ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಕನ್ನಡಕ್ಕೆ ಬೂಕರ್ ಪ್ರಶಸ್ತಿ: ಸಾಧಕಿಯರ ತವರಲ್ಲಿ ಸಂತಸದ ಹೊನಲು

ಅನುವಾದಕಿ ದೀಪಾ ಭಾಸ್ತಿ ಕೊಡಗಿನ ಹೆಮ್ಮೆಯ ಪುತ್ರಿ
Published : 21 ಮೇ 2025, 20:43 IST
Last Updated : 21 ಮೇ 2025, 20:43 IST
ಫಾಲೋ ಮಾಡಿ
Comments
ದೀಪಾ ಭಾಸ್ತಿ ಅವರ ತಾಯಿ ಸುಧಾಮಣಿ ಅವರು ಪುತ್ರಿ ಅನುವಾದ ಮಾಡಿದ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದ್ದಕ್ಕೆ ಅಳಿಯ ಚೆಟ್ಟಿರ ನಾಣಯ್ಯ ಅವರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು
ದೀಪಾ ಭಾಸ್ತಿ ಅವರ ತಾಯಿ ಸುಧಾಮಣಿ ಅವರು ಪುತ್ರಿ ಅನುವಾದ ಮಾಡಿದ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದ್ದಕ್ಕೆ ಅಳಿಯ ಚೆಟ್ಟಿರ ನಾಣಯ್ಯ ಅವರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು
ಕನ್ನಡ ಲೇಖಕಿಯರಿಗೆ ಹೆಮ್ಮೆ
ಬಾನು ಮುಷ್ತಾಕ್ ಅವರು ಮೊದಲಿನಿಂದಲೂ ಪ್ರತಿರೋಧದ ಮನೋಭಾವ ಹೊಂದಿದವರು. 1970ರಲ್ಲಿ ಸ್ತ್ರೀವಾದಿ ಸಾಹಿತ್ಯ ಶುರುವಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದಂತಹ ಲೇಖಕಿ. ಅವರ ಧಾರ್ಮಿಕ ಮಿತಿಗಳ ಮಧ್ಯೆಯೂ ತಮಗೆ ಅನಿಸಿದ್ದನ್ನು ಬಹಳ ದಿಟ್ಟವಾಗಿ ತಮ್ಮ ಬರಹಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರ ಬಗ್ಗೆ ನಮಗೆ ಯಾವಾಗಲೂ ಬಹಳ ಅಭಿಮಾನ ಇದೆ. ಅವರು ಇನ್ನೂ ಹೆಚ್ಚಿನ ಕೀರ್ತಿಗೆ, ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಅವರ ಸಾಧನೆ ಇಡೀ ಕನ್ನಡದ ಲೇಖಕಿಯರಿಗೆ ಹೆಮ್ಮೆ ಮೂಡಿಸಿದೆ. ಕನ್ನಡದಲ್ಲಿ ಇನ್ನೂ ಗುರುತಿಸಲಾರದ, ಜಾಗತಿಕ ಮನ್ನಣೆಗೆ ಅರ್ಹವಾದಂತಹ ಹಲವು ಕೃತಿಗಳಿವೆ. ಸರ್ಕಾರ, ಕರ್ನಾಟಕ ಅನುವಾದ ಅಕಾಡೆಮಿಗಳು ಯೋಗ್ಯ ಕೃತಿಗಳನ್ನು ಆಯ್ಕೆ ಮಾಡಿ ಕನ್ನಡದ ಕೃತಿಗಳನ್ನು ಜಗತ್ತಿನ ಬೇರೆ ಭಾಷೆಗಳಿಗೆ ಅನುವಾದ ಮಾಡಿದಾಗ ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಬಗ್ಗೆ ಜಗತ್ತಿಗೆ ಗೊತ್ತಾಗುತ್ತದೆ. ಇದಕ್ಕಿಂತಲೂ ಹೆಚ್ಚಿನ ಮಹತ್ವದ ಕೃತಿಗಳು ಕನ್ನಡದಲ್ಲಿವೆ. ಅವುಗಳನ್ನು ಬೆಳಕಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕು.
– ವೀಣಾ ಶಾಂತೇಶ್ವರ, ಲೇಖಕಿ, ಧಾರವಾಡ
ಕನ್ನಡದ ಜತೆಗೆ ಮಹಿಳೆಗೆ ಗೌರವ
ಕನ್ನಡಕ್ಕೆ ಈ ಪ್ರಶಸ್ತಿ ಪ್ರಥಮ ಬಾರಿಗೆ ಬಂದಿದೆ ಎಂಬುದು ಒಂದಾದರೆ, ಮಹಿಳೆಗೆ ದೊರೆತಿದೆ ಎನ್ನುವುದು ಸಂತೋಷಕ್ಕೆ ಇನ್ನೊಂದು ಕಾರಣವಾಗಿದೆ. ಬಹಳಷ್ಟು ವರ್ಷಗಳ ಹಿಂದೆ ಬರೆದ ಕಥೆಗಳಿಗೆ ಈಗ ಜಾಗತಿಕ ಪುರಸ್ಕಾರ ದೊರೆತಿದೆ. ಇದು ಸಂತೋಷದ ಜತೆಗೆ ಹೆಮ್ಮೆಯ ಸಂಗತಿ. ಬಾನು ಮುಷ್ತಾಕ್ ಅವರು ಮಹಿಳೆ ಹಾಗೂ ತಾವು ಕಂಡ ಮುಸ್ಲಿಂ ಲೋಕವನ್ನು ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಅವರು ವಕೀಲೆಯೂ ಆಗಿದ್ದರಿಂದ ನ್ಯಾಯದ ಸಂಗತಿಗಳನ್ನು ಕೂಡ ಕೃತಿಯಲ್ಲಿ ಪ್ರಜ್ಞಾಪೂರ್ವಕ ತಂದಿದ್ದಾರೆ. ಆದ್ದರಿಂದ ಈ ಕೃತಿ ಮುಖ್ಯವಾಗುತ್ತದೆ. ಮಹಿಳೆಯರು ಬರಹವನ್ನು ತಮ್ಮ ಬೌದ್ಧಿಕ ಸಾಮರ್ಥ್ಯದ ಅಭಿವ್ಯಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಲೇಖಕಿಯರಿಗೆ ಕಥನ ಸಾಹಿತ್ಯವು ಅತ್ಯಂತ ಸಹಜವಾದದ್ದಾಗಿದೆ. ಆದರೆ, ಬೇರೆ ಬೇರೆ ಕಾರಣದಿಂದ ಅದು ಮಸುಕಾಗಿದೆ. ಆ ಅಭಿವ್ಯಕ್ತಿಯನ್ನು ಮುನ್ನೆಲೆಗೆ ತರುವಲ್ಲಿ ಲೇಖಕಿಯರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬಾನು ಮುಷ್ತಾಕ್ ಕೆಲಸ ಗಮನಾರ್ಹವಾಗಿದೆ. ಕನ್ನಡದ ಕೃತಿಯೊಂದಕ್ಕೆ ಈ ರೀತಿ ಮನ್ನಣೆ ಸಿಕ್ಕಾಗ ಕನ್ನಡದಲ್ಲಿ ಏನೋ ಮಹತ್ತರ ಕಾರ್ಯ ನಡೆಯುತ್ತಿದೆ ಎನ್ನುವುದು ಹೊರ ಜಗತ್ತಿಗೆ ತಿಳಿಯುತ್ತದೆ. ಕನ್ನಡದ ಸಾಹಿತ್ಯ ಮುನ್ನೆಲೆಗೆ ಬರಲು ಇದು ಸಹಕಾರಿ.‌
– ಎಚ್‌.ಎಸ್. ಶ್ರೀಮತಿ, ಲೇಖಕಿ
ಕನ್ನಡದ ಗುಣಮಟ್ಟ ಸಾಬೀತು
ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ. ಲೇಖಕಿಯ ಪುಸ್ತಕಕ್ಕೆ ಸಿಕ್ಕಿದ್ದು ಖುಷಿಯನ್ನು ಹೆಚ್ಚಿಸಿದೆ. ಬಾನು ಮುಷ್ತಾಕ್ ಅವರು ಕನ್ನಡದ ಮಹಿಳಾ ಬರಹಗಾರರಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಗುಣಮಟ್ಟ ಕನ್ನಡ ಸಾಹಿತ್ಯಕ್ಕಿದೆ ಎಂಬುದು ಈ ಪ್ರಶಸ್ತಿಯ ಮೂಲಕ ಸಾಬೀತಾಗಿದೆ. ಮಾನವ ಸಮಾಜದ ಅಸ್ವಸ್ಥತೆಯನ್ನು, ಅದು ಸೃಷ್ಟಿಸುವ ಸಂಕಟವನ್ನು ನೋವನ್ನು, ವಿಶೇಷತಃ ಹೆಣ್ಣಿನ ಬದುಕಿನ ದಾರುಣತೆಯನ್ನು ಬಾನು ಅವರು ಜಗತ್ತಿಗೆ ನಿರೂಪಿಸಿದ್ದಾರೆ. ಅನುವಾದದ ಮೂಲಕ ಅವರನ್ನು ಸರಿಯಾಗಿ ತಲುಪಿಸಿದ ದೀಪಾ ಬಸ್ತಿಯವರಿಗೂ, ನಮ್ಮ ಪ್ರೀತಿಯ ಲೇಖಕಿ ಬಾನು ಅವರಿಗೂ ಸಂಭ್ರಮದಿಂದ ಅಭಿನಂದಿಸುತಿದ್ದೇನೆ
– ವೈದೇಹಿ, ಲೇಖಕಿ
ಕನ್ನಡದ ವಿವೇಕಕ್ಕೆ ಸಂದ ಗೌರವ
1990ರಲ್ಲಿ ನಾವು ಹಾಸನದಲ್ಲಿ ಇದ್ದಾಗ ಬಾನು ಮುಷ್ತಾಕ್‌ ಅವರ ‘ಹೆಜ್ಜೆ ಮೂಡಿದ ಹಾದಿ’ ಪ್ರಥಮ ಕಥಾ ಸಂಕಲನವನ್ನು ಡಿ.ಎಸ್.ನಾಗಭೂಷಣ ಮತ್ತವರ ಗೆಳೆಯರು ತಮ್ಮ ಸಾಹಿತ್ಯ– ಸಂವಾದ ಪ್ರಕಾಶನದ ಮೂಲಕ ಪ್ರಕಟಿಸಿದ್ದರು. ಗೃಹಿಣಿ, ಪತ್ರಕರ್ತೆ, ನಗರಸಭೆ ಸದಸ್ಯೆ, ವಕೀಲೆ, ಹೋರಾಟಗಾರ್ತಿ, ಸಾಹಿತಿ, ಮಹಾತಾಯಿ ಹೀಗೆ ಹಲವು ಅವತಾರಗಳಲ್ಲಿ ನಾನವರನ್ನು ಕಂಡಿರುವೆ. ಈ ಕ್ಷೇತ್ರಗಳಲ್ಲಿನ ಒಳನೋಟಗಳು ಅವರ ಬರವಣಿಗೆಗೆ ಕಸುವು ತುಂಬಿವೆ ಅಂದುಕೊಂಡಿರುವೆ. ತಮ್ಮ ಸಮುದಾಯದ ಪಾತ್ರಗಳನ್ನು, ಪರ-ವಿರೋಧ ಧೋರಣೆ ತಳೆಯದೆ ನಿರ್ಮಮಕಾರದಿಂದ ಮನುಷ್ಯರನ್ನಾಗಿ ಮಾತ್ರ ನೋಡಿ ಚಿತ್ರಿಸಿರುವುದನ್ನು ನೋಡಬಹುದು. ಯಾವುದೇ ರೀತಿಯ ಸಾಹಿತ್ಯಕ ರಾಜಕೀಯ ಮಾಡದ, ತಮ್ಮ ಪಾಡಿಗೆ ತಾವಿದ್ದು ಬರೆದ ಘನವಾದ ವ್ಯಕ್ತಿತ್ವ ಅವರದ್ದು. ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವುದು ಲೇಖಕಿಯರ ವಿಶ್ವಾಸ ಹೆಚ್ಚಿಸಿದೆ. ಇದು ಮಹಿಳಾ ಸಾಹಿತ್ಯ ಲೋಕಕ್ಕೆ, ಕನ್ನಡದ ವಿವೇಕಕ್ಕೆ ಸಂದ ಗೌರವ.
– ಸವಿತಾ ನಾಗಭೂಷಣ, ಕವಯಿತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT