ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆಯಲ್ಲೂ ಆಟಿ ಕಳೆಂಜದ ಸಂಭ್ರಮ

ಗ್ರಾಮಗಳನ್ನು ಸುತ್ತುವ ಶರೀರಕ್ಕೆ ಕಪ್ಪು ಮಸಿ ಬಳಿದುಕೊಂಡ ಮುಖವಾಡ ತೊಟ್ಟ ವೇಷಧಾರಿ ತಂಡ
ಸಿ.ಎಸ್.ಸುರೇಶ್
Published 9 ಆಗಸ್ಟ್ 2024, 5:54 IST
Last Updated 9 ಆಗಸ್ಟ್ 2024, 5:54 IST
ಅಕ್ಷರ ಗಾತ್ರ

ನಾಪೋಕ್ಲು: ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ‘ಆಟಿ ಕಳೆಂಜ’ ಎಂಬ ಸಾಂಪ್ರದಾಯಿಕ ಆಚರಣೆ ಕೊಡಗಿನಲ್ಲಿ ‘ಕಕ್ಕಡತಜ್ಜಿ’ ಎಂದು ಪ್ರಚಲಿತದಲ್ಲಿದ್ದು, ಈ ಸಾಂಪ್ರದಾಯಿಕ ಆಚರಣೆ ಇಂದು ಆರಂಭಗೊಳ್ಳಲಿದೆ.

ಕೊಡಗಿನ ಮೂಲನಿವಾಸಿ ಜನಾಂಗಗಳಲ್ಲಿ ಒಂದಾದ ಅರಮನೆ ಪಾಲೆ ಜನಾಂಗದವರು ಸಮೀಪದ ನರಿಯಂದಡ ಗ್ರಾಮದಲ್ಲಿ ‘ಆಟಿ ಕಳೆಂಜ’ವನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಆಧುನಿಕತೆಯ ಧಾವಂತದಲ್ಲಿ ವೈಶಿಷ್ಟ್ಯಪೂರ್ಣ ಸಂಸ್ಕೃತಿ, ಆಚಾರ, ವಿಚಾರಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ತಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಂತಹ ಸಂಪ್ರದಾಯವನ್ನು ಜತನದಿಂದ ಕಾಪಿಟ್ಟು, ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆಷಾಢ ತಿಂಗಳಿನಲ್ಲಿ ಆಟಿ ಕಳೆಂಜಕ್ಕೆ ಮೂಲ ನಿವಾಸಿ ಜನಾಂಗಗಳಲ್ಲಿ ಒಂದಾಗಿರುವ ಅರಮನೆ ಪಾಲೆ ಜನಾಂಗದವರು ಮುಂದಾಗುತ್ತಾರೆ. ಇದು ಜಿಲ್ಲೆಯಲ್ಲಿ ಏಕೈಕ ಆಚರಣೆ ಎನಿಸಿದೆ.

ಪ್ರತಿವರ್ಷ ಕೊಡಗಿನ ‘ಆಟಿ ಹದಿನೆಂಟರ’ ಆಚರಣೆ ಬಳಿಕ ಒಂದು ವಾರಗಳ ಕಾಲ ನಾಲ್ಕು ಗ್ರಾಮಗಳ ಮನೆಮನೆಗೆ ತೆರಳುತ್ತಾರೆ. ಗ್ರಾಮಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮನೆಗಳಿಗೆ ‘ಕಳೆಂಜ’ ಅಂದರೆ ಶರೀರಕ್ಕೆ ಕಪ್ಪು ಮಸಿ ಬಳಿದುಕೊಂಡು ಮುಖವಾಡವನ್ನು ತೊಟ್ಟಂತಹ ವೇಷಧಾರಿ ತಂಡ ಗ್ರಾಮಗಳನ್ನು ಸುತ್ತುತ್ತದೆ. ಲಯಬದ್ದ ವಾದ್ಯದ ಶಬ್ಭಕ್ಕೆ ಪ್ರಾಸಬದ್ದವಾಗಿ ಹಾಡು ಹೇಳುತ್ತಾ ಸಾಗುವ ತಂಡದಲ್ಲಿ ಅಜ್ಜಿ ವಿಶಿಷ್ಟ ವೇಷಭೂಷಣಗಳೊಂದಿಗೆ ಗಾಳಿ ಸೊಪ್ಪು ಎಂದು ಕರೆಯಲಾಗುವ ಒಂದು ಬಗೆಯ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ಯುವುದು ಸಂಪ್ರದಾಯ.

ಅಜ್ಜಿ ವೇಷಧಾರಿಯೊಂದಿಗೆ ಅವರ ಮುಂದೆ ಮೈಗೆಲ್ಲಾ ಕಪ್ಪು ಮಸಿಯನ್ನು ಬಳಿದುಕೊಂಡು ಮುಖವಾಡವನ್ನು ತೊಟ್ಟಂತಹ ಇಬ್ಬರು ಕಳಂಜ ವಾದ್ಯದ ಶಬ್ದಕ್ಕೆ ತಕ್ಕಂತೆ ಕುಣಿಯುತ್ತಾ ತಮ್ಮ ತಂಡದೊಂದಿಗೆ ಗ್ರಾಮಗಳಲ್ಲಿ ಸಂಚರಿಸುತ್ತಾರೆ. ಹೀಗೆ ಗ್ರಾಮದ ಎಲ್ಲಾ ಮನೆಗಳಿಗೆ ತೆರಳುವ ಇವರು ಮನೆಮಂದಿಗೆಲ್ಲಾ ಗಾಳಿಸೊಪ್ಪನ್ನು ನಿವಾಳಿಸಿ ದೃಷ್ಟಿ ತೆಗೆದು ತಮ್ಮ ಮೈಯಿಗೆ ಬಳಿದುಕೊಂಡ ಕಪ್ಪು ಬಣ್ಣದ ತಿಲಕವನ್ನು ಇಟ್ಟು ಆಶೀರ್ವಾದ ಮಾಡುವುದು ಸಂಪ್ರದಾಯ ಎನ್ನುತ್ತಾರೆ ಗ್ರಾಮದ ಪೊಕ್ಲೋಳಂಡ್ರ ಧನೋಜ್.

ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ತಿಗೆಯಲ್ಲಿ ಸಾಂಪ್ರದಾಯಿಕ ಆಟಿಕಳೆಂಜ ಆಚರಣೆಯಲ್ಲಿ ತೊಡಗಿರುವವರು
ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ತಿಗೆಯಲ್ಲಿ ಸಾಂಪ್ರದಾಯಿಕ ಆಟಿಕಳೆಂಜ ಆಚರಣೆಯಲ್ಲಿ ತೊಡಗಿರುವವರು
ಗಣೇಶ
ಗಣೇಶ
 ಪೊಕ್ಕೋಳಂಡ್ರ ಧನೋಜ್
 ಪೊಕ್ಕೋಳಂಡ್ರ ಧನೋಜ್
ತೋಟಂಬೈಲು ಅನಂತಕುಮಾರ್
ತೋಟಂಬೈಲು ಅನಂತಕುಮಾರ್

‘ಪುರಾತನ ಕಾಲದಿಂದ ಆಚರಣೆಯಲ್ಲಿರುವ ಪದ್ಧತಿ’

ನರಿಯಂದಡ ಗ್ರಾಮಸ್ಥ ತೋಟಂಬೈಲು ಅನಂತಕುಮಾರ್ ಪ್ರತಿಕ್ರಿಯಿಸಿ ‘ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿ ಇದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುತ್ತದೆ. ವರ್ಷಂಪ್ರತಿ ಕೊಡಗಿನ ಆಟಿ ಹದಿನೆಂಟರ ಆಚರಣೆ ಬಳಿಕ ಒಂದು ವಾರಗಳ ಕಾಲ ನಾಲ್ಕು ಗ್ರಾಮದ ಮನೆ ಮನೆಗೆ ತೆರಳುತ್ತಾರೆ. ಗ್ರಾಮಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮನೆಗಳಿಗೆ ಕಳೆಂಜ ಮೈಗೆಲ್ಲಾ ಕಪ್ಪು ಮಸಿಯನ್ನು ಬಳಿದುಕೊಂಡು ಮುಖವಾಡ ತೊಟ್ಟಂತಹ ವೇಷಧಾರಿ ತಂಡ ಗ್ರಾಮಗಳನ್ನು ಸುತ್ತುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT