ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಉಳಿಸುವಲ್ಲಿ ರಕ್ಷಕರ ಪಾತ್ರ ಮುಖ್ಯ

ಅರಣ್ಯ ರಕ್ಷಕರ ತರಬೇತಿ ಶಿಬಿರ ಸಮಾರೋಪ
Last Updated 29 ಜೂನ್ 2018, 11:36 IST
ಅಕ್ಷರ ಗಾತ್ರ

ಕುಶಾಲನಗರ: ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸುವಲ್ಲಿ ಅರಣ್ಯ ರಕ್ಷಕರ ಪಾತ್ರ ತುಂಬ ಮಹತ್ವದ್ದಾಗಿದೆ ಎಂದು ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಂಜುನಾಥ್ ಹೇಳಿದರು.

ಇಲ್ಲಿನ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅರಣ್ಯ ರಕ್ಷಕರ 88ನೇ ತಂಡದ ಬುನಾದಿ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯ ರಕ್ಷಕರು ಗಸ್ತು ಮತ್ತು ನಕ್ಷೆಯನ್ನು ಸಿದ್ಧಪಡಿಸಿಕೊಂಡು ಬೆಂಕಿ ಬೀಳದಂತೆ ಎಚ್ಚರ ವಹಿಸಿದರೆ ಬಹುಪಾಲು ಅರಣ್ಯ ನಿರ್ವಹಣೆ ಮಾಡಿದಂತೆ ಆಗುವುದು ಎಂದರು.

ಸಾರ್ವಜನಿಕರು ಹಾಗೂ ಅರಣ್ಯದಂಚಿನ ಜನರೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡು, ಪ್ರಾಮಾಣಿಕ ಸೇವೆಯೊಂದಿಗೆ ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಆರ್. ರವಿಶಂಕರ್ ಮಾತನಾಡಿ, ಅರಣ್ಯ ರಕ್ಷಕರು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಹಾಗೂ ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.

ಖಾಸಗಿ ಕ್ಷೇತ್ರದಲ್ಲೂ ಕೆಲಸ ತೆಗೆದುಕೊಳ್ಳುವುದು ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ಸಿಕ್ಕಿರುವುದು ನಿಮ್ಮ ಅದೃಷ್ಟ. ಪ್ರಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಅರಣ್ಯ ತರಬೇತಿ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ವಿವಿಧ ವಿಭಾಗದಿಂದ 54 ಅರಣ್ಯ ರಕ್ಷಕರು ತರಬೇತಿಗೆ ಹಾಜರಾಗಿದ್ದು, 9 ತಿಂಗಳಲ್ಲಿ ಪಾಠ–ಪ್ರವಚನಗಳೊಂದಿಗೆ ದೈಹಿಕ ಮತ್ತು ಮನೋಬಲ ಹೆಚ್ಚಿಸುವ ಶಾರೀರಿಕ ತರಬೇತಿ ನೀಡಲಾಗಿದೆ. 13 ಜಿಲ್ಲೆಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ ಎಂದರು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಿಬಿರಾರ್ಥಿಗಳಿಗೆ ಬಹುಮಾನ ಹಾಗೂ ಜಿಲ್ಲಾ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಕೆ.ಜೀವನ್‌ಕುಮಾರ್ ಪ್ರಮಾಣ ಪತ್ರ ವಿತರಿಸಿದರು.

ಮಡಿಕೇರಿ ವಿಭಾಗದ ಎಸಿಎಫ್ ಕೆ.ಎ.ನೆಹರೂ, ದಯಾನಂದ, ವಿರಾಜಪೇಟೆ ವಿಭಾಗದ ಎಸಿಎಫ್ ರೋಷಿಣಿ, ಆನೆಕಾಡು ವಿಭಾಗದ ಆರ್‌ಎಫ್ಒ ಮೇದಪ್ಪ, ತರಬೇತಿ ಕೇಂದ್ರದ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಜಿ.ನಾಯಕ್, ವಿನೂತ ಉಪಸ್ಥಿತರಿದ್ದರು.

ಶಿಬಿರಾರ್ಥಿ ನಿಂಗರಾಜ್ ದಾಸ್ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಬಸವರಾಜ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಕ ಪಥಸಂಚಲನ: ಕಾರ್ಯಕ್ರಮದ ಮೊದಲಿಗೆ ಅರಣ್ಯ ತರಬೇತಿ ಕೇಂದ್ರದ ಮುಂಭಾಗ ಏರ್ಪಡಿಸಿದ್ದ ಪಥಸಂಚಲನದಲ್ಲಿ ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಗೌರವ ವಂದನೆ ಸ್ವೀಕರಿಸಿದರು. ಅರಣ್ಯ ರಕ್ಷಕರು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT