ಮಂಗಳವಾರ, ಆಗಸ್ಟ್ 3, 2021
22 °C
ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಗುಣಮುಖರಾದ ಪೊನ್ನಮ್ಮ: ಕುಟುಂಬದವರಿಂದ ಆರೋಪ

ದಾರಿಯಲ್ಲೇ ವೃದ್ಧೆ ಬಿಟ್ಟು ಹೋದ ಆಂಬುಲೆನ್ಸ್‌ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಗುಣಮುಖರಾದ ವೃದ್ಧೆಯೊಬ್ಬರನ್ನು ಮನೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ, ಅವರನ್ನು ಭಾನುವಾರ ಸಂಜೆ ಕಿರಗಂದೂರು ಗ್ರಾಮದ ದಾರಿ ಮಧ್ಯೆಯೇ ಬಿಟ್ಟು ಹೋಗಿದ್ದಾನೆ.

ಗ್ರಾಮದ ವಾಸಿ ಪೊನ್ನಮ್ಮ (60) ಮೇ 15 ರಂದು ತೀವ್ರ ಉಸಿರಾಟದ ತೊಂದರೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾದ್ದರಿಂದ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ಪೊನ್ನಮ್ಮ ಅವರ ಮನೆಗೆ ಮಾಹಿತಿ ನೀಡಿರಲಿಲ್ಲ. ಆಂಬುಲೆನ್ಸ್‌ನಲ್ಲಿ ಕರೆತಂದ ಚಾಲಕ ಸಂಜೆ 5 ಗಂಟೆಯ ಸುಮಾರಿಗೆ ಐಗೂರುಜಂಕ್ಷನ್‌ನಲ್ಲಿ ಬಿಟ್ಟು ತೆರಳಿದ್ದಾನೆ. ಅಲ್ಲಿಂದ ವೃದ್ಧೆಯ ಮನೆ 2 ಕಿ.ಮೀ ದೂರವಿದ್ದು, ಕಾಲ್ನಡಿಗೆಯಲ್ಲಿ
ತೆರಳಿದ್ದಾರೆ.

‘ಲಾಕ್‌ಡೌನ್ ಸಂದರ್ಭ ಆಗಿರುವುದರಿಂದ ಆ ರಸ್ತೆಯಲ್ಲಿ ಜನ ಸಂಚಾರ ಇರುವುದಿಲ್ಲ. ಸಂಜೆ ಸಮಯದಲ್ಲಿ ಕಾಡಾನೆಗಳ ಕಾಟವೂ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿತ್ರಾಣಗೊಂಡಿರುವ ಅವರಿಗೆ ಏನಾದರೂ ಸಮಸ್ಯೆಯಾಗಿದ್ದರೆ ಯಾರು ಗತಿ?. ಆಸ್ಪತ್ರೆಯಿಂದ ಬಿಡುಗಡೆಯಾದ ಮಾಹಿತಿಯನ್ನೂ ನೀಡಿಲ್ಲ’ ಎಂದು ಕುಟುಂಬ ಸದಸ್ಯ ವಿನು ಕುಶಾಲಪ್ಪ ದೂರಿದರು.

‘ರೋಗಿಗಳನ್ನು ಯಾವ ನಂಬಿಕೆ ಮೇಲೆ ಆಸ್ಪತ್ರೆಗೆ ದಾಖಲಿಸುವುದು. ತಪ್ಪು ಮಾಡಿದವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಜಿಲ್ಲಾಸ್ಪತ್ರೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು