ಶನಿವಾರ, ಡಿಸೆಂಬರ್ 5, 2020
25 °C
ಕೊಡಗು ಜಿಲ್ಲಾ ಬೆಳೆಗಾರರ ನಿಯೋಗದಿಂದ ಕೃಷಿ ಸಮಸ್ಯೆ ಪರಿಹಾರಕ್ಕೆ ಮನವಿ

ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ರಾಜ್ಯದ ಕಾಫಿ, ಕರಿಮೆಣಸು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ವಿವಿಧ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿ ಚರ್ಚಿಸಿ, ಸಮಸ್ಯೆ ಪರಿಹರಿಸಲು ಆಗ್ರಹಿಸಿದರು.

ಆಗಸ್ಟ್‌ನಲ್ಲಿ ನಡೆಯಲಿರುವ ಸಂಸತ್‍ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಂಸದ ಭರವಸೆ ನೀಡಿದರು.

ಈ ಮೊದಲೇ ಸಂಕಷ್ಟದಲ್ಲಿದ್ದ ಕಾಫಿ, ಕರಿಮೆಣಸು ಕೃಷಿ ಉದ್ಯಮವು ಇದೀಗ ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ನೋವು ತೋಡಿಕೊಂಡರು.

ತೀವ್ರ ಸಂಕಷ್ಟದಲ್ಲಿರುವ ಕಾಫಿ, ಕರಿಮೆಣಸು ಬೆಳೆಗಾರರ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಬೆಳೆಗಾರ ಒಕ್ಕೂಟಗಳ ಪ್ರಮುಖರು ಆಗ್ರಹಿಸಿದರು.

ಬೇಡಿಕೆಗಳು ಏನು?: ಬೆಳೆಗಾರರು ಮಾಡಿರುವ ಎಲ್ಲ ರೀತಿಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬೆಳೆಗಾರರ ಶೇ 3ರ ಬಡ್ಡಿ ಅನ್ವಯದ ಸಾಲದ ಪಾವತಿ ಅವಧಿಯನ್ನು ಮರು ನವೀಕರಣಗೊಳಿಸಿ, ಮತ್ತಷ್ಟು ವರ್ಷಗಳಿಗೆ ವಿಸ್ತರಿಸಬೇಕು. ಶೇ 3ರ ಬಡ್ಡಿಯಂತೆ ಬೆಳೆಗಾರರಿಗೆ ಮತ್ತೆ ಹೊಸದ್ದಾಗಿ ಸಾಲ ನೀಡುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ ಅಡಿ ಈಗಾಗಲೇ ಕರಿಮೆಣಸು, ಅಡಿಕೆಗೆ ಇರುವಂತೆ ಕಾಫಿ ಬೆಳೆಗಾರರನ್ನೂ ಕೂಡ ಕೇಂದ್ರ ಸರ್ಕಾರವು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಸಾಕಷ್ಟು ಮುತುವರ್ಜಿಯ ಮಧ್ಯೆಯೂ ಕರಿಮೆಣಸು ವಿದೇಶಗಳಿಂದ ಕಳ್ಳದಾರಿಯ ಮೂಲಕ ಭಾರತಕ್ಕೆ ಆಮದಾಗುತ್ತಿದೆ. ಇದರಿಂದ ಭಾರತದಲ್ಲಿಉತ್ಪಾದನೆಯಾದ ಕರಿಮೆಣಸಿಗೆ ಬೇಡಿಕೆ ಹಾಗೂ ಬೆಲೆ ಸೂಕ್ತ ರೀತಿಯಲ್ಲಿ ದೊರಕದಾಗಿದೆ. ಸರ್ಕಾರ ಮತ್ತಷ್ಟು ಕಾಳಜಿ ವಹಿಸಿ ಕರಿಮೆಣಸಿನ ನಿಯಮ ಬಾಹಿರ ದಂಧೆಯನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ಕಾಫಿ, ಕರಿಮೆಣಸು ಸಂಬಂಧಿತ ಸಮಸ್ಯೆಗಳ ಸಮಗ್ರ ಮಾಹಿತಿಯನ್ನು ನಿಯೋಗದ ಪ್ರಮುಖರಿಂದ ಪಡೆದ ಸಂಸದ ಪ್ರತಾಪ್ ಸಿಂಹ, ಲೋಕಸಭಾ ಅಧಿವೇಶನಕ್ಕೂ ಮುನ್ನ ಕೇಂದ್ರ ವಾಣಿಜ್ಯ ಸಚಿವರ ಬಳಿಗೆ ಬೆಳೆಗಾರರ ನಿಯೋಗ ಕರೆದೊಯ್ದು ಮತ್ತೊಮ್ಮೆ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಕೊಡಗು ಕಾಫಿ ಪ್ಲಾಂಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಪ್ಪ ಪೀಟು, ಸಂಚಾಲಕ ನಂದಾ ಬೆಳ್ಯಪ್ಪ, ಕೆ.ಕೆ.ವಿಶ್ವನಾಥ್, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್, ಖಜಾಂಚಿ ವಿಜಯ್ ನಂಜಪ್ಪ, ಗೋಣಿಕೊಪ್ಪಲು ಎಪಿಎಂಸಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲಾ ಅಶೋಕ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶರಿನ್ ಸುಬ್ಬಯ್ಯ ಇದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.