ವಿರಾಜಪೇಟೆ: ಅನಿರೀಕ್ಷಿತ ಬದಲಾವಣೆಗಳಿಂದ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಪುರಸಭೆಯ ಚುಕ್ಕಾಣಿಯನ್ನು 15 ವರ್ಷಗಳ ನಂತರ ಕಾಂಗ್ರೆಸ್ ಮತ್ತೆ ಕೈವಶ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಈ ಹಿಂದೆ ಬಿಜೆಪಿಯಿಂದ ಅಧ್ಯಕ್ಷೆಯಾಗಿದ್ದ ಹಾಗೂ ಈ ಬಾರಿ ಪಕ್ಷೇತರರಾಗಿ ಆಯ್ಕೆಯಾಗಿದ್ದ ಮನೆಯಪಂಡ ದೇಚಮ್ಮ ಅವರು ಅಧ್ಯಕ್ಷೆಯಾಗಿ, ಉಪಾಧ್ಯಕ್ಷೆಯಾಗಿ ಕಾಂಗ್ರೆಸ್‌ನ ಫಸಿಹ ತಬಸುಂ ಆಯ್ಕೆಯಾಗುವ ಮೂಲಕ ಬಿಜೆಪಿ ಪಾಳೆಯದಲ್ಲಿ ನಿರಾಶೆ ಕವಿಯುವಂತೆ ಮಾಡುವಲ್ಲಿ ಸಫಲರಾದರು.
ಒಟ್ಟು 18 ಸ್ಥಾನದಲ್ಲಿ ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರರು 3 ಮಂದಿ ಈ ಮೊದಲು ಆಯ್ಕೆಯಾಗಿದ್ದರು. ಮೊದಲ ಅವಧಿಯಲ್ಲಿ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆದರೆ, ನಂತರದ ವರ್ಷಗಳಲ್ಲಿ ಜೆಡಿಎಸ್‌ನ ಒಬ್ಬ ಸದಸ್ಯ ಹಾಗೂ ಪಕ್ಷೇತರವಾಗಿ ಆಯ್ಕೆಯಾದ ಎಲ್ಲ ಮೂವರೂ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಹೀಗಾಗಿ, ಕಾಂಗ್ರೆಸ್ ಬಲ ದಿನ ಕಳೆದಂತೆ ವರ್ಧಿಸುತ್ತಲೇ ಸಾಗಿತು.
ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಿತಾ (ಜೂನಾ), ಆಶಾ ಸುಬ್ಬಯ್ಯ ಅವರಿಗೆ ಕೇವಲ 6 ಮತಗಳಷ್ಟೇ ಬಂದವು. ಬಿಜೆಪಿಯಿಂದ ಆಯ್ಕೆಯಾಗಿದ್ದ ಇಬ್ಬರು ಸದಸ್ಯರೂ ಈ ಬಾರಿ ಕಾಂಗ್ರೆಸ್ ಜೊತೆ ಕೈಜೋಡಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣರಾದರು.
ವಿಶೇಷವೆಂದರೆ, ಪಟ್ಟಣ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿಯ ಸುಶ್ಮಿತಾ ಅವರೂ ಕಾಂಗ್ರೆಸ್ ಪರ ಮತ ಚಲಾಯಿಸಿ ಅಚ್ಚರಿ ಮೂಡಿಸಿದರು. ಜೊತೆಗೆ, ಬಿಜೆಪಿ ಸದಸ್ಯೆ ಪೂರ್ಣಿಮ ಕೂಡ ಕಾಂಗ್ರೆಸ್ ಪರ ಮತ ಚಲಾಯಿಸಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ ಅವರಿಗೆ ಮತದಾನದ ಹಕ್ಕು ಇತ್ತಾದರೂ, ಅವರು ಮತದಾನದಿಂದ ದೂರ ಉಳಿದರು.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ಸದಸ್ಯರಾದ ಪೃಥ್ವಿನಾಥ್, ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ಮಹಮದ್ ರಾಫಿ, ಫಸಿಹ ತಬಸುಂ, ಆಗಸ್ಟಿನ್ ಬೆನ್ನಿ, ಪಕ್ಷೇತರರಾಗಿ ಆಯ್ಕೆಗೊಂಡು ಬಳಿಕ ಕಾಂಗ್ರೆಸ್ ಸೇರ್ಪಪಡೆಗೊಂಡ ಮನೆಯಪಂಡ ದೇಚಮ್ಮ, ರಜಿನಿಕಾಂತ್, ಜಲೀಲ್, ಜೆಡಿಎಸ್‌ನಿಂದ ಆಯ್ಕೆಗೊಂಡು ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡ ಮತ್ತೀನ್, ಬಿಜೆಪಿಯಿಂದ ಆಯ್ಕೆಯಾಗಿದ್ದ ಪೂರ್ಣಿಮಾ, ಹಾಗೂ ನಿಕಟಪೂರ್ವ ಅಧ್ಯಕ್ಷೆ ಸುಶ್ಮಿತಾ, ಮತದಾನದ ಅವಕಾಶ ಪಡೆದಿರುವ ನಾಮನಿರ್ದೇಶಕ ಸದಸ್ಯರಾದ ಅತೀಫ್ ಮನ್ನ, ಅನಿತಾ, ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.
ಬಿಜೆಪಿ ಅಭ್ಯರ್ಥಿಗಳ ಪರ ಸುನಿತಾ (ಜೂನಾ), ಆಶಾ ಸುಬ್ಬಯ್ಯ, ಯಶೋಧಾ, ಅನಿತಾ ಕುಮಾರ್, ಸುಭಾಶ್ ಮಹಾದೇವ್ ಹಾಗೂ ವಿನಾಂಕ್ ಕುಟ್ಟಪ್ಪ ಮತ ಚಲಾಯಿಸಿದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಹಾಗೂ ರಾಮಚಂದ್ರ ಅವರು ಕಾರ್ಯನಿರ್ವಹಿಸಿದರು. ಗೆಲುವಿನ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷ ಹಾಗೂ ಶಾಸಕರ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಚುನಾವಣಾ ಸ್ಥಳಕ್ಕೆ ಮಾಧ್ಯಮದವರಿಗೆ ಪ್ರವೇಶಾವಕಾಶ ನೀಡಲಿಲ್ಲ. ಪಟ್ಟಣ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷೆಯಾದ ಬಿಜೆಪಿಯ ಸುಶ್ಮಿತಾ ಅವರು ಪಟ್ಟಣ ಪಂಚಾಯಿತಿಯ ಕಾಂಗ್ರೆಸ್‌ನ ಸದಸ್ಯರು ಹಾಗೂ ಶಾಸಕರೊಂದಿಗೆ ಒಂದೇ ವಾಹನದಲ್ಲಿ ಚುನಾವಣಾ ಸ್ಥಳಕ್ಕೆ ಬಂದು ಬಿಜೆಪಿ ಸದಸ್ಯರಲ್ಲಿ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಪಾಲಿಗೆ ಇದು ಐತಿಹಾಸಿಕ ದಿನ. 15 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ. ಇದು ಬದಲಾವಣೆಯ ಸಂಕೇತಎ.ಎಸ್.ಪೊನ್ನಣ್ಣ ಶಾಸಕ.
ವಿಪ್ ಜಾರಿ ಮಾಡಲಾಗಿತ್ತು. ವಿಪ್ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದುಟಿ.ಪಿ.ಕೃಷ್ಣ ಬಿಜೆಪಿಯ ವಿರಾಜಪೇಟೆ ನಗರ ಘಟಕದ ಅಧ್ಯಕ್ಷ.
ಪಕ್ಷಾಂತರ ಕುರಿತು ಪ್ರಬಲವಾದ ಕಾನೂನು ಜಾರಿಯಾಗಬೇಕಿದೆ. ಇಲ್ಲವಾದಲ್ಲಿ ಪಕ್ಷಾಂತರದಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತದೆಮಂಜುನಾಥ್ ಜೆಡಿಎಸ್ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ.
ಪುರಸಭೆಯಲ್ಲಿ ಪಕ್ಷ ಬೇಧವಿಲ್ಲದೆ 18 ವಾರ್ಡಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆಮನೆಯಪಂಡ ದೇಚಮ್ಮ ಅಧ್ಯಕ್ಷೆ ವಿರಾಜಪೇಟೆ ಪುರಸಭೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.