ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗುಗೊಳಿಸಿದ ಕಿರಿಯ ವಿಜ್ಞಾನಿಗಳು

ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್‌ ಶಾಲೆಯಲ್ಲಿ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲೆಯ 24 ತಂಡಗಳು ಭಾಗಿ
Last Updated 3 ಜನವರಿ 2023, 16:29 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಕ್ಕಳೇ ವಿಜ್ಞಾನಿಗಳಾಗಿ ಗಮನ ಸೆಳೆದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯಿಂದ ನಡೆದ ಈ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೂಡು ಮಂಗಳೂರು, ತೊರೆನೂರು ಹಾಗೂ 7ನೇ ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆ, ಕಿರಗೂರು ಹಿರಿಯ ಪ್ರಾಥಮಿಕ ಶಾಲೆ, ಗೌಡಳ್ಳಿ ಶಾಲೆ, ಗೌಡಳ್ಳಿ ಬಿಜಿಎಸ್‌ ಶಾಲೆ, ಎಎಲ್‌ಜಿ ಕ್ರೆಸೆಂಟ್ ಶಾಲೆ ಸೇರಿದಂತೆ ಇನ್ನಿತರ ಶಾಲೆಗಳ ಒಟ್ಟು 24 ತಂಡ ಭಾಗವಹಿಸಿದ್ದವು. ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರು.

7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ತಂಡವು ಆನೆ–ಮಾನವ ಸಂಘರ್ಷ ಕುರಿತು ಮಂಡಿಸಿದ ವೈಜ್ಞಾನಿಕ ಪ್ರಬಂಧ ಗಮನ ಸೆಳೆಯಿತು. ಮಕ್ಕಳೇ ಆನೆಯಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸಮೀಕ್ಷೆ ಮಾಡಿ, ಅದರ ನಿವಾರಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿ, ಜನರು ಈ ಸಂಘರ್ಷ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬ ವಿಚಾರ ಕುರಿತು ಸುದೀರ್ಘವಾಗಿ ಪ್ರಬಂಧ ಮಂಡಿಸಿದರು.

ಇದರೊಂದಿಗೆ ಇತರ ಶಾಲೆಗಳ ಮಕ್ಕಳು ಪ್ಲಾಸ್ಟಿಕ್ ಹಾವಳಿ, ಮಣ್ಣಿನ ಆರೋಗ್ಯ, ಕೊಡಗಿನಲ್ಲಿ ಭತ್ತದ ಕೃಷಿ ಇಳಿಮುಖವಾಗುತ್ತಿರುವುದು ಏಕೆ ಮೊದಲಾದ ಪ್ರಚಲಿತ ವಿಷಯಗಳನ್ನು ಕುರಿತು ವೈಜ್ಞಾನಿಕ ಪ್ರಬಂಧಗಳನ್ನು ಪ್ರಸ್ತುತಪಡಿಸಿದರು.

‘ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳು ಇದಾಗಿದ್ದವು.

ಜಿಲ್ಲಾಧಿಕಾರಿ ಬಿ.ಸಿ.ಸತೀಶ್‌ ಸಮಾವೇಶಕ್ಕೆ ಚಾಲನೆ ನೀಡಿದರು.

ವಿಜ್ಞಾನ ಸಮಾವೇಶದ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಡಿಡಿಪಿಐ ಸಿ.ರಂಗಧಾಮಯ್ಯ, ಶಾಲೆಯ ಕಾರ್ಯದರ್ಶಿ ಜಿ.ಎಚ್.ಮಹಮ್ಮದ್ ಹನೀಫ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲರಾದ ಜಾಯ್ಸ್ ವಿನಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT