ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ | ಮಳೆಗೆ ರಸ್ತೆ ಕುಸಿದು ಹಾನಿ: ಬಸ್, ಲಾರಿ ಸಂಚಾರ ಮತ್ತೆ ಆರಂಭ

Last Updated 13 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ವಿರಾಜಪೇಟೆ : ನಾಲ್ಕು ತಿಂಗಳ ಬಳಿಕ ಕರ್ನಾಟಕ-ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ಬಸ್ ಸಂಚಾರ ಆರಂಭಗೊಂಡಿರುವುದು ಜಿಲ್ಲೆಯ ಜನತೆಗೆ ಸಂತಸ ಮೂಡಿಸಿದೆ.

ಆಗಲ್ಲಿ ಸುರಿದ ಭಾರಿ ಮಳೆಗೆ ಉಂಟಾದ ಭೂಕುಸಿತದಿಂದ ಕೊಣನೂರು-ಮಾಕುಟ್ಟ ಅಂತರರಾಜ್ಯ ಹೆದ್ದಾರಿ ತೀವ್ರ ರೀತಿಯಲ್ಲಿ ಹಾನಿಗೊಳಗಾಗಿತ್ತು. ವಿಶೇಷವಾಗಿ ಮೂರು ಕಡೆಗಳಲ್ಲಿ ಹೆದ್ದಾರಿಯ ಬಹುತೇಕ ಭಾಗ ಕುಸಿದು ಹೋಗಿತ್ತು. ಫಲವಾಗಿ ಹೆದ್ದಾರಿಯಲ್ಲಿ ತಕ್ಷಣದಿಂದಲೇ ಎಲ್ಲ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಕೂಡಲೇ ಸರ್ಕಾರ ಹೆದ್ದಾರಿ ದುರಸ್ಥಿ ಕಾಮಗಾರಿಯನ್ನು ಆರಂಭಿಸಿತಾದರೂ 2 ತಿಂಗಳ ಬಳಿಕ ಅಂದರೆ ಅಕ್ಟೊಬರ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಆದರೆ ಬಸ್ ಸಂಚಾರ ಆರಂಭಗೊಳ್ಳದ್ದರಿಂದ ಎರಡೂ ರಾಜ್ಯದ ಜನತೆಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಮಿನಿ ಬಸ್‌ಗಳನ್ನು ಮಾಕುಟ್ಟದವರೆಗೆ ಸಂಚರಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಅನುವು ಮಾಡಿಕೊಟ್ಟಿತು.

ಆದರೆ ಇದೀಗ ಸಾರ್ವಜನಿಕರ ಬೇಡಿಕೆ ಹಾಗೂ ರಸ್ತೆ ದುರಸ್ಥಿಯ ತಾತ್ಕಾಲಿಕ ಕಾಮಗಾರಿಗಳು ಬಹುತೇಕ ಪೂರ್ಣಗೊಂಡ ಹಿನ್ನಲೆಯಲ್ಲಿ ಬಸ್ ಹಾಗೂ ಲಾರಿ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಇದು ಜಿಲ್ಲೆಯ ವರ್ತಕರು ಸೇರಿದಂತೆ ಸಾರ್ವಜನಿಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪುನಾರವರ್ತನೆ: ಕಳೆದ ಎರಡು ವರ್ಷಗಳೂ ಕೂಡ ಭಾರಿ ಮಳೆಗೆ ಈ ಹೆದ್ದಾರಿಯು ಹಾನಿಗೊಳಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. 2018 ರಲ್ಲಿ ಸುರಿದ ಭಾರಿ ಮಳೆಗೆ ಹೆದ್ದಾರಿಯ ಉದ್ದಕ್ಕೂ ಹಲವೆಡೆ ರಸ್ತೆ ಕುಸಿತಗೊಂಡು ತಿಂಗಳುಗಳ ಕಾಲ ಹೆದ್ದಾರಿ ಬಂದ್ ಆಗಿತ್ತು. ಬಳಿ ಲಕ್ಷಾಂತರ ರೂ ವೆಚ್ಚ ಮಾಡಿ ಕಾಮಗಾರಿ ನಡೆಸಿ ಕೆಲವೆಡೆ ತಡೆಗೋಡೆ ನಿರ್ಮಿಸಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. 2019 ರಲ್ಲಿ ಮತ್ತೆ ಇದೇ ಪುನರಾವರ್ತನೆಗೊಂಡು ಜನತೆ ಸಂಕಷ್ಟ ಅನುಭವಿಸುವಂತಾಯಿತು.

ಹೆದ್ದಾರಿ ಬಂದ್‌ನಿಂದ ಸಮಸ್ಯೆ: ಗಡಿ ಜಿಲ್ಲೆಯಾದ ಕೊಡಗು ನೆರೆಯ ಕೇರಳದೊಂದಿಗೆ ವ್ಯಾಪಾರ ವಹಿವಾಟು ಸೇರಿದಂತೆ ಹಲವು ರೀತಿಯಲ್ಲಿ ಅವಿನಾಭಾವ ಸಂಬಂಧ ಹೊಂದಿದೆ. ಕೇರಳದಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳು ಸೇರಿದಂತೆ ಹಲವು ವಸ್ತುಗಳು ಇಲ್ಲಿ ಆಮದಾದರೆ, ಜಿಲ್ಲೆಯ ಮೂಲಕ ತರಕಾರಿ ಸೇರಿದಂತೆ ಆಹಾರ ಧಾನ್ಯಗಳು ಕೇರಳಕ್ಕೆ ರಫ್ತಾಗುತ್ತವೆ.

ಕೇರಳದ ಶಬರಿಮಲೆ ಸೇರಿ ಹಲವು ಧಾರ್ಮಿಕ ಕ್ಷೇತ್ರಗಳೊಂದಿಗೆ ಜಿಲ್ಲೆಜನತೆ ಸಂಬಂಧ ಇರಿಸಿಕೊಂಡಿದ್ದಾರೆ. ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳುವ ಅವಧಿಯಾಗಿರುವುದರಿಂದ ಬಸ್ ಸಂಚಾರ ಆರಂಭಗೊಂಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಇದೀಗ ಬಸ್ ಹಾಗೂ ಲಾರಿ ಸಂಚಾರಕ್ಕೆ ಅನುಮತಿ ನೀಡಿದ್ದರೂ ಹೆದ್ದಾರಿ ದುರಸ್ಥಿ ಕಾಮಗಾರಿ ಇನ್ನು ಸಂಪೂರ್ಣಗೊಂಡಿಲ್ಲ. ಮಳೆಗೆ ಕೊಣನೂರು -ಮಾಕುಟ್ಟ ಹೆದ್ದಾರಿಯು ಕುಸಿತಗೊಳ್ಳುವ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರವನ್ನು ಕಂಡುಕೊಂಡು ಕಾಮಗಾರಿಯನ್ನು ನಡೆಸುವುದು ಅಗತ್ಯ. ಇಲ್ಲವಾದರೆ ಮುಂದಿನ ಪ್ರತಿ ವರ್ಷವು ಇದೇ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT