ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಸಂವಾದ ಕಾರ್ಯಕ್ರಮ: ಪಕ್ಷಾತೀತವಾದ ಹೋರಾಟಕ್ಕೆ ಒಕ್ಕೊರಲ ಕರೆ

ಕಾಂಗ್ರೆಸ್, ಬಿಜೆಪಿ, ಪರಿಸರವಾದಿಗಳು, ರೈತ ಹೋರಾಟಗಾರರು, ಶಾಸಕರು ಸಂವಾದದಲ್ಲಿ ಭಾಗಿ
Published : 16 ಸೆಪ್ಟೆಂಬರ್ 2024, 3:05 IST
Last Updated : 16 ಸೆಪ್ಟೆಂಬರ್ 2024, 3:05 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗು ಜಿಲ್ಲೆಯ ರೈತರು, ಬೆಳೆಗಾರರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾದ ‘ಸಿ’ ಮತ್ತು ‘ಡಿ’ ಭೂಮಿ ಸಮಸ್ಯೆ, ಕಸ್ತೂರಿ ರಂಗನ್ ವರದಿ, ವನ್ಯಜೀವಿ ಉತ್ಪನ್ನಗಳನ್ನು ವಾಪಸ್ ಕೊಡುವುದು, ವನ್ಯಜೀವಿ– ಮಾನವ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಪಕ್ಷಾತೀತವಾಗಿ, ರಾಜಕೀಯರಹಿತವಾಗಿ ಹೋರಾಡಬೇಕು ಎಂಬ ಒಕ್ಕೊರಲ ಅಭಿಪ್ರಾಯ ಇಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ರೈತ ಹೋರಾಟಗಾರರಾದ ಮನುಸೋಮಯ್ಯ, ಕೆ.ಪಿ.ಸುರೇಶ್, ಮಿಥುನ್, ಪರಿಸರವಾದಿ ತಮ್ಮು ಪೂವಯ್ಯ ಸೇರಿದಂತೆ ಹಲವು ಮಂದಿ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಎಲ್ಲರೂ ಪಕ್ಷಾತೀತವಾದ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದರು.

‘ಎಲ್ಲ ಪಕ್ಷದವರನ್ನು, ರೈತ ಹೋರಾಟಗಾರರನ್ನು ಒಳಗೊಂಡ ನಿಯೋಗವು ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಸದ್ಯದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕು’ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು. ‘ಸೆ. 19ರಂದು ಅರಣ್ಯ ಸಚಿವರು ಕಸ್ತೂರಿ ರಂಗನ್ ವರದಿ ಸಂಬಂಧ ಕರೆದಿರುವ ಸಭೆಗೆ ಇಲ್ಲಿನ ಅಪ್ಪಚ್ಚುರಂಜನ್ ನೇತೃತ್ವದ ಕಸ್ತೂರಿರಂಗನ್ ವಿರೋಧಿ ಸಮಿತಿಯೂ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಲಿ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.

‘ಭಾಷಣ, ಘೋಷಣೆಯಿಂದ ಸಮಸ್ಯೆ ಪರಿಹಾರ ಆಗದು’: ಶಾಸಕ ಎ.ಎಸ್.ಪೊನ್ನಣ್ಣ ಅವರು ‘ಕೇವಲ ಭಾಷಣದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಲವು ಕಾನೂನಿನಾತ್ಮಕ ಜಟಿಲ ತೊಡಕುಗಳು ಈ ಸಮಸ್ಯೆಗಳ ನಿವಾರಣೆಯಲ್ಲಿವೆ. ಘೋಷಣೆ ಕೂಗುವುದರಿಂದ, ಹೋರಾಟ ನಡೆಸುವುದರಿಂದ ಯಾವುದೇ ಸಮಸ್ಯೆಗಳು ಪರಿಹಾರ ಕಾಣುವುದಿಲ್ಲ’ ಎಂದು ತಿಳಿಸಿದರು.

ಕಾನೂನಿನ ಅಂಶಗಳನ್ನು ಸವಿಸ್ತಾರವಾಗಿ ವಿವರಿಸಿದ ಅವರು, ‘ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೂ ಸಿ ಮತ್ತು ಡಿ ಭೂಮಿ ಸಮಸ್ಯೆಯ ಪರಿಹಾರ ಕಷ್ಟ ಸಾಧ್ಯ. ಅರಣ್ಯ ಪ್ರದೇಶವೆಂದು ಘೋಷಣೆಯಾದ ನಂತರ ಒತ್ತುವರಿ ಮಾಡಿಕೊಂಡಿರುವುದನ್ನೂ ರಕ್ಷಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

‘ವನ್ಯಜೀವಿ ಉತ್ಪನ್ನಗಳ ಘೋಷಣೆಗೆ ಕೇಂದ್ರ ಸರ್ಕಾರ ಮತ್ತೆ ಕಾಲಾವಕಾಶ ಕೊಡಬೇಕು. ಇದಕ್ಕಾಗಿ ಸಂಸದರ ಮೂಲಕ ಕೇಂದ್ರಕ್ಕೆ ಒತ್ತಡ ಹಾಕಬೇಕು’ ಎಂದು ಸಲಹೆಯನ್ನೂ ನೀಡಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ರಾಜಕಾರಣಿಗಳೆಲ್ಲ ಪಕ್ಷಬೇಧ ಮರೆತು ರೈತರ ಪರ ನಿಲ್ಲಬೇಕು. ರಾಜಕೀಯ ಕಿತ್ತಾಟ ಬಿಟ್ಟು ಪರಿಸರಕ್ಕೂ ಅನ್ಯಾಯ ಆಗಬಾರದು, ರೈತರಿಗೂ ಅನ್ಯಾಯವಾಗಬಾರದು ಆ ಬಗೆಯಲ್ಲಿ ಒಂದೊಂದೆ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಪ್ರತಿಪಾದಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರರು ವಿವಿಧ ಪಕ್ಷಗಳ ಮುಖಂಡರು ಪತ್ರಕರ್ತರು ಭಾಗಿಯಾಗಿದ್ದರು
ಸಂವಾದ ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರರು ವಿವಿಧ ಪಕ್ಷಗಳ ಮುಖಂಡರು ಪತ್ರಕರ್ತರು ಭಾಗಿಯಾಗಿದ್ದರು

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ‘ಪಕ್ಷಾತೀತವಾದ, ರಾಜಕೀಯ ರಹಿತ ಹೋರಾಟ ಮಾಡಬೇಕು. ವನ್ಯಜೀವಿ ಸಂಘರ್ಷ ತಪ್ಪಿಸಲು ಮುಂದಿನ ಸಾಲಿನ ಬಜೆಟ್‌ನಲ್ಲಿ ₹ 500 ಕೋಟಿ ನಿಗದಿಪಡಿಸಲು ಎಲ್ಲರೂ ಮನವಿ ಮಾಡಬೇಕು’ ಎಂದರು.

ಸಂಘದ ಅಧ್ಯಕ್ಷೆ ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ನಿರ್ದೇಶಕ ಆನಂದ್ ಕೊಡಗು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು
ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು

ಸಂವಾದದಲ್ಲಿ ಕೇಳಿ ಬಂದಿದ್ದು

ಬಫರ್ ವಲಯವನ್ನು ಶೂನ್ಯಕ್ಕೆ ಇಳಿಸಿ ‘ಸಿ’ ಮತ್ತು ‘ಡಿ’ ಭೂಮಿಯನ್ನು ರೈತರಿಗೆ ಖಾತೆ ಮಾಡಿಕೊಡಿ. ಬಫರ್‌ ವಲಯವನ್ನು ಶೂನ್ಯಕ್ಕೆ ಇಳಿಸಿ. ಪರಂಪರೆಯಿಂದ ಬಳಕೆ ಮಾಡುತ್ತಿರುವ ವನ್ಯಜೀವಿ ಉತ್ಪನ್ನವನ್ನು ಬಳಸಲು ಅವಕಾಶ ಮಾಡಿಕೊಡಿ.
ರವಿ ಕಾಳಪ್ಪ ಬಿಜೆಪಿ ಜಿಲ್ಲಾಧ್ಯಕ್ಷ.
ಸಾಗುವಳಿ ಮಾಡುತ್ತಿರುವವರಿಗೆ ಅನುಕೂಲ ಮಾಡಿಕೊಡಿ ಸಿ ಮತ್ತು ಡಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅನುಕೂಲ ಮಾಡಿಕೊಡಿ. ಬಫರ್ ವಲಯನ್ನು ಶೂನ್ಯಕ್ಕೆ ಇಳಿಸಿ. ಕಸ್ತೂರಿ ರಂಗನ್ ವರದಿಯನ್ನು ಎಲ್ಲ ಜಿಲ್ಲೆಯವರೂ ವಿರೋಧಿಸಲಿ.
ಧರ್ಮಜ ಉತ್ತಪ್ಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ.
ಅನಧಿಕೃತ ಒತ್ತುವರಿ ತೆರವು ಮಾಡಿ ಕೊಡಗಿನಲ್ಲಿ 1900ರಲ್ಲಿ 16 ಸಾವಿರ ಎಕರೆ ಇದ್ದ ದೇವರಕಾಡು ಈಗ 11 ಸಾವಿರ ಎಕರೆಗೆ ಇಳಿಕೆಯಾಗಿದೆ. ಅನಧಿಕೃತವಾಗಿ ಆಗಿರುವ ಒತ್ತುವರಿಯನ್ನು ತೆರವು ಮಾಡಿ ಇರುವ ಅರಣ್ಯವನ್ನು ಉಳಿಸಿಕೊಳ್ಳಬೇಕು
ತಮ್ಮುಪೂವಯ್ಯ ಪರಿಸರವಾದಿ.
ಹೊರ ಜಿಲ್ಲೆಯಲ್ಲಿ ಭೂಮಿ ನೀಡಬಾರದೇಕೆ? ಹಾರಂಗಿ ಜಲಾಶಯದಿಂದ ಬಹುಪಾಲು ನೀರು ಹೊರ ಜಿಲ್ಲೆಗಳಿಗೆ ಹರಿದು ಹೋಗುತ್ತದೆ. ಆದರೆ ಈ ಜಲಾಶಯ ನಿರ್ಮಿಸಲು ಭೂಮಿ ಕಳೆದುಕೊಂಡ ರೈತರಿಗೆ ಹೊರ ಜಿಲ್ಲೆಯಲ್ಲಿ ಭೂಮಿ ನೀಡಬಾರದೇಕೇ?
ಕೆ.ಪಿ.ಸುರೇಶ್ ರೈತ ಹೋರಾಟ ಸಮಿತಿಯ ಅಧ್ಯಕ್ಷ.
ಸಣ್ಣ ಸಣ್ಣ ರೈತರನ್ನು ಉಳಿಸಿ ಈ ಸಭೆಗೆ ಸಂಸದರನ್ನೂ ಕರೆಯಬೇಕಿತ್ತು. ದೊಡ್ಡ ದೊಡ್ಡ ಕಂಪನಿಗಳ ಒತ್ತುವರಿಗಳನ್ನು ತೆರವು ಮಾಡಿ. ಸಣ್ಣ ಸಣ್ಣ ರೈತರನ್ನು ಉಳಿಸಬೇಕು. ಅವರನ್ನು ಒಕ್ಕಲೆಬ್ಬಿಸಬಾರದು
ಮನು ಸೋಮಯ್ಯ ರೈತಪರ ಹೋರಾಟಗಾರ.
ಸೂಕ್ಷ್ಮ ವಲಯ ರಚನೆ ಬೇಡ ಕಸ್ತೂರಿರಂಗನ್ ವರದಿ ಪ್ರಕಾರ ಸೂಕ್ಷ್ಮ ವಲಯಗಳು ರಚನೆಯಾದರೆ ಕೊಡಗಿನಲ್ಲಿ ಯಾರೂ ವಾಸ ಮಾಡಲು ಸಾಧ್ಯವಾಗುವುದಿಲ್ಲ
ಮಿಥುನ್ ರೈತಪರ ಹೋರಾಟಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT