 7:08 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ವರ್ಷಕ್ಕೆ ಹೋಲಿಸಿ ದರೆ ಈ ವರ್ಷ ಹೆಚ್ಚು ಮಂದಿ ರೈತರು ಬೆಳೆವಿಮೆಗೆ ನೋಂದಾಯಿಸಿ ಕೊಂಡಿದ್ದಾರೆ. ಕಳೆದ ವರ್ಷ ಕೇವಲ 202 ಮಂದಿಯಷ್ಟೇ ನೋಂದಾ ಯಿಸಿಕೊಂಡಿದ್ದರು. ಆದರೆ, ಈ ವರ್ಷ ಇಲ್ಲಿಯವರೆಗೆ 595 ಮಂದಿ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ.

ಕಳೆದ ವರ್ಷ ಕಾಡಿದ ಬರದಿಂದ ಬಹುತೇಕ ಕೃಷಿ ಬೆಳೆಗಳು ಹಾಳಾದವು. ಸಮರ್ಪಕವಾಗಿ ಇಳುವರಿಯೂ ಬರಲಿಲ್ಲ. ಇದರಿಂದ ಎಚ್ಚೆತ್ತ ರೈತರು ಒಂದು ವೇಳೆ ಈ ವರ್ಷವೂ ಬರ ಬಂದರೆ ನಷ್ಟವಾದೀತು ಎಂಬ ಕಾರಣಕ್ಕೆ ಬೆಳೆ ವಿಮೆಯತ್ತ ವಾಲಿದ್ದಾರೆ. ಇದರೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳೂ ನಡೆಸಿದ ವ್ಯಾಪಕ ಪ್ರಚಾರದಿಂದಾಗಿಯೂ ಬೆಳೆ ವಿಮೆ 500ರ ಗಡಿ ದಾಟುವಂತಾಗಿದೆ.

ಸಾಮಾನ್ಯವಾಗಿ, ಕೊಡಗಿನಲ್ಲಿ ಬೆಳೆ ವಿಮೆ ಹೆಚ್ಚು ಜನಪ್ರಿಯವಾಗಿರಲಿಲ್ಲ. ರಾಜ್ಯದ ಯಾವುದೇ
ಜಿಲ್ಲೆಯಲ್ಲೂ ಮಳೆ ಬೀಳದೇ ಭೀಕರ ಬರ ಕಾಡಿದರೂ, ಕೊಡಗಿನಲ್ಲಿ ಮಾತ್ರ ಸಮೃದ್ಧ ಮಳೆ ಬರುತ್ತಿತ್ತು. ಹಸನಾದ ಫಸಲು ಕೈಗೆ ಸಿಗುತ್ತಿತ್ತು. ಈ ಕಾರಣಕ್ಕೆ ರೈತರಿಗೆ ಬೆಳೆ ವಿಮೆಯ ಅಗತ್ಯವೇ ಬಂದಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಹವಾಮಾನ ವೈಪರೀತ್ಯಗಳು ರೈತರ ಜಂಘಾ ಬಲವನ್ನೇ ಉಡುಗಿಸಿದೆ.

ಕಳೆದ ವರ್ಷ ಮಳೆ ಕಡಿಮೆಯಾಗಿತ್ತು. ಈ ವರ್ಷ ಮಾರ್ಚ್, ಏಪ್ರಿಲ್‌ನಲ್ಲೂ ಮಳೆಯ ಕೊರತೆ ಎದುರಾಗಿತ್ತು. ಆದರೆ, ಮೇ, ಜೂನ್, ಜುಲೈ ತಿಂಗಳಿನಲ್ಲಿ ಸಮೃದ್ಧ ಮಳೆಯಾಗಿ, ರೈತರ ಆತಂಕವನ್ನು ದೂರ ಮಾಡಿತಾದರೂ ಮತ್ತೆ ಆಗಸ್ಟ್‌ನಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇಂತಹ ಹವಾಮಾನದ ಬದಲಾವಣೆಗಳಿಂದ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಜೂ‌ನ್ 18ರಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಗ ಕೇವಲ ಇಬ್ಬರು ಮಾತ್ರ ನೋಂದಣಿಯಾಗಿದ್ದುದ್ದನ್ನು ಗಮನಿಸಿ ಈ ವರ್ಷ ಬೆಳೆ ವಿಮೆಯನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿ, ಹೆಚ್ಚಿನ ರೈತರು ಬೆಳೆವಿಮೆಯ ವ್ಯಾಪ್ತಿಗೆ ಒಳಪಡುವಂತೆ ಮಾಡಬೇಕು ಎಂದು ಸೂಚಿಸಿದ್ದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ಸೋಮಶೇಖರ್ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಹೋಬಳಿ ಮಟ್ಟ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳನ್ನು ಬೆಳೆವಿಮೆ ಯೋಜನೆಯಡಿ ಅಧಿಸೂಚಿತಗೊಂಡಿವೆ. ಕೊಡಗು ಜಿಲ್ಲೆಗೆ ಓರಿಯಂಟಲ್ ಸಾಮಾನ್ಯ ವಿಮಾ ಕಂಪನಿಯನ್ನು 2024-25 ಮತ್ತು 2025-26 ನೇ ಸಾಲಿಗೆ ಅನುಷ್ಠಾನ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಭತ್ತದ (ನೀರಾವರಿ ಮತ್ತು ಮಳೆಯಾಶ್ರಿತ) ಬೆಳೆಗೆ ಆಗಸ್ಟ್ 16 ಮತ್ತು ಮುಸುಕಿನ ಜೋಳದ ಬೆಳೆಗೆ ಆಗಸ್ಟ್ 31 ರವರೆಗೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ’ ಎಂದು ಹೇಳಿದರು.

ಈ ಪೈಕಿ ಭತ್ತದ ಬೆಳೆಯ ನೋಂದಣಿ ಅವಧಿ ಮುಗಿದಿದೆ. ಇನ್ನೂ ಮುಸುಕಿನ ಜೋಳಕ್ಕೆ ಅವಕಾಶ ಇದೆ.

ಜಿಲ್ಲೆಯಲ್ಲಿ ಒಟ್ಟು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಸದ್ಯ, 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇನ್ನುಳಿದ ಪ್ರದೇಶಗಳಲ್ಲೂ ಬಿತ್ತನೆ, ನಾಟಿ ಚಟುವಟಿಕೆಗಳು ಬಿರುಸಿನಿಂದ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT