ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಮಳೆ ನಿಂತ ಮೇಲೆ ಬಾರದಿರಲಿ ರೋಗ ಭೀತಿ

Published 31 ಜುಲೈ 2023, 6:32 IST
Last Updated 31 ಜುಲೈ 2023, 6:32 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೊಮ್ಮೆ ಮಳೆ ಅಬ್ಬರಿಸಿ ಶಾಂತವಾಗಿದೆ. ಸದ್ಯ, ಅಲ್ಲಲ್ಲಿ ಇನ್ನೂ ಮಳೆ ಸಣ್ಣದಾಗಿ ಜಿನುಗುತ್ತಿದೆ. ಇದರಿಂದ ನಿಂತಿರುವ ನೀರು ಎಲ್ಲೆಲ್ಲೂ ಕಂಡು ಬರುತ್ತಿದ್ದು, ಸಾಂಕ್ರಮಿಕ ರೋಗ ಭೀತಿ ಮೂಡಿಸಿದೆ.

ಕಳೆದೆರಡು ತಿಂಗಳ ಹಿಂದೆ ಒಮ್ಮೆ ಮಳೆ ಸುರಿದು ನಿಂತ ನಂತರ ಇದ್ದಕ್ಕಿದ್ದಂತೆ ಜಿಲ್ಲೆಯಲ್ಲಿ ಡೆಂಗಿ ಅಬ್ಬರಿಸಿತ್ತು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದವು. ಈಗಲೂ ಇದೇ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.

‘ಸದ್ಯ, ಜಿಲ್ಲೆಯಲ್ಲಿ ಈ ವರ್ಷ 7 ತಿಂಗಳಲ್ಲಿ 88 ಮಂದಿಗೆ ಡೆಂಗಿ ರೋಗ ತಗುಲಿದೆ. ಚಿಕುನ್‌ಗುನ್ಯಾ ಕೇವಲ ಒಬ್ಬರಲ್ಲಿ ಮಾತ್ರವೇ ಕಾಣಿಸಿಕೊಂಡಿದೆ. ಇನ್ನು ಮಲೇರಿಯಾಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗಭೀತಿ ಕಡಿಮೆ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ಕುಮಾರ್ ಹೇಳುತ್ತಾರೆ.

ತೀರಾ ಇತ್ತೀಚೆಗೆ ಕರಿಕೆಯಲ್ಲಿ ಶಂಕಿತ ಇಲಿಜ್ವರಕ್ಕೆ ತುತ್ತಾಗಿ ಯುವಕನೊಬ್ಬ ಮೃತಪಟ್ಟ ಘಟನೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅಲ್ಲಿಯೇ ಜ್ವರಪೀಡಿತನಾಗಿ ಇಲ್ಲಿಗೆ ಬಂದಿದ್ದರು. ಇವರಿಗೆ ಇಲಿ ಜ್ವರ ಇತ್ತು ಎಂಬುದು ಇನ್ನೂ ದೃಢಪಟ್ಟಿಲ್ಲ. ಸದ್ಯ, ಜಿಲ್ಲೆಯಲ್ಲಿ ಈ ವರ್ಷ 9 ಮಂದಿಯಲ್ಲಿ ಇಲಿ ಜ್ವರ ಪತ್ತೆಯಾಗಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ತಿಳಿಸಿದರು.

ಪರಿಸ್ಥಿತಿ ಹೀಗಿದ್ದರೂ, ಜಿಲ್ಲೆಯಲ್ಲಿ ಈಗಷ್ಟೇ ಧಾರಾಕಾರವಾಗಿ ಸುರಿದು ನಿಂತಿರುವ ಮಳೆಯಿಂದ ಬಯಲಿನಲ್ಲಿರುವ ಕಸ ರಾಶಿ ಕೊಳೆಯುತ್ತಿದೆ. ಅಲ್ಲಲ್ಲಿ ನೀರು ನಿಂತಿದೆ. ಸೊಳ್ಳೆ, ನೊಣಗಳು ಹೆಚ್ಚುತ್ತಿವೆ. ಇದರಿಂದ ಸಹಜವಾಗಿಯೇ ರೋಗಭೀತಿ ಮೂಡಿದೆ.

ಮಡಿಕೇರಿ ನಗರದ ಅಲ್ಲಲ್ಲಿ ನಿಂತ ನೀರು ಕಂಡು ಬಂದರೂ ಕೆಲವೆಡೆ ನಗರಸಭೆ ಸಿಬ್ಬಂದಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಸಾಂಕ್ರಮಿಕ ರೋಗ ಭೀತಿಯನ್ನು ಕೊಂಚವಾದರೂ ಕಡಿಮೆ ಮಾಡಿದ್ದಾರೆ.

ಗೋಣಿಕೊಪ್ಪಲು ಸಂತೆ ನಡೆಯುವ ಜಾಗದ ಸುತ್ತಮುತ್ತ ಪ್ರತಿ ಭಾನುವಾರವೂ ಕಸ ತುಂಬಿರುತ್ತದೆ. ಅದನ್ನು ಸ್ವಚ್ಛಗೊಳಿಸುವ ಕಾರ್ಯ ಸಮಪರ್ಕವಾಗಿ ನಡೆಯುತ್ತಿಲ್ಲ. ಪಕ್ಕದಲ್ಲೇ ಕೀರೆಹೊಳೆ ಇದ್ದು, ಅಲ್ಲಿಗೂ ಕಸ ಎಸೆಯುವುದರಿಂದ ಕಸವೆಲ್ಲ ಕೊಳೆಯುತ್ತದೆ. ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯವರೇ ಪಂಚಾಯಿತಿಯ ಹಳೇ ಕಟ್ಟಡದ ಮುಂದೆ ಸುರಿಯುತ್ತಾರೆ. ಇದರ ಪಕ್ಕದಲ್ಲೇ ಬಸ್‌ನಿಲ್ದಾಣ, ಆಸ್ಪತ್ರೆ, ಪ್ರಾಥಮಿಕ ಶಾಲೆ, ಪೊಲೀಸ್ ಠಾಣೆ ಇದ್ದು, ಕಸವೆಲ್ಲ ಕೊಳೆತು ನಾರುತ್ತಿದೆ. ಇದರಿಂದ ಸಾಂಕ್ರಮಿಕ ರೋಗಭೀತಿ ಮೂಡಿದೆ.

ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಕಸದ ರಾಶಿ ರಸ್ತೆ ಬದಿಗಳಲ್ಲಿ ವ್ಯಾಪಿಸಿದೆ. ಸಿದ್ದಾಪುರದ ಸೆಂಟ್‌ ಆ್ಯನ್ಸ್‌ ಶಾಲೆ ಮತ್ತು ಸರ್ಕಾರ ಮಲೆಯಾಳಂ ಶಾಲೆ ಕೂಗಳತೆ ದೂರದಲ್ಲಿ ಕಸದ ರಾಶಿ ಇದ್ದು, ಈಗ ಮಳೆ ಬಂದಿರುವುದರಿಂದ ಅವೆಲ್ಲವು ಕೊಳೆತು, ರೋಗಭೀತಿ ಮೂಡಿಸಿದೆ. ಸಿದ್ದಾಪುರ ಬಸ್‌ನಿಲ್ದಾಣ ಕರಡಿಗೋಡು ರಸ್ತೆ ಹಳೆ ಸಿದ್ದಾಪುರ ಭಾಗದಲ್ಲೂ ತ್ಯಾಜ್ಯದ ರಾಶಿ ವಿಲೇವಾರಿಯಾಗದೇ ಉಳಿದಿದೆ. ನೆಲ್ಲಿಹುದಿಕೇರಿಯ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೂಡ ಕಸ ಕೊಳೆಯುತ್ತಿದೆ.

ಶನಿವಾರಸಂತೆಯ ಆಸ್ಪತ್ರೆ ಪಕ್ಕದಲ್ಲೇ ಕಸದ ರಾಶಿ ಇದೆ. ಬಿದ್ದ ಮಳೆಯಿಂದ ಹಸಿ ಕಸವೆಲ್ಲ ಕೊಳೆಯುತ್ತಿದ್ದು, ಸೊಳ್ಳೆ, ನೊಣಗಳ ಆವಾಸಸ್ಥಾನವಾಗಿವೆ. ಮಸೀದಿ ಎದುರಿನ ಚರಂಡಿಯಲ್ಲಿ ಮಳೆ ನೀರು ನಿಂತಿದೆ. ಇದು ಸಾಂಕ್ರಮಿಕ ರೋಗ ಭೀತಿಯನ್ನು ಸೃಷ್ಟಿಸಿದೆ.

ಕುಶಾಲನಗರದಲ್ಲಿ ಮುಂಜಾಗ್ರತಾ ಕ್ರಮ : ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

‘ಸೊಳ್ಳೆಗಳ ನಿಯಂತ್ರಣಕ್ಕಾಗಿ ನಮ್ಮ ಸುತ್ತಲಿನ ಪರಿಸರ, ಮನೆಯ ಅಕ್ಕ-ಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು’ ಮೊದಲಾದವುಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಅರಿವು ಮೂಡಿಸಲಾಗುತ್ತಿದೆ.

ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಮೂಲಕ ಲಾರ್ವಾ (ಸೊಳ್ಳೆ ಮರಿಗಳು) ಸರ್ವೆ ನಡೆಯುತ್ತಿದೆ. ಇವುಗಳು ಕಂಡು ಬಂದಲ್ಲಿ ಆ ನೀರನ್ನು ಚೆಲ್ಲಲು ತಿಳಿಸಲಾಗುತ್ತಿದೆ. ಮಲೇರಿಯಾ, ಡೆಂಗಿ ಸೇರಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೂ, ರೋಗಿ ವಾಸವಿರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದಲ್ಲಿ ಉಲ್ಬಣವಾಗುವ ಮಲೇರಿಯಾ, ಕಾಲರಾ, ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿವೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಗ್ಲುಕೋಸ್‌ ಚುಚ್ಚುಮದ್ದು ಓಆರ್‌ಎಸ್‌ ಮತ್ತು ಮಾತ್ರೆಗಳ ದಾಸ್ತಾನು ಇಡಲಾಗಿದೆ.

ವಿರಾಜಪೇಟೆಯಲ್ಲಿ ಕಣ್ಣುಬೇನೆ: ವಿರಾಜಪೇಟೆ ವ್ಯಾಪ್ತಿಯಲ್ಲಿ ಕಳೆದ 8–10 ದಿನಗಳಿಂದ ‘ಮದ್ರಾಸ್‌ ಐ’ ಸೋಂಕು ಹೆಚ್ಚಾಗಿ ಹರಡುತ್ತಿದೆ. ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲು ಸೋಂಕು ಕಾಣಿಸಿಕೊಂಡಿದೆ. ನಿತ್ಯವೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಸೋಂಕಿತರು ಬರುತ್ತಿರುವುದು ಕಂಡು ಬಂದಿದೆ. ಉಳಿದಂತೆ ಈ ವ್ಯಾಪ್ತಿಯಲ್ಲಿ ಇತರೆ ಯಾವುದೇ ಸಾಂಕ್ರಮಿಕ ಕಾಯಿಲೆ ಅಧಿಕಗೊಂಡಿರುವುದು ಕಂಡು ಬಂದಿಲ್ಲ.

ಜನಾಭಿಪ್ರಾಯ

ಶನಿವಾರಸಂತೆಗೆ ಬರುವಾಗ ಸ್ವಾಗತ ದ್ವಾರದ ಸಮೀಪವೇ ಕಸ ವಿಲೇವಾರಿ ಜಾಗ ಇದೆ. ಹತ್ತಿರವೇ ಸಮುದಾಯದ ಆರೋಗ್ಯ ಕೇಂದ್ರ ಶಾಲಾ ಕಾಲೇಜುಗಳಿವೆ. ಮಳೆಗಾಲದಲ್ಲಿ ಸೂಕ್ತ ರೀತಿ ಕಸ ವಿಲೇವಾರಿ ಮಾಡದೆ ಕಸವು ಕೊಳೆತು ಸುತ್ತಮುತ್ತ ಸಾರ್ವಜನಿಕರ ಆರೋಗ್ಯದ ಹಾಳು ಮಾಡುತ್ತಿದೆ. ಇದರ ಬಗ್ಗೆ ಸೂಕ್ತ ಪಂಚಾಯತ್ ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಬೇಕು.- ಪಾರ್ವತಿ ಗುಂಡೂರಾವ್ ಬಡಾವಣೆ ಶನಿವಾರಸಂತೆ.

ಕಳೆದ 2-3 ತಿಂಗಳುಗಳಿಂದ ನಿರಂತರವಾಗಿ ಡೆಂಗಿ ಜ್ವರ ಆವರಿಸಿ ಮನೆಯಿಂದ ಹೊರ ಬರಲು ಭಯವಾಗುತ್ತಿತ್ತು. ಆದರೆ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗೆ ಬಂದು ಶೌಚಾಲಯ ಮನೆಯ ಸುತ್ತ ಸ್ವಚ್ಛಗೊಳಿಸಲು ಸೂಚನೆ ನೀಡಿದ್ದರಿಂದ ಹಾಗೂ ಗ್ರಾಮ ಪಂಚಾಯತಿ ವಾರಕ್ಕೆ ಎರಡು ಬಾರಿ ಸೊಳ್ಳೆ ನಿಯಂತ್ರಣ ಹೊಗೆ ಸಿಂಪಡಿಸಿದ್ದರಿಂದ ಬಡಾವಣೆಗಳಲ್ಲಿ ಡೆಂಗಿ ಸೇರಿದಂತೆ ಹಲವು ರೀತಿಯ ಜ್ವರಗಳು ಹತೋಟಿಗೆ ಬರುತ್ತಿವೆ – ಎಸ್.ಡಿ.ಮೇಘನಾ ರಾಮ ಬಡಾವಣೆ ಸುಂಟಿಕೊಪ್ಪ

ಪುರಸಭೆಯ ಎಲ್ಲಾ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮಳೆ ನೀರು ಪಟ್ಟಣದ ಹೊರಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ರಾಸಾಯನಿಕ ಹೊಗೆಯನ್ನು ಸಿಂಪಡಿಸುವುದು ಮತ್ತು ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ – ಉದಯಕುಮಾರ್ ಪುರಸಭೆ ಆರೋಗ್ಯ ನಿರೀಕ್ಷಕ.

ಆರೋಗ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ ಇತ್ತೀಚೆಗೆ ಸಾಂಕ್ರಾಮಿಕ ರೋಗ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಮಲೇರಿಯಾ ಡೆಂಗಿ ಸೇರಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೂ ರೋಗಿ ವಾಸವಿರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ – ಡಾ.ಬಿ.ಎಲ್.ಶ್ರೀನಿವಾಸ್ ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ

‘ಮದ್ರಾಸ್ ಐ’ ಸೋಂಕು ಗಾಳಿಯಲ್ಲಿ ಹರಡುವುದರಿಂದ ಸೋಂಕಿತರಿಂದ ಸಾಧ್ಯವಾದಷ್ಟು ಪ್ರತ್ಯೇಕವಾಗಿರಬೇಕು. ಸೋಂಕಿಗೆ ಒಳಗಾದ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕಿತರು ಮುಟ್ಟಿದ ವಸ್ತುಗಳಿಂದ ದೂರವಿರಬೇಕು. ವಿಶೇಷವಾಗಿ ಸೋಂಕಿತರು ಬಳಸಿದ ಐ ಡ್ರಾಪ್ ಗಳನ್ನು ಬಳಸಬಾರದು. ಸೋಂಕಿತರು ಕಚೇರಿ ಶಾಲಾ-ಕಾಲೇಜು ಸೇರಿದಂತೆ ಜನರಿರುವ ಪ್ರದೇಶಗಳಿಗೆ ಹೋಗದೆ ಗುಣಮುಖರಾಗುವವರೆಗೆ ಪ್ರತ್ಯೇಕವಾಗಿರುವುದರಿಂದ ಬೇಗನೆ ಸೋಂಕಿನಿಂದ‌ ಮುಕ್ತರಾಗಬಹುದು – ಡಾ.ಹೇಮ ಪ್ರಿಯ ವೈದ್ಯಾಧಿಕಾರಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ.

ಕೊಡಗು ಜಿಲ್ಲೆಯಲ್ಲಿ ಸದ್ಯ ಯಾವುದೇ ಸಾಂಕ್ರಮಿಕ ರೋಗಗಳು ಹರಡಿಲ್ಲ. ಕೆಲವು ತಿಂಗಳ ಹಿಂದೆ ಹೆಚ್ಚಿದ್ದ ಡೆಂಗಿ ಪ್ರಕರಣಗಳೂ ಈಗ ಇಳಿಕೆಯಾಗುತ್ತಿವೆ – ಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ.

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ, ರಘು ಹೆಬ್ಬಾಲೆ, ಎಂ.ಎನ್.ಹೇಮಂತ್, ಎಂ.ಎಸ್.ಸುನಿಲ್, ರೆಜಿತ್‌ಕುಮಾರ್ ಗುಹ್ಯ

ಮಡಿಕೇರಿಯ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಈಚೆಗೆ ಚರಂಡಿಗೆ ಮಣ್ಣು ಕುಸಿದಿತ್ತು. ಅದನ್ನು ತೆರವು ಮಾಡದೇ ಇರುವುದರಿಂದ ಚರಂಡಿ ನೀರು ನಿಂತಲ್ಲೆ ನಿಂತಿದ್ದು ಸೊಳ್ಳೆಗಳಿಗೆ ಆವಾಸಸ್ಥಾನವಾಗಿದೆ.
ಮಡಿಕೇರಿಯ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಈಚೆಗೆ ಚರಂಡಿಗೆ ಮಣ್ಣು ಕುಸಿದಿತ್ತು. ಅದನ್ನು ತೆರವು ಮಾಡದೇ ಇರುವುದರಿಂದ ಚರಂಡಿ ನೀರು ನಿಂತಲ್ಲೆ ನಿಂತಿದ್ದು ಸೊಳ್ಳೆಗಳಿಗೆ ಆವಾಸಸ್ಥಾನವಾಗಿದೆ.
ಮಡಿಕೇರಿಯ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ಕಸದರಾಶಿ ಇದ್ದು ಸುತ್ತಮುತ್ತಲ ನಿವಾಸಿಗಳಲ್ಲಿ ಸಾಂಕ್ರಮಿಕ ರೋಗದ ಭೀತಿ ಮೂಡಿಸಿದೆ.
ಮಡಿಕೇರಿಯ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ಕಸದರಾಶಿ ಇದ್ದು ಸುತ್ತಮುತ್ತಲ ನಿವಾಸಿಗಳಲ್ಲಿ ಸಾಂಕ್ರಮಿಕ ರೋಗದ ಭೀತಿ ಮೂಡಿಸಿದೆ.
ಕುಶಾಲನಗರದಲ್ಲಿ ಚರಂಡಿಗಳಲ್ಲಿ ನೀರು ನಿಂತಿರುವ ದೃಶ್ಯ ಈಚೆಗೆ ಕಂಡು ಬಂತು
ಕುಶಾಲನಗರದಲ್ಲಿ ಚರಂಡಿಗಳಲ್ಲಿ ನೀರು ನಿಂತಿರುವ ದೃಶ್ಯ ಈಚೆಗೆ ಕಂಡು ಬಂತು
ಶನಿವಾರಸಂತೆಯ ರಸ್ತೆಬದಿಯಲ್ಲಿ ಬಿದ್ದಿರುವ ಬಾಟಲಿಗಳು
ಶನಿವಾರಸಂತೆಯ ರಸ್ತೆಬದಿಯಲ್ಲಿ ಬಿದ್ದಿರುವ ಬಾಟಲಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT