ಗುರುವಾರ , ಫೆಬ್ರವರಿ 27, 2020
19 °C
ಸಮಸ್ಯೆ ಸುಳಿಯಲ್ಲಿ ಸೋಮವಾರಪೇಟೆಯ ವೆಂಕಟೇಶ್ವರ ಬ್ಲಾಕ್ ನಿವಾಸಿಗಳು

ಕೊಡಗು | ಸೊಳ್ಳೆ ಉತ್ಪಾದನೆ ತಾಣ, ನಿವಾಸಿಗಳ ಗೋಳು

ಲೋಕೇಶ್ ಡಿ.ಪಿ. Updated:

ಅಕ್ಷರ ಗಾತ್ರ : | |

prajavani

ಸೋಮವಾರಪೇಟೆ: ಇಲ್ಲಿನ ವೆಂಕಟೇಶ್ವರ ಬ್ಲಾಕ್‌ನ ನಿವಾಸಿಗಳು, ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಈ ಬಡಾವಣೆಯ ನಿವಾಸಿಗಳು ಗೋಳು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಇನ್ನೇನು ಬೇಸಿಗೆ ಬಿಸಿ ಕಾಡಲಿದ್ದು, ಜನರು ಸೊಳ್ಳೆಗಳ ಉತ್ಪಾದನೆ ತಾಣಗಳ ನಡುವೆಯೇ ಬದುಕು ಸಾಗಿಸುವ ಸ್ಥಿತಿಯಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ನಿವಾಸಿಗಳಿರುವ ಇಲ್ಲಿ 280 ಮತಗಳಿದ್ದು, ಕೇವಲ ಮತಕ್ಕಾಗಿ ಮಾತ್ರ ಇಲ್ಲಿನವರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ನೋವು ಸ್ಥಳೀಯರದ್ದು.

ಚರಂಡಿಗಳನ್ನು ನಿರ್ಮಿಸಲಾಗಿದ್ದರೂ, ನೀರು ಸರಾಗವಾಗಿ ಹರಿಯದ ಕಾರಣ ಗಲೀಜು ತುಂಬಿಕೊಂಡಿದೆ. ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ. ವಿದ್ಯುತ್ ಕಂಬಗಳಲ್ಲಿ ಕೇವಲ ನಾಮಕಾವಸ್ಥೆಗೆ ಮಾತ್ರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸರಿಯಾಗಿ ಯಾವುದೇ ದೀಪಗಳು ಉರಿಯುತ್ತಿಲ್ಲ. ಕುಡಿಯುವ ನೀರು ಸರಬರಾಜಿಗೆ ಪ್ರತ್ಯೇಕ ಕೊಳವೆ ಬಾವಿಯಿದೆ. ಈ ಹಿಂದೆ ದಿನಂಪ್ರತಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡು ದಿನಗಳಿಗೊಮ್ಮೆ ನೀಡಲಾಗುತ್ತಿದೆ. ಎಲ್ಲೆಡೆ ಗುಂಡಿ ಬಿದ್ದ ರಸ್ತೆಗಳು ಸಂಚರಿಸಲು ತೊಂದರೆ. ಮಾಡಿದ ಕಾಮಗಾರಿಗಳು ಕಳಪೆ ಕಾಮಗಾರಿಯಿಂದ ಮಾಡಿದ ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಒಟ್ಟಿನಲ್ಲಿ ಇಲ್ಲಿಯ ಜನರು ಸಮಸ್ಯೆಗಳೊಂದಿಗೆ ಬದುಕು ಕಾಣುವಂತಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಕೋಟ್ಯಂತರ ಹಣವನ್ನು ವ್ಯಯಿಸಲಾಗುತ್ತಿದೆ. ಆದರೆ, ಇದುವರೆಗೂ ಅಭಿವೃದ್ಧಿ ಕಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.

ಕೇವಲ ಜನರ ಕಣ್ಣೊರೆಸುವ ಕೆಲಸ ಮಾಡಲಾಗುತ್ತಿದೆ. ಈ ವಾರ್ಡ್‌ನಿಂದ ಆಯ್ಕೆಯಾಗಿ ಹೋದ ಹೆಚ್ಚಿನ ಸದಸ್ಯರು ಇಲ್ಲಿನವರ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಸರಿಯಾಗಿ ಸ್ಪಂದಿಸದಿರುವುದು ಸಮಸ್ಯೆ ಜೀವಂತವಾಗಿ ಉಳಿಯಲು ಕಾರಣವಾಗಿದೆ ಎಂದು ಜನರು ದೂರುತ್ತಾರೆ.

ಕಳೆದ 20 ವರ್ಷಗಳಿಂದ ಸರಿಯಾಗಿ ಯಾವುದೇ ಕಾಮಗಾರಿಯಾಗಿಲ್ಲ. ಇಲ್ಲಿಗೆ ಲಕ್ಷಾಂತರ ಹಣ ಬಂದರೂ, ಕಳಪೆ ಕಾಮಗಾರಿಯಿಂದ ನಮ್ಮ ಬಳಕೆಗೆ ಸಿಗುತ್ತಿಲ್ಲ. ದೇವಾಲಯದ ಬಳಿಯಲ್ಲಿ 11 ಕೆ.ವಿ ಪರಿವರ್ತಕವನ್ನು ಅಳವಡಿಸಲಾಗಿದೆ. ಇದರ ಲೈನ್ ನಮ್ಮ ಮನೆಯ ಮೇಲೆ ಹಾದು ಹೋಗಿದೆ. ಇದರ ಉಪಯೋಗ ಕೇವಲ ರೈಸ್ ಮಿಲ್‌ನವರಿಗೆ ಮಾತ್ರ ಸಿಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಗ್ರೌಂಡ್ ಆಗುತ್ತಿದ್ದು, ಇದರಿಂದ ಸಾಕಷ್ಟು ಭಾರಿ ಸ್ಥಳೀಯರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ. ಒಂದೆರಡು ಭಾರಿ ವಿದ್ಯುತ್ ಲೈನ್ ತುಂಡಾಗಿ ರಸ್ತೆಯ ಮೇಲೆ ಬಿದ್ದಿತ್ತು. ಅಲ್ಲದೇ, ಈ ಲೈನ್ ಹಾದು ಹೋಗಿರುವ ವಿದ್ಯುತ್ ಕಂಬಗಳು ಜೀರ್ಣಾವಸ್ಥೆ ತಲುಪಿದ್ದು, ಯಾವಾಗಬೇಕಾದರೂ ಮನೆಯ ಮೇಲೆ ಉರುಳಬಹುದಾಗಿದ್ದು, ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಸಂಬಂಧಿಸಿದವರು ಪರಿಹರಿಸಬೇಕಾಗಿದೆ ಎಂದು ನಿವಾಸಿ ಸ್ಥಳೀಯರು ಆಗ್ರಹಿಸಿದರು.

ಇಲ್ಲಿನ ಚರಂಡಿಗಳಿಗೆ ಸ್ಲಾಬ್ ಅಳವಡಿಸದೆ, ರಾತ್ರಿ ಸಮಯದಲ್ಲಿ ತೊಂದರೆಯಾಗುತ್ತಿದೆ. ಮಕ್ಕಳು ಹಾಗೂ ವಯೋವೃದ್ಧರು ಇದರಲ್ಲಿ ಬಿದ್ದಿದ್ದಾರೆ. ಇದಕ್ಕೆ ಸ್ಲಾಬ್ ಅಳವಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನವರು ದೂರುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು