ಮಂಗಳವಾರ, ಸೆಪ್ಟೆಂಬರ್ 21, 2021
21 °C
‘ನಯಾಗರ ಫಾಲ್ಸ್’ ಎಂದೇ ಪ್ರಸಿದ್ಧಿ; ಅರ್ಧ ಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಧಾರೆ

ಕಣ್ಮನ ಸೆಳೆಯುವ ಚಿಕ್ಲಿ ಹೊಳೆ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಅತೀ ಚಿಕ್ಕದಾದ ರಂಗಸಮುದ್ರ ಬಳಿಯ ‘ನಯಾ‌ಗರ ಫಾಲ್ಸ್’ ಎಂದೇ ಪ್ರಖ್ಯಾತಿ ಆಗಿರುವ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯ ಕಣ್ಮನಸೆಳೆಯುತ್ತಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಲಿಹೊಳೆ ಜಲಾಶಯ ಮೈದುಂಬಿದೆ. ಅಣೆಕಟ್ಟೆ ತುಂಬಿರುವುದರಿಂದ ಹೆಚ್ಚುವರಿ ನೀರು ಜಲಾಶಯದ ಅರ್ಧ ಚಂದ್ರಾಕೃತಿಯ ತಡೆಗೋಡೆಯ ಮೇಲಿಂದ ಹಾಲುನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ.

ಯಾವುದೇ ಕ್ರಸ್ಟ್‌ಗೇಟ್‌ಗಳನ್ನು ಹೊಂದಿರದೆ ಕೇವಲ ಬಾವಿಯಾಕಾರದ ಮಾದರಿಯಲ್ಲಿ ಏಕೈಕ ದೊಡ್ಡ ತೂಬು ನಿರ್ಮಿಸಲಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದಂತೆ ನೀರು ತನ್ನಿಂದಾಗಿ ಅಣೆಕಟ್ಟೆಯ ಹೊರಗೆ ಹರಿಯುತ್ತದೆ. ಗರಿಷ್ಠ 72.6 ಮೀಟರ್ ಎತ್ತರ ಹೊಂದಿರುವ ಅಣೆಕಟ್ಟೆಯಲ್ಲಿ 0.18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಧಾರಾಕಾರವಾಗಿ ಬಿದ್ದ ಮಳೆಯಿಂದ ಜಲಾಶಯ ಇದೀಗ ಭರ್ತಿಯಾಗಿದೆ.

ಮೀನುಕೊಲ್ಲಿ ಮೀಸಲು ಅರಣ್ಯದ ಮಧ್ಯೆ ಸದಾ ಹಸಿರಿನಿಂದ ಕಂಗೊಳಿಸುವ ಸುಂದರ ಪರಿಸರದಲ್ಲಿರುವ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಜಲಾಶಯದ ಹಿನ್ನೀರು ಪ್ರದೇಶವು ಒಂದೆಡೆ ದಟ್ಟ ಕಾಡು ಹಾಗೂ ಮತ್ತೊಂದೆಡೆ ಕಾಫಿ ತೋಟಗಳ ಸಾಲಿನಿಂದ ಆವೃತ್ತಗೊಂಡಿದೆ.

ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ: ಕೊಡಗಿನಲ್ಲಿ ಪ್ರವಾಸಿಗರ ವೀಕ್ಷಣೆಗೆ ಹತ್ತಾರು ತಾಣಗಳಿದ್ದು, ಅವುಗಳ ಪೈಕಿ ಚಿಕ್ಲಿಹೊಳೆ ಜಲಾಶಯವೂ ಒಂದಾಗಿದೆ. ಈ ಜಲಾಶಯ ಇತರೆ ಜಲಾಶಯಗಳೊಂದಿಗೆ ಹೋಲಿಕೆ ಮಾಡುವಷ್ಟು ದೊಡ್ಡದಾಗಿಲ್ಲ ಆದರೆ, ಈ ಜಲಾಶಯವನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

‘ಜನಪ್ರತಿನಿಧಿಗಳು, ಅಧಿಕಾರಿಗಳ ಆಸಕ್ತಿ ಹಾಗೂ ದೂರದೃಷ್ಟಿಯ ಕೊರತೆಯಿಂದ ಮಳೆಗಾಲದಲ್ಲಿ ಕೋಡಿ ಬೀಳುವುದನ್ನು ಕಣ್ತುಂಬಿಕೊಳ್ಳಬಹುದೇ ಹೊರತು ಬೇರೆನು ನೋಡಲು ಸಿಗುವುದಿಲ್ಲ. ಇಲ್ಲೊಂದು ಸಾಕಾನೆ ಶಿಬಿರ ಆರಂಭಿಸುವ ಯೋಜನೆಯನ್ನು ಅರಣ್ಯ ಇಲಾಖೆ ಹಾಕಿಕೊಂಡಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಅದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ’ ಎಂದು ಗಿರಿಜನ ವಿವಿಧೀದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್‌.ಕೆ.ಚಂದ್ರು ಹೇಳುತ್ತಾರೆ.

ರೈತರಲ್ಲಿ ಹರ್ಷ: ನಿರಂತರವಾಗಿ ಸುರಿದ ಮಳೆಗೆ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು