ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಗುಡಿಸಲಿನಲ್ಲಿ ಅಂಗನವಾಡಿ ಕೇಂದ್ರ

ಶೀತ ಹಿಡಿದ ನೆಲದಲ್ಲಿ ಮಕ್ಕಳ ಆಟಪಾಠ
Last Updated 5 ಜುಲೈ 2018, 11:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪುಟಾಣಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು, ಶಿಕ್ಷಣ ಸಿಗಬೇಕು. ಮನೆಯಂತಹ ವಾತಾವರಣ ಸೃಷ್ಟಿಸಿ ಅವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಬಡಮಕ್ಕಳ ಲಾಲನೆಪಾಲನೆಗೆ ಪ್ರತಿ ಹಳ್ಳಿಗಳಲ್ಲಿಯೂ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ತೆರೆದಿದೆ.

ಆದರೆ ಇಂತಹ ಉದ್ದೇಶದಿಂದಲೇ ತೆರೆದ ಹಳ್ಳಿಗಟ್ಟು ದೇವಕಾಲೊನಿಯ ಅಂಗನವಾಡಿ ಕೇಂದ್ರದಲ್ಲಿ ಈಗ ಕನಿಷ್ಠ ಸೌಕರ್ಯವೂ ಇಲ್ಲದೆ ಬಡಮಕ್ಕಳ ಪಾಲಿಗೆ ರೋಗಗ್ರಸ್ಥ ಗೂಡಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರ ಕಳೆದ ಆರು ತಿಂಗಳಿನಿಂದ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ನಡೆಯುತ್ತಿದೆ.

ಸುತ್ತಲೂ ಪ್ಲಾಸ್ಟಿಕ್‌ನಿಂದ ಗುಡಿಸಲನ್ನು ನಿರ್ಮಿಸಲಾಗಿದೆ. ಚಾವಣಿಯೂ ಪ್ಲಾಸ್ಟಿಕ್‌ನದ್ದೇ. ನೆಲ ಮಣ್ಣಿನದ್ದಾಗಿದ್ದು, ಇದರಲ್ಲಿ ನೀರಿನ ಒರತೆ ಕಿತ್ತುಕೊಂಡಿದೆ. ಗುಡಿಸಲಿನ ಒಳಗೆ ಸದಾ ನೀರು ತುಂಬಿರುತ್ತದೆ. ಇದರ ಮೇಲೆ ಪ್ಲಾಸ್ಟಿಕ್ ಹೊದೆಸಿ ಮಕ್ಕಳನ್ನು ಕೂರಿಸಲಾಗಿದೆ.

ಅಂಗನವಾಡಿಗೆ ಹತ್ತು ಮಕ್ಕಳು ಬರುತ್ತಿದ್ದಾರೆ. ಇವರೆಲ್ಲರೂ ಯರವ, ಕುರುಬ ಜನಾಂಗದ ಮಕ್ಕಳು. ಗುಡಿಸಲಿನೊಳಗೇ ಮಕ್ಕಳಿಗೆ ಆಹಾರ ನೀಡಲಾಗುತ್ತದೆ. ಮಕ್ಕಳು ನೆಲದಲ್ಲಿ ಕೂರಲಾಗದೆ ಕುಕ್ಕರಗಾಲಿನಲ್ಲಿ ಕುಳಿತು ಆಹಾರ ಸೇವಿಸುತ್ತಾರೆ.

ಬಳಿಕ ಒಂದಷ್ಟು ನಿಂತುಕೊಂಡೇ ಆಟವಾಡಿ ಮನೆಗೆ ತೆರಳುತ್ತಾರೆ. ಶೀತ ಹಿಡಿದ ಮಣ್ಣಿನ ನೆಲದಲ್ಲಿ ಕೂರುವ ಮಕ್ಕಳು ಹಾಗೂ ಶಿಕ್ಷಕಿಗೂ ಶೀತದ ಬಾಧೆ ಕಾಡುತ್ತಿದೆ. ಹಿಂದೆ ಅಂಗನವಾಡಿಗೆ ಪ್ರತ್ಯೇಕ ಕಾಂಕ್ರೀಟ್ ಕಟ್ಟಡ ನಿರ್ಮಿಸಿಕೊಡಲಾಗಿತ್ತು. ಈ ಸ್ಥಳವನ್ನು ಈಗ ಪೊನ್ನಂಪೇಟೆ, ಅರುವತ್ತೊಕ್ಕಲು ಹಾಗೂ ಗೋಣಿಕೊಪ್ಪಲಿನ ತ್ಯಾಜ್ಯ ಸುರಿಯುವ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಇದರಿಂದ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಲಾಯಿತು. ಇದರಿಂದ ದೇವಕಾಲೊನಿಯ ಪರಿಶಿಷ್ಟ ಪಂಗಡದ ಬಡಮಕ್ಕಳು ಅಂಗನವಾಡಿ ಕೇಂದ್ರದಿಂದ ವಂಚಿತರಾಗಿ ಶೀತ ಹಿಡಿದ ನೆಲದಲ್ಲಿಯೇ ಆಟಪಾಠ ಕಲಿಯುವಂತಾಗಿದೆ.

ಈ ಬಗ್ಗೆ ಮಾತನಾಡಿದ ಶಿಕ್ಷಕಿ ಜಯಾ, ‘ಈ ಅವ್ಯವಸ್ಥೆಯಿಂದ, ಶೀತ ಹಿಡಿದ ನೆಲದಲ್ಲಿ ಕುಳಿತೇ ಮಕ್ಕಳು ಕಲಿಯುವಂತಾಗಿದೆ’ ಎಂದು ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT