ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ನವರಾತ್ರಿ ಪ್ರಯುಕ್ತ ಬೊಂಬೆಗಳಿಗೆ ಆರತಿ

ಬಿತ್ತನೆ ಮಾಡಿ ಬೆಳೆದ ಗಿಡಗಳಿಗೂ ಗೊಂಬೆ ಜೊತೆ ಪೂಜೆ
Published 21 ಅಕ್ಟೋಬರ್ 2023, 12:34 IST
Last Updated 21 ಅಕ್ಟೋಬರ್ 2023, 12:34 IST
ಅಕ್ಷರ ಗಾತ್ರ

ಸೋಮವಾರಪೇಟೆ: ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ ಪ್ರಾರಂಭವಾಗಿ, ಪೆಟ್ಟಿಗೆಯಲ್ಲಿರಿಸಿದ್ದ ಗೊಂಬೆಗಳನ್ನು ತೆಗೆದು, ಅವುಗಳಿಗೆ ಉಡುಗೆ ತೊಡಿಸಿ ಪಟ್ಟದ ಗೊಂಬೆಗಳನ್ನಾಗಿ ಶೃಂಗಾರ ಮಾಡಿ ಜೋಡಿಸುವ ಸಡಗರ ಎಲ್ಲೆಡೆ ಕಾಣಬಹುದು.

 ಮೈಸೂರಿನ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆ ಬಿಂಬಿಸಲು ಗೊಂಬೆ ಹಬ್ಬ ಆಚರಿಸಿದರೂ, ಇಂದು ರಾಜ್ಯದ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು.

ಅದರಂತೆ ತಮ್ಮ ಇಳಿ ವಯಸ್ಸಿನಲ್ಲಿಯೂ ಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಅವರ ಪತ್ನಿ ಪಿ. ಶಾರದ ಶಂಕರಪ್ಪ ಅವರು ನವರಾತ್ರಿ ಹಬ್ಬದ ಪ್ರಯುಕ್ತ 65ನೇ ವರ್ಷದ ಗೊಂಬೆಗಳನ್ನು ತಮ್ಮ ನಿವಾಸದಲ್ಲಿ ಕೂರಿಸಿ ಗಮನ ಸೆಳೆದಿದ್ದಾರೆ.

 65 ವರ್ಷಗಳ ಹಿಂದೆ ಬೆಂಗಳೂರಿನಿಂದ ಮದುವೆಯಾಗಿ ಬಂದ ಮೊದಲ ವರ್ಷದಿಂದಲೇ ನವರಾತ್ರಿ ಹಬ್ಬ ಪ್ರಾರಂಭಿಸಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಎಲ್ಲರೂ ವಿವಿಧ ಗೊಂಬೆಗಳನ್ನಿರಿಸಿ ಪೂಜೆ ಮಾಡುವುದು ವಾಡಿಕೆ. ಆದರೆ, ಇಲ್ಲಿ 9 ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಕೂಷ್ಮಾಂಡಾ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ, ಕಾಳರಾತ್ರಿ ದೇವಿ, ಮಹಾಗೌರಿ, ಅದಿಶಕ್ತಿ ದೇವಿಯ ಬೇರೆ ಬೇರೆ ಗೊಂಬೆಗಳನ್ನಿರಿಸಿ, ಅವುಗಳಿಗೆ ಹೊಂದುವ ಸೀರೆಯನ್ನುಡಿಸಿ, ಆಭರಣಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತಿದೆ.

ದಿನಂಪ್ರತಿ ವಿವಿಧ ತಿಂಡಿಗಳನ್ನು ಮಾಡಿ, ಬೆಳಿಗ್ಗೆ ಮತ್ತು ಸಂಜೆ ಪೂಜೆ, ಧ್ಯಾನ, ನಡೆಸುವುದರೊಂದಿಗೆ ಪೂಜೆಗೆ ಬಂದವರಿಗೆ ಫಲ ತಾಂಬೂಲ ನೀಡಲಾಗುತ್ತಿದೆ. ಇವರ ತಂದೆ ಬೆಂಗಳೂರಿನಲ್ಲಿ ಮರದಿಂದ ಗೌರಿ ಗಣೇಶ ಮೂರ್ತಿಗಳನ್ನು ಆಕರ್ಷಕವಾಗಿ ಕೆತ್ತನೆ ಮಾಡಿಸಿ ನೀಡಿದ್ದಾರೆ.

ಅಂದು ಹಚ್ಚಿದ್ದ ಬಣ್ಣ ಇಂದಿಗೂ ಮಾಸಿಲ್ಲ. ಅಲ್ಲದೆ, ಪ್ರಜೆಗಳಲ್ಲಿ ವಿವಿಧ ರಾಜ್ಯಗಳಿಂದ ತಂದಿರುವ ಖಡ್ಗ ಸೇರಿದಂತೆ ವಿವಿಧ ಪರಿಕರಗಳನ್ನಿಟ್ಟು ಪೂಜಿಸಲಾಗುತ್ತಿದೆ. ಗೊಂಬೆಗಳನ್ನು ಪೀಠ ಮಾಡಿಕೊಂಡು, ಮಣ್ಣಿನ ಮಡಿಕೆಯಲ್ಲಿ ಅಕ್ಕಿ ಹಾಕಿ, ಕಳಸ ಮಾಡಿ, ಅವುಗಳಿಗೆ ಮುಖವಾಡ ಹಾಕಲಾಗುತ್ತದೆ. ಎಲ್ಲಾ ಗೊಂಬೆಗಳಿಗೂ ಹೊಸ ಸೀರೆ ಉಡಿಸಿ ಅಲಂಕಾರ ಮಾಡಿರುವುದು ವಿಶೇಷ. ಇದರೊಂದಿಗೆ, ಮೊದಲ ದಿನವೇ ನವ ಧಾನ್ಯಗಳನ್ನು ಮಣ್ಣಿನ ಕುಂಡಗಳಲ್ಲಿ ಬಿತ್ತಲಾಗುತ್ತದೆ.  9 ದಿನಗಳಲ್ಲಿ ಅವು ಬೆಳೆದು ಗಿಡಗಳಾಗಿದ್ದು, ಅವುಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ.

‘ಮದುವೆಯಾಗಿ ಬಂದ ವರ್ಷದಲ್ಲಿ ತವರು ಮನೆಯಿಂದ ದಸರ ಗೊಂಬೆಗಳನ್ನು ತಂದು ಪೂಜೆ ಪ್ರಾರಂಭಿಸಿದೆ. ಅದು ನನ್ನ ತಾಯಿಯಿಂದ ಬಂದ ಬಳುವಳಿ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಂತೋಷವಾಗುತ್ತಿದೆ. ನಮ್ಮ ಕಲೆ, ಸಂಸ್ಸೃತಿ ಉಳಿಸಿ ಮುಂದುವರೆಸಿಕೊಂಡು ಹೋಗಬೇಕಾಗಿದೆ. 9 ದಿನಗಳ ಪೂಜೆಯ ನಂತರ ಕೊನೆಯ ದಿನದಂದು ತೋಟದಲ್ಲಿರುವ ಸುಮಾರು 200 ವರ್ಷಕ್ಕೂ ಹಳೆಯ ಬನ್ನಿ ಮರದಿಂದ ಬನ್ನಿ ತಂದು ಪೂಜೆ ಮಾಡಿ ಗೊಂಬೆಗಳನ್ನು ತೆಗೆದು ಪೆಟ್ಟಿಗೆಯಲ್ಲಿ ಇರಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಗೊಂಬೆ ಕೂರಿಸಿ ಪೂಜೆ ಮಾಡುವುದು ಕಡಿಮೆಯಾಗುತ್ತಿದೆ. ಮಹಿಳೆಯರು ಪೂಜೆ ಮಾಡುವುದರೊಂದಿಗೆ ತಮ್ಮ ಮಕ್ಕಳಿಗೂ ಇದರ ಮಹತ್ವವನ್ನು ತಿಳಿ ಹೇಳುವ ಮೂಲಕ ನಮ್ಮ ಸಂಸ್ಸೃತಿಯನ್ನು ಉಳಿಸಲು ಮುಂದಾಗಬೇಕು’ ಶಾರದಾ ಹೇಳುತ್ತಾರೆ.

ಸೋಮವಾರಪೇಟೆ ಬಸವೇಶ್ವರ ರಸ್ತೆಯ ನಿವಾಸಿ ಶಾರದ ಶಂಕರಪ್ಪ ಅವರ ಮನೆಯಲ್ಲಿ ನವರಾತ್ರಿ ಪ್ರಯುಕ್ತ ನವದಾನ್ಯಗಳನ್ನು ಭೀತ್ತಿ ಪೂಜೆ ಸಲ್ಲಿಸುತ್ತಿರುವುದು. 
ಸೋಮವಾರಪೇಟೆ ಬಸವೇಶ್ವರ ರಸ್ತೆಯ ನಿವಾಸಿ ಶಾರದ ಶಂಕರಪ್ಪ ಅವರ ಮನೆಯಲ್ಲಿ ನವರಾತ್ರಿ ಪ್ರಯುಕ್ತ ನವದಾನ್ಯಗಳನ್ನು ಭೀತ್ತಿ ಪೂಜೆ ಸಲ್ಲಿಸುತ್ತಿರುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT