ಮಡಿಕೇರಿ: ಆದ್ಯತಾ ಪಡಿತರ ಚೀಟಿ (ಬಿಪಿಎಲ್)ದಾರರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಬದಲಾಗಿ ರಾಜ್ಯ ಸರ್ಕಾರ ನೀಡುತ್ತಿರುವ ₹ 170 ಹಣ ಜಿಲ್ಲೆಯಲ್ಲಿ ಇನ್ನೂ 6,852 ಜನರಿಗೆ ಸಿಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ನೇರ ನಗದು ಹಣ (ಡಿಬಿಟಿ) ಪಾವತಿಯಾಗದೇ ಇಲಾಖೆಗೆ ವಾಪಸ್ಸಾಗುತ್ತಿದೆ.
ಜುಲೈ ತಿಂಗಳಿನಲ್ಲಿ ಈ ರೀತಿ ಹಣ ಸಂದಾಯವಾಗದವರ ಸಂಖ್ಯೆ 17,260 ಇತ್ತು. 5 ತಿಂಗಳಿನಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸಿ 10,408 ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿ, ಹಣ ಜಮೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,01,156 ಆದ್ಯತಾ ಪಡಿತರ ಚೀಟಿದಾರರು ಹಾಗೂ 9,746 ಅಂತ್ಯೋದಯ ಪಡಿತರ ಚೀಟಿದಾರರು ಇದ್ದಾರೆ. ಇವರಲ್ಲಿ ಕೇವಲ 80,351 ಮಂದಿಗಷ್ಟೇ ಜುಲೈ ತಿಂಗಳಿನಲ್ಲಿ ‘ಡಿಬಿಟಿ’ ಮೂಲಕ ಹೆಚ್ಚುವರಿ 5 ಕೆ.ಜಿಗೆ ಬದಲಾಗಿ ಹಣ ಪಾವತಿಯಾಗಿತ್ತು. ಪ್ರತಿ ತಿಂಗಳೂ ಇವರ ಸಂಖ್ಯೆ ಹೆಚ್ಚುತ್ತಿದ್ದು, ನವೆಂಬರ್‌ನಲ್ಲಿ 92,891 ಮಂದಿಗೆ ಡಿಬಿಟಿ ಮೂಲಕ ₹ 4.82 ಕೋಟಿ ಹಣ ಪಾವತಿಯಾಗಿದೆ.
ಇನ್ನುಳಿದ 6,852 ಆದ್ಯತಾ ಪಡಿತರ ಚೀಟಿದಾರರಿಗೂ ‘ಡಿಬಿಟಿ’ ಮೂಲಕ ಹಣ ಪಾವತಿಸುವುದಕ್ಕಾಗಿ ಕಸರತ್ತು ಮುಂದುವರಿಸಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಸತತ 3 ತಿಂಗಳು ಪಡಿತರ ತೆಗೆದುಕೊಳ್ಳದೇ ಇರುವವರು ಹಾಗೂ 4ಕ್ಕಿಂತ ಕಡಿಮೆ ಜನರಿರುವ ಅಂತ್ಯೋದಯ ಕಾರ್ಡ್‌ಗಳು ಸೇರಿ 11,159 ಪಡಿತರ ಚೀಟಿದಾರರನ್ನು ಸದ್ಯ ಯೋಜನೆಯಿಂದ ಹೊರಗಿಡಲಾಗಿದೆ.
ಬಿಪಿಎಲ್ ಪಡಿತರ ಚೀಟಿದಾರರೇ ಅಧಿಕ!
ಜಿಲ್ಲೆಯಲ್ಲಿ ಎಪಿಎಲ್‌ಗಿಂತ ಬಿಪಿಎಲ್ ಪಡಿತರ ಚೀಟಿದಾರರ ಸಂಖ್ಯೆಯೇ ಅಧಿಕವಿದೆ. ಶೇ 77.70ರಷ್ಟು ಪಡಿತರ ಚೀಟಿದಾರರು ಬಿಪಿಎಲ್ ಪಡಿತರ ಚೀಟಿಯನ್ನೇ ಹೊಂದಿದ್ದಾರೆ. ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯವೂ ನಡೆದಿದ್ದು, ಕಳೆದ ಒಂದು ವರ್ಷದಲ್ಲಿ 4,651 ಇಂತಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಇವರಿಂದ ₹ 7.92 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.
ಹೊಸದಾಗಿ ಪಡಿತರ ಚೀಟಿಗಳಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. ಆನ್‌ಲೈನ್ ಮೂಲಕ ಡಿಸೆಂಬರ್ ಅಂತ್ಯಕ್ಕೆ 6,687 ಮಂದಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 5,188 ಅರ್ಜಿಗಳನ್ನು ಅನುಮೋದನೆ ಮಾಡಲಾಗಿದ್ದು, 408 ಅರ್ಜಿಗಳು ವಿವಿಧ ಕಾರಣಗಳಿಗೆ ತಿರಸ್ಕೃತಗೊಂಡಿವೆ. ಇನ್ನೂ 1,091 ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ.
ಪ್ರತಿ ತಿಂಗಳು ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 15,131 ಕ್ವಿಂಟಲ್, ಎಎವೈ ಪಡಿತರ ಚೀಟಿದಾರರಿಗೆ 3,407 ಕ್ವಿಂಟಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 2,354 ಕ್ವಿಂಟಲ್ ಅಕ್ಕಿಯನ್ನು ಪೂರೈಸಲಾಗುತ್ತಿದೆ.
‘ಡಿಬಿಟಿ’ ವ್ಯವಸ್ಥೆಯಡಿ ಹಣ ಪಾವತಿ ಹೆಚ್ಚಳ
ಬಿಪಿಎಲ್ ಮತ್ತು ಎಎವೈ ಪಡಿತರ ಚೀಟಿ ಹೊಂದಿರುವವರಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಫಲಾನುಭವಿಗೆ ₹ 170 ಹಣವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಪಡೆಯುತ್ತಿರುವವರ ಸಂಖ್ಯೆಯ ಪ್ರತಿ ತಿಂಗಳೂ ಹೆಚ್ಚುತ್ತಿದೆ. ಜುಲೈನಲ್ಲಿ 80,531 ಮಂದಿಗೆ ₹ 4.24 ಕೋಟಿ ಪಾವತಿಯಾಗಿದ್ದರೆ, ಆಗಸ್ಟ್‌ನಲ್ಲಿ 85,751 ಮಂದಿಗೆ ₹ 4.53 ಕೋಟಿ, ಸೆಪ್ಟೆಂಬರ್‌ನಲ್ಲಿ 89,743 ಮಂದಿಗೆ ₹ 4.68 ಕೋಟಿ, ಅಕ್ಟೋಬರ್‌ನಲ್ಲಿ 91,360 ಮಂದಿಗೆ ₹ 4.77 ಕೋಟಿ ಹಾಗೂ ನವೆಂಬರ್‌ನಲ್ಲಿ 92,891 ಮಂದಿಗೆ ₹ 4.82 ಕೋಟಿ ಪಾವತಿಯಾಗಿದೆ.
ಅಂಚೆ ಕಚೇರಿಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಶಿಬಿರಗಳನ್ನು ನಡೆಸಿ, ಹಣ ಪಾವತಿಯಾಗದ ಫಲಾನುಭವಿಯ ಖಾತೆಯಲ್ಲಿರುವ ದೋಷಗಳನ್ನು ನಿವಾರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಎಲ್ಲರಿಗೂ ‘ಡಿಬಿಟಿ’ ಮೂಲಕ ಹಣ ಪಾವತಿಯಾಗುವ ವಿಶ್ವಾಸ ಇದೆ ಎಂದು ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕೊಡಗು ಜಿಲ್ಲೆಯಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ
ಬಿಪಿಎಲ್ : 1,01,156
ಎಪಿಎಲ್ : 37,187
ಎಎವೈ: 9,746
ಒಟ್ಟು : 1,48,089
ಒಟ್ಟು ನ್ಯಾಯಬೆಲೆ ಅಂಗಡಿಗಳು : 274
ಕಳೆದ ಒಂದು ವರ್ಷದಲ್ಲಿ ಪತ್ತೆ ಹಚ್ಚಿದ ಅನರ್ಹ ಪಡಿತರ ಚೀಟಿಗಳು : 4,651
ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರು : 6,687
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.