ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳಲ್ಲಿ ಮೊಬೈಲ್ ವ್ಯಸನ: ಇನ್‌ಸ್ಪೆಕ್ಟರ್ ಎಲ್.ವೈ.ರಾಜೇಶ್ ಆತಂಕ

ಎಎಲ್‌ಜಿ ಕ್ರೆಸೆಂಟ್ ಶಾಲೆಯ ವಾರ್ಷಿಕೋತ್ಸವದಲ್ಲಿ ಇನ್‌ಸ್ಪೆಕ್ಟರ್ ಎಲ್.ವೈ.ರಾಜೇಶ್ ಆತಂಕ
Published 15 ಜನವರಿ 2024, 16:14 IST
Last Updated 15 ಜನವರಿ 2024, 16:14 IST
ಅಕ್ಷರ ಗಾತ್ರ

ಮಡಿಕೇರಿ: ಮಕ್ಕಳಿಗೆ ಇಂದು ಮೊಬೈಲ್‌ ಎನ್ನುವುದು ಒಂದು ವ್ಯಸನವಾಗಿದೆ. ಅವರನ್ನು ಈ ವ್ಯಸನದಿಂದ ಮುಕ್ತಗೊಳಿಸುವತ್ತ ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಬೆಂಗಳೂರಿನ ಇನ್‌ಸ್ಪೆಕ್ಟರ್ ಎಲ್.ವೈ.ರಾಜೇಶ್ ಹೇಳಿದರು.

ಇಲ್ಲಿನ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ನಡೆದ ಶಾಲೆಯ 33ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಮನೆಯಲ್ಲಿ ನಾವು ಮಕ್ಕಳಿಗೆ ಏನನ್ನು ತೋರಿಸುತ್ತೇವೆಯೋ ಅವರು ಅದನ್ನೇ ಕಲಿಯುತ್ತಾರೆ. ಪೋಷಕರು ಯಾವಾಗಲೂ ತಮ್ಮ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದರೆ ಅವರು ಮೊಬೈಲ್‌ ಅನ್ನೇ ಕೇಳುತ್ತಾರೆ. ಪುಸ್ತಕ ಅಥವಾ ದಿನಪತ್ರಿಕೆ ಹಿಡಿದುಕೊಂಡು ಓದುತ್ತಿದ್ದರೆ ಅವರೂ ಅದನ್ನು ಓದುತ್ತಾರೆ. ಹಾಗಾಗಿ, ಮೊದಲು ಪೋಷಕರು ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್‌ನ್ನು ಮಾನ್ಯ ಮಾಡಬಾರದು. ಗೊತ್ತಿರದವರು ಕಳುಹಿಸಿದ ಲಿಂಕ್‌ ಅನ್ನು ತೆರೆಯಬಾರದು. ಒಂದು ಸಂದೇಶವನ್ನು ಮತ್ತೊಬ್ಬರಿಗೆ ಫಾವರ್ಡ್ ಮಾಡುವ ಮುನ್ನ ಅದು ಸತ್ಯವೋ, ಮಿಥ್ಯವೋ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತು ಹಲವು ಸಲಹೆಗಳನ್ನು ನೀಡಿದರು.

ರಾಜ್ಯ ಜಾನಪದ ಪ‍ರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ನಿತ್ಯವೂ ಹೊಸದೊಂದು ಶಬ್ದವನ್ನು, ಹೊಸದೊಂದು ವಿಚಾರವನ್ನು ಕಲಿಯುವಂತಹ ವಾತಾವರಣವನ್ನು ಮನೆಯಲ್ಲಿ ಸೃಷ್ಟಿ ಮಾಡಬೇಕು. ಆದಷ್ಟು ಮಕ್ಕಳಿಗೆ ಮೊಬೈಲ್ ಹಾಗೂ ಟಿ.ವಿ ಮೇಲಿನ ಆಸಕ್ತಿ ಕಡಿಮೆಯಾಗುವಂತೆ ಮಾಡಬೇಕು’ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಅವರು ಶಾಲೆಯಲ್ಲಿ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರಿರುವ ಕುರಿತು, ಮಕ್ಕಳ ನಡವಳಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮ ನಂತರ ಶಾಲೆಯ ವಿದ್ಯಾರ್ಥಿಗಳ 19 ತಂಡಗಳು ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಹಾಡು, ನೃತ್ಯಗಳು, ಮೂಕಾಭಿನಯ, ನಾಟಕ, ರೂಪಕ, ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆಗಳನ್ನು ತೊಟ್ಟು ರ‍್ಯಾಂಪ್ ವಾಕ್‌ ಮಾಡುವುದೂ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೂರಾರು ಪೋಷಕರು ಸೇರಿದಂತೆ ಸಾರ್ವಜನಿಕರು ಕಣ್ತುಂಬಿಕೊಂಡರು.

ವೀರಲೋಕ ಪ್ರಕಾಶನದ ಶ್ರೀನಿವಾಸ್, ಸಿಆರ್‌ಪಿ ಶೃತಿ, ಶಾಲೆಯ ಅಧ್ಯಕ್ಷ ನಿಜಾಮುದ್ದಿನ್ ಸಿದ್ದಿಕ್, ಉಪಾಧ್ಯಕ್ಷ ಅನೀಸ್, ಕಾರ್ಯದರ್ಶಿ ಜಿ.ಎಚ್.ಮೊಹಮ್ಮದ್ ಹನೀಫ್, ಸಹ ಕಾರ್ಯದರ್ಶಿ ಲಿಯಾಕತ್ ಆಲಿ, ಭಾತ್ಮಿದಾರ ಎಸ್.ಐ.ಮುನೀರ್ ಅಹಮ್ಮದ್, ಖಜಾಂಚಿ ಫಯಾಜ್ ಅಹಮದ್, ನಿರ್ದೇಶಕರಾದ ಘಯಾಸುದ್ದೀನ್, ಎಸ್.ಟಿ.ಇಸ್ಮಾಯಿಲ್, ಮೊಹಮ್ಮದ್ ನಾಸೀರ್, ಸಿ.ಎಂ.ಜಾಫರ್, ಉಮರ್ ಹಾಗೂ ಪ್ರಾಂಶುಪಾಲರಾದ ಜೋಯಿಸಿ ವಿನಯ ಇದ್ದರು.

ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ನಡೆದ 33ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ನಡೆದ 33ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ನಡೆದ 33ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ನಡೆದ 33ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು

ಸರ್ವಧರ್ಮ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸರ್ವಧರ್ಮ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಿಸಿದ್ದು ವಿಶೇಷ ಎನಿಸಿತು. ಕುರಾನ್ ಭಗವದ್ಗೀತೆ ಹಾಗೂ ಬೈಬಲ್‌ನ ವಾಕ್ಯಗಳನ್ನು ಮಕ್ಕಳು ಪಠಣ ಮಾಡಿ ಅವುಗಳ ಅರ್ಥವನ್ನು ವಿವರಿಸಿದರು.

ಪ್ರಿ ನರ್ಸರಿಗೆ ಉಚಿತ ಶಿಕ್ಷಣ ಘೋಷಣೆ:

ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಪ್ರಿ– ನರ್ಸರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಆಡಳಿತ ಮಂಡಳಿಯು ಕಾರ್ಯಕ್ರಮದಲ್ಲಿ ಘೋಷಿಸಿತು. ಈ ಕುರಿತು ಮಾತನಾಡಿದ ಆಡಳಿತ ಮಂಡಳಿಯ ಭಾತ್ಮಿದಾರ ಮುನೀರ್ ಅಹಮ್ಮದ್ ಹಾಗೂ ಕಾರ್ಯದರ್ಶಿ ಜಿ.ಎಚ್.ಮೊಹಮ್ಮದ್ ಹನೀಫ್ ಈ ಘೋಷಣೆಯನ್ನು ಮಾಡಿ ‘ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ ಕೇಂದ್ರೀಯ ಪಠ್ಯಕ್ರಮದ ಶಿಕ್ಷಣ ಕೈಗೆಟುಕಬೇಕು ಎಂಬುದು ಆಡಳಿತ ಮಂಡಳಿಯ ಉದ್ದೇಶ. ಇದಕ್ಕಾಗಿ ಇನ್ನುಳಿದ ತರಗತಿಗಳಿಗೂ ತೀರಾ ಕನಿಷ್ಠ ಶುಲ್ಕವನ್ನು ಪಡೆಯಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT