ಮಂಗಳವಾರ, ಫೆಬ್ರವರಿ 7, 2023
27 °C
ಕಲ್ಲುಬಾಣೆಯ ಬದ್ರಿಯಾ ಶಾಲೆಯಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮ

ಮಕ್ಕಳ ಸಂತೆ: ಮಕ್ಕಳೇ ವರ್ತಕರು, ಪೋಷಕರೇ ಗ್ರಾಹಕರು

ಹೇಮಂತ್ ಎಂ.ಎನ್. Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ನಿತ್ಯ ಪಠ್ಯದಲ್ಲಿನ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅಂದು ವರ್ತಕರಾಗಿ ಬದಲಾಗಿದ್ದರು. ಇವರಿಗೆ ಪೋಷಕರು ಹಾಗೂ ನಿತ್ಯ ಪಾಠ ಮಾಡುತ್ತಿದ್ದ ಶಿಕ್ಷಕರೇ ಗ್ರಾಹಕರಾಗಿದ್ದರು.

ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆಯ ಬದ್ರಿಯಾ ಶಾಲೆಯ ಆವರಣ ಒಂದು ದಿನದ ಮಟ್ಟಿಗೆ ಅಕ್ಷರಶಃ ಸಂತೆಯಾಗಿ ಪರಿವರ್ತನೆಯಾಗಿತ್ತು. ಶಾಲೆಯ ಮಕ್ಕಳಿಗಾಗಿಯೇ ಈಚೆಗೆ ಮಕ್ಕಳ ಸಂತೆಯನ್ನು ಹಮ್ಮಿಕೊಂಡಿದ್ದು ಗಮನ ಸೆಳೆಯಿತು.

ಶಾಲೆಯ ಮಕ್ಕಳೆಲ್ಲಾ ತರಕಾರಿ ಸೊಪ್ಪು ಸೇರಿದಂತೆ ವಿವಿಧ ಬಗೆಯ ವಿಶಿಷ್ಠ ಹಾಗೂ ಅಷ್ಟೇ ರುಚಿಕರವಾದ ಖಾದ್ಯಗಳ ಮಾರಾಟ ಮಾಡುವ ವರ್ತಕರಾಗಿದ್ದರು. ಮಕ್ಕಳ ಸಂತೆಯ ಗ್ರಾಹಕರಾಗಿದ್ದ ಪೋಷಕರು ‘ನಾ ಮುಂದು, ತಾ ಮುಂದು’ ಎಂಬಂತೆ ಖರೀದಿಯಲ್ಲಿ ತೊಡಗಿದ್ದರು.

ತಾಜಾ ಸೊಪ್ಪು, ಮನೆಯಲ್ಲಿ ಬೆಳಸಿದ ತರಕಾರಿ, ಹಣ್ಣುಗಳು, ಮಕ್ಕಳಿಂದಲೇ ತಯಾರಿಸಲಾದ ಐಸ್‌ಕ್ರೀಂಗಳು, ಬೋಂಡ, ಬಜ್ಜಿ, ಫ್ರೂಟ್ ಸಲಾಡ್‌ ಮಾರಾಟದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಸಿಕೊಂಡಿರುವುದು ಕಂಡು ಬಂತು. ಮಕ್ಕಳಲ್ಲಿ ಕಂಡು ಬಂದ ಸ್ಪರ್ಧಾತ್ಮಕ ಮನೋಭಾವ ಗ್ರಾಹಕರ ಗಮನ ಸೆಳೆಯಿತು.

ಮಕ್ಕಳಲ್ಲಿ ಕುಶಲತೆ, ಸಂವಹನ ಕಲೆ, ವ್ಯವಹಾರಿಕ ಜ್ಞಾನ, ಸಾಮಾಜಿಕ ಒಡನಾಟದ ಕೌಶಲ್ಯ ವೃದ್ಧಿಯೊಂದಿಗೆ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಹಾಗೂ ಕಾರ್ಯದರ್ಶಿ ಜಾಫರ್ ಮಕ್ಕಳ ಸಂತೆಗೆ ಚಾಲನೆ ನೀಡಿದರು.

ಶಾಲೆಯ ಮುಖ್ಯಶಿಕ್ಷಕರಾದ ಮಹಾದೇವ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಲಾಭ ನಷ್ಟದ ಪರಿಚಯ, ವ್ಯವಹಾರ ಜ್ಞಾನ, ಸ್ವಚ್ಛತೆಯ ಪರಿಕಲ್ಪನೆ ಮೂಡಿಸಲು ಮಕ್ಕಳ ಸಂತೆ ಉಪಯುಕ್ತವಾಗುತ್ತದೆ. ಶಾಲೆಗಳಲ್ಲಿ ಆಟ- ಪಾಠದ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಮುಂಬರುವ ದಿನಗಳಲ್ಲಿ ತಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬುವುದು ಮಾಹಿತಿ ದೊರೆತಂತಾಗುತ್ತದೆ’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಷಫೀಕ್, ಆಡಳಿತ ಮಂಡಳಿಯ ಖಜಾಂಚಿ ಸಿರಾಜ್, ಸಿ.ಎಂ. ನೌಷಾದ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು ಶಾಲೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು