ಶುಕ್ರವಾರ, ಫೆಬ್ರವರಿ 28, 2020
19 °C
ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಬಾಳುಗೋಡಿನಲ್ಲಿ ಗುಡಿಸಲು ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಒಂದು ತಿಂಗಳಿನಿಂದ ಸ್ವಂತ ಸೂರಿಗಾಗಿ ಆಗ್ರಹಿಸಿ ಸಮೀಪದ ಬಾಳುಗೋಡು ಗ್ರಾಮದ ಸರ್ಕಾರಿ ಭೂಮಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಟುಂಬಗಳು ನಿರ್ಮಿಸಿದ್ದ ಗುಡಿಸಲುಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.

ಬಾಳುಗೋಡು ಗ್ರಾಮದ ಸರ್ವೆ ನಂ. 337/1ರಲ್ಲಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ವಿರಾಜಪೇಟೆ ಪಟ್ಟಣ ವ್ಯಾಪ್ತಿಯ ಸುಮಾರು 71 ಕುಟುಂಬಗಳು ಗುಡಿಸಲು ನಿರ್ಮಿಸಿ ಸ್ವಂತ ಸೂರಿಗಾಗಿ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದವು. ಬುಧವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಿ ಭೂಮಿ ಒತ್ತುವರಿ ಸರಿಯಲ್ಲ ಎಂದು ಹೇಳಿ ಗುಡಿಸಲು ತೆರವುಗೊಳಿಸಲು ಮುಂದಾದರು. ಆದರೆ, ಇದಕ್ಕೆ ಪ್ರತಿಭಟನಕಾರರು ವಿರೋಧ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಮುಂದಿನ 15 ದಿನಗಳ ಒಳಗಾಗಿ ನೈಜ ಸೂರು ರಹಿತರನ್ನು ಗುರುತಿಸಿ ಪ್ರಸ್ತುತ ಸ್ಥಳದಲ್ಲಿಯೇ ನಿವೇಶನ ಒದಗಿಸುವ ಭರವಸೆ ನೀಡಿದರು. ಜತೆಗೆ, ಸರ್ಕಾರಿ ಭೂಮಿಯ ಅತಿಕ್ರಮಣ ಸರಿಯಲ್ಲವಾದ್ದರಿಂದ ಗುಡಿಸಲು ತೆರವುಗೊಳಿಸಬೇಕೆಂದು ಮನವಿ ಮಾಡಿದರು.

ಇದರಿಂದಾಗಿ ಪ್ರತಿಭಟನಕಾರರು ಒಲ್ಲದ ಮನಸ್ಸಿನಿಂದ ಗುಡಿಸಲು ತೆರವುಗೊಳಿಸಲು ಒಪ್ಪಿಗೆ ನೀಡಿದರು. ಆದರೆ, ಮುಂದಿನ 15 ದಿನಗಳ ಗಡುವಿನ ಅವಧಿಯಲ್ಲಿ ಅಹೋರಾತ್ರಿ ಧರಣಿಯನ್ನು ಗುಡಿಸಲು ನಿರ್ಮಿಸದೇ ಸ್ಥಳದಲ್ಲಿಯೇ ನಡೆಸುವುದಾಗಿ ತಿಳಿಸಿದರು.

ಬಳಿಕ ಸ್ಥಳದಲ್ಲಿ ನಿರ್ಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಗುಡಿಸಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಯಿತು. ಪ್ರತಿಭಟನಕಾರರು ಗುಡಿಸಲುಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಗುಡಿಸಲು ನಿರ್ಮಾಣಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡರು. ಜತೆಗೆ, ಇದೇ ಸಂದರ್ಭದಲ್ಲಿ ಸರ್ವೆ ಇಲಾಖೆಯ ಅಧಿಕಾರಿಗಳು ಸ್ಥಳದ ಸರ್ವೆ ಕಾರ್ಯವನ್ನು ನಡೆಸಿದರು.

ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷದ ಪಳಂಗಪ್ಪ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ತಹಶೀಲ್ದಾರ್ ಜವರೇಗೌಡ ಪ್ರತಿಭಟನಾಕಾರರ ಜೊತೆ ಮಾತನಾಡಿದರು

ಪ್ರತಿಭಟನಕಾರರ ಪರವಾಗಿ ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಮೊಣ್ಣಪ್ಪ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಿಲ್ಲಾ ಜಾಗೃತ ಸಮಿತಿಯ ಸದಸ್ಯ ಪಳನಿ ಪ್ರಕಾಶ್, ವಸತಿರಹಿತ ಕಾರ್ಮಿಕ ಸಂಘದ ರಾಜ್ಯ ಸಂಚಾಲಕ ಹೇಮಂತ್ ಸುಖ್‌ದೇವ್ ಇದ್ದರು. ಸ್ಥಳದಲ್ಲಿ ಪೊಲೀಸ್‌ ಬಿಸಿ ಬಂದೋಬಸ್ತ್‌ ಹಾಕಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)