ಬುಧವಾರ, ಜನವರಿ 27, 2021
16 °C
ಜಿಲ್ಲೆಯ ಗಡಿಯಲ್ಲೂ ಕಟ್ಟೆಚ್ಚರ: ಕರಿಕೆ, ಮಾಕುಟ್ಟ, ಕುಟ್ಟದಲ್ಲಿ ಬೀಡುಬಿಟ್ಟ ಸಿಬ್ಬಂದಿ

ಭಾಗಮಂಡಲದ ‘ಹಕ್ಕಿಕಂಡಿ’ಯಲ್ಲಿ ನಿಗಾ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೇರಳದ ಕೊಟ್ಟಯಾಂ ಹಾಗೂ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಆ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗಿನ ಗಡಿಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಭಾಗಮಂಡಲ– ಕರಿಕೆ ರಸ್ತೆಯ ‘ಹಕ್ಕಿಕಂಡಿ’ ಪಕ್ಷಿಗಳ ಆವಾಸ ಸ್ಥಾನ. ಅಲ್ಲಿಗೆ ವಲಸೆ ಹಕ್ಕಿಗಳೂ ಆಗಮಿಸುತ್ತವೆ. ಅಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಸದ್ಯಕ್ಕೆ ಕೊಡಗಿನಲ್ಲಿ ಹಕ್ಕಿಜ್ವರದ ಭೀತಿ ಇಲ್ಲ. ಆದರೂ, ಮುಂಜಾಗ್ರತೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಫಿ ತೋಟ ಹಾಗೂ ಅರಣ್ಯ ಪ್ರದೇಶದಿಂದ ಆವೃತ್ತವಾಗಿರುವ ಜಿಲ್ಲೆ ಕೊಡಗು. ಜಿಲ್ಲೆಯಲ್ಲಿ ಪಕ್ಷಿ ನೆಲಸುವ ಪ್ರದೇಶ, ಅರಣ್ಯ, ಕಾಫಿ ತೋಟ, ಜೌಗು ಪ್ರದೇಶ, ನದಿ ಪಾತ್ರಗಳಲ್ಲಿ ನಿಗಾ ವಹಿಸಲಾಗಿದೆ. ಅದರಲ್ಲೂ ಕೇರಳದ ಗಡಿಯಾದ ಮಾಕುಟ್ಟ, ಕುಟ್ಟ, ಕರಿಕೆಯಲ್ಲಿ ಹೈಅಲರ್ಟ್‌ ಇದೆ. ಶಿವಮೊಗ್ಗ ಹಾಗೂ ಮಂಗಳೂರಿನ ಕೆಲವು ಕಡೆ ಗುರುವಾರ ಹಕ್ಕಿಗಳು ಸಾವನ್ನಪ್ಪಿರುವುದು ವರದಿಯಾಗಿವೆ. ಇದರಿಂದ ಕೊಡಗು ಜಿಲ್ಲೆಯಲ್ಲಿ ಮತ್ತಚ್ಚು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಯಾವುದೇ ಸ್ಥಳದಲ್ಲಿ ಹಕ್ಕಿಗಳು ಅಥವಾ ಸಾಕಿದ ಕೋಳಿ ಅಸ್ವಾಭಾವಿಕವಾಗಿ ಸಾವನ್ನಪ್ಪಿದರೆ ತಕ್ಷಣವೇ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

ವಾಹನಕ್ಕೆ ಸ್ಯಾನಿಟೈಸ್‌: ಕೊಡಗು ಜಿಲ್ಲೆಯ ಕೋಳಿ ಫಾರಂಗಳು ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿ ಸಾಕಾಣಿಕೆ ಕೇಂದ್ರಗಳಿವೆ.

‘ರಾಜ್ಯ ಬೇರೆ ಬೇರೆ ಜಿಲ್ಲೆಗಳಿಂದ ಕುಕ್ಕುಟೋದ್ಯಮದ ಉತ್ಪನ್ನ ಹಾಗೂ ಕೋಳಿಯನ್ನು ಕೊಡಗಿನ ಮೂಲಕ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದೆ. ಕೇರಳಕ್ಕೆ ಹೋಗಿ ವಾಪಸ್‌ ಬರುವ ವಾಹನಗಳನ್ನು ಗಡಿಯಲ್ಲೇ ಸ್ಯಾನಿಟೈಸ್‌ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಕಡೆಯಿಂದ ಕೋಳಿ ಉತ್ಪನ್ನ ತರುವುದಕ್ಕೆ ನಿರ್ಬಂಧವಿದೆ.

ಹಕ್ಕಿಕಂಡಿಯಲ್ಲಿ ತೀವ್ರ ಕಟ್ಟೆಚ್ಚರ: ‘ಹಕ್ಕಿಕಂಡಿ’ಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಕೊಡಗಿನ ಇತರೆ ಭಾಗಕ್ಕೆ ವಲಸೆ ಹಕ್ಕಿಗಳು ಬರುವುದು ಕಡಿಮೆ. ಸದ್ಯಕ್ಕೆ ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಇಲ್ಲ. ಪಕ್ಷಿಗಳು ಹಾಗೂ ಕೋಳಿಯ ರಕ್ತ ಹಾಗೂ ಹಿಕ್ಕೆಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷಿಗಳ ಮಾದರಿಯನ್ನು ಪ್ರತಿತಿಂಗಳೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೆವು. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ನಿತ್ಯವೂ ಮಾದರಿ ಸಂಗ್ರಹಿಸಲಾಗುತ್ತಿದೆ’ ಎಂದು ಚಿದಾನಂದ ಹೇಳಿದರು.

ಕೋಳಿ ಮಾಂಸಕ್ಕೆ ಬೇಡಿಕೆ ಕುಸಿತ ಜಿಲ್ಲೆಯಲ್ಲಿ ಹೆಚ್ಚಿನ ಜನರು ಮಾಂಸಾಹಾರ ಸೇವಿಸುತ್ತಾರೆ. ಹಕ್ಕಿಜ್ವರದ ಭೀತಿಯಿಂದ ಕೋಳಿ ಮಾಂಸಕ್ಕೆ ದಿಢೀರ್‌ ಬೇಡಿಕೆ ಕುಸಿದಿದೆ. ಮಾಂಸಾಹಾರಿ ಹೋಟೆಲ್‌ಗಳೂ ಕೋಳಿ ಮಾಂಸದ ಖಾದ್ಯಕ್ಕೆ ಬೇಡಿಕೆ ಇಲ್ಲ ಎನ್ನುತ್ತಾರೆ ಹೋಟೆಲ್‌ ಮಾಲೀಕರು.

ಕುರಿ, ಹಂದಿ ಮಾಂಸ ಹಾಗೂ ಮೀನಿಗೆ ಬೇಡಿಕೆ ಬಂದಿದೆ. ಹಂದಿ ಮಾಂಸದ ದರ ಪ್ರತಿ ಕೆ.ಜಿ ₹ 220 ಇತ್ತು. ಆದರೆ, ಈಗ ₹ 240ಕ್ಕೆ ಏರಿಕೆಯಾಗಿದೆ. ಕೋಳಿ ಮಾಂಸದ ವ್ಯಾಪಾರಿಗಳಿಗೆ ನಷ್ಟದ ಆತಂಕ ಎದುರಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು