ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ ಬೋಪಯ್ಯ, ಅಪ್ಪಚ್ಚುರಂಜನ್

ಬಿಜೆಪಿ ಎಸ್‌ಟಿ ಮೋರ್ಚಾದಿಂದ ಮಡಿಕೇರಿಯಲ್ಲಿನ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
Published 29 ಜೂನ್ 2024, 6:35 IST
Last Updated 29 ಜೂನ್ 2024, 6:35 IST
ಅಕ್ಷರ ಗಾತ್ರ

ಮಡಿಕೇರಿ: ವಾಲ್ಮೀಕಿ ನಿಗಮ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಹಿರಿಯ ಮುಖಂಡರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಬಿಜೆಪಿಯ ಎಸ್‍ಟಿ ಮೋರ್ಚಾ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಕೆ.ಜಿ.ಬೋಪಯ್ಯ ಮಾತನಾಡಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ. ಸಾಲದು ಎಂಬಂತೆ, ಕೇವಲ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ತನಿಖೆ ನಡೆಸಲಾಗುತ್ತಿದೆ. ಇದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ’ ಎಂದು ಆರೋಪಿಸಿದರು.

ಅಧಿಕಾರಿಗಳೇ ತಮಗೆ ರಕ್ಷಣೆ ಬೇಕು ಎಂದು ಬಹಿರಂಗವಾಗಿ ಕೇಳುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಎಂತಹ ಪರಿಸ್ಥಿತಿ ಬಂದಿದೆ ಎಂಬುದು ಅರಿವಾಗುತ್ತದೆ ಎಂದರು.

ಎಂ.ಪಿ.ಅಪ್ಪಚ್ಚರಂಜನ್ ಮಾತನಾಡಿ, ‘ಇದೊಂದು ಬಡವರು ಮತ್ತು ದಲಿತರ ಹಣವನ್ನು ನುಂಗಿ ಹಾಕುವ ಹಗರಣ’ ಎಂದು ಆರೋಪಿಸಿದ ಅವರು, ‘ಈ ಕುರಿತು ಉನ್ನತಮಟ್ಟದ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ಬೆಲೆ ಏರಿಕೆ ಮಾಡಿ ಕೈಕಟ್ಟಿ ಕುಳಿತಿದೆ. ಜನಸಾಮಾನ್ಯರ ಬದುಕು ದುರ್ಬರವಾಗುತ್ತಿದೆ ಎಂದು ದೂರಿದರು.

ಬಿಜೆಪಿ ಎಸ್‍ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಮಾತನಾಡಿ, ‘ಈ ಹಗರಣದಲ್ಲಿ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ನೇರ ಹೊಣೆಗಾರನನ್ನಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ರಾಜ್ಯ ಸರ್ಕಾರವನ್ನೇ ವಜಾಗೊಳಿಸಬೇಕು’ ಎಂದು ಕಿಡಿಕಾರಿದರು.

ನಂತರ, ಪರಮೇಶ್ವರ ಅವರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ವಿರಾಜಪೇಟೆ ಅಧ್ಯಕ್ಷ ಸುವಿನ್ ಗಣಪತಿ, ಮಡಿಕೇರಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಮುಖಂಡರಾದ ಯಮುನಾ ಚಂಗಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ನಗರಸಭಾ ಸದಸ್ಯರು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT